ನಮ್ಮ ದೇಶದಲ್ಲಿ ಬೇಸಾದ ಬೆಳೆಗಳಲ್ಲಿ ರೋಗ ಬಾಧೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ್ಷಕ್ಕೆ ೬೦೦೦ ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ ಹಣದ ಖರ್ಚು ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೇ ಮೊರೆಹೋಗುವುದು ಹೆಚ್ಚು ಸೂಕ್ತವೆಂಬುದು ಅರಿವಾಗುತ್ತದೆ ನಮ್ಮ ದೇಶದಲ್ಲಿ ಸುಮಾರು ಶೇಕಡಾ ೬೦ ಬೇಸಾಯ ಆಧಾರಿತ ಕುಟುಂಬಗಳಿವೆ; ಪ್ರಪಂಚದಲ್ಲಿನ ರೈತರಲ್ಲಿ ಶೇಕಡ ೨೫ ರಷ್ಟು. ೧೯೬೦ ದಶಕದ ನಂತರ ಆಹಾರ ಬೆಳೆಯುವ ಗತಿಯೇ ಬದಲಾಗಿದೆ. ಕಡಿಮೆ ಕಾಲದಲ್ಲಿ ಹೆಚ್ಚು ಬೆಳೆ [...]