LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತ್ಯ

ಡಾ|| ಯು.ಆರ್.ಅನಂತಮೂರ್ತಿ

ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ ಡಾ.ಯು.ಆರ್. ಅನಂತ ಮೂರ್ತಿ ಅವರು ಸೃಜನಶೀಲ ಲೇಖಕರಾಗಿ, ಚಿಂತಕರಾಗಿ, ವೃತ್ತಿಶೀಲ ಅಧ್ಯಾಪಕರಾಗಿ, ವಿಶ್ವವಿದ್ಯಾಲಯದ ಕುಲಪತಿಯಾಗಿ, ಕನ್ನಡ ನಾಡು-ನುಡಿ, ಸಂಸ್ಕೃತಿ ಸಂಬಂಧಗಳ ಪದಾಧಿಕಾರಿಯಾಗಿ, ಪ್ರತಿನಿಧಿಯಗಿ, ಸಲಹೆಗಾರರಾಗಿ ನಾಡಿನ ಮಹತ್ತ್ವದ ವ್ಯಕ್ತಿಯಾಗಿದ್ದಾರೆ.
ಡಾ|| ಯು.ಆರ್.ಅನಂತ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿತಾಲ್ಲೂಕಿನ ಮೇಳಿಗೆಯಲ್ಲಿ ೧೯೩೨ರ ಡಿಸೆಂಬರ್ ೨೧ರಂದು ಜನಿಸಿದರು. ಶ್ರೀಯುತರು ಮೇಳಿಗೆ, ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಮೈಸೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ., ಪದವಿಯನ್ನು, ನಂತರ ೧೯೬೬ರಲ್ಲಿ ಪಿಹೆಚ್.ಡಿ., ಪದವಿಯನ್ನು ಪಡೆದರು.
ಡಾ.ಯು.ಆರ್.ಅನಂತ ಮೂರ್ತಿ ಅವರು ೧೯೫೬ರಲ್ಲಿ ಹಾಸನದ ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಿ ಸೇರಿದರು. ನಂತರ ಮೈಸೂರಿನ ಮಹಾರಾಜ ಕಾಲೇಜು, ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಕಾಲೇಜಿನಲ್ಲಿ ಕೆಲಸ ಮಾಡಿ, ನಂತರ ಮೈಸೂರು ವಿಶ್ವವಿದ್ಯಾಲಯ ಆಂಗ್ಲ ವಿಭಾಗಕ್ಕೆ ಸೇರಿ, ಅಲ್ಲಿ ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ೧೯೮೭ರಿಂದ ೯೧ರವರೆಗೆ ಕುಲಪತಿಗಳಾಗಿ ಸೇವೆ ಸಲ್ಲಿಸಿದರು.
ಶ್ರೀಯತರು ನ್ಯಾಷನಲ್ ಬುಕ್ ಟ್ರಸ್ಟ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪುರಸ್ಕಾರ, ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಿಮಾಚಲ ಪ್ರದೇಶ ಸರ್ಕಾರದ ಶಿಖರ ಸನ್ಮಾನ್ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ ಮೊದಲಾದ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಶ್ರೀಯುತರು ತುಮಕೂರಿನಲ್ಲಿ ನಡೆದ ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವಕ್ಕೂ ಪಾತ್ರರಾಗಿದ್ದಾರೆ.
ತಮ್ಮದೇ ಆದ ವಿಭಿನ್ನ ಶೈಲಿಯಿಂದ ಸಾಹಿತ್ಯ ಲೋಕದಲ್ಲಿ ಎಲ್ಲರ ಗಮನ ಸೆಳೆದಿರುವ ಇವರ ಲೇಖನಿಯಿಂದ ‘ಎಂದೆಂದೂ ಮುಗಿಯದ ಕಥೆ’, ‘ಪ್ರಶ್ನೆ’, ‘ಮೌನಿ’, ‘ಆಕಾಶ ಮತ್ತು ಬೆಕ್ಕು’. ‘ಸೂರ್ಯನ ಕುದುರೆ’, ಕಥಾ ಸಂಕಲನಗಳು; ‘ಸಂಸ್ಕಾರ’, ‘ಭಾರತೀಪುರ’, ‘ಅವಸ್ಥೆ’, ‘ಭವ’, ‘ದಿವ್ಯ’, ಎಂಬ ಕಾದಂಬರಿಗಳು; ‘ಪ್ರಜ್ಞೆ ಮತ್ತು ಪರಿಸರ’, ‘ಸನ್ನಿವೇಷ’, ‘ಸಮಕ್ಷಮ’, ‘ಪೂರ್ವಾಪರ’, ‘ಬೆತ್ತಲೆ’, ‘ಪೂಜೆ ಏಕೆ ಕೂಡದು’ ಎಂಬ ವಿಮರ್ಶಾ ಕೃತಿಗಳು; ‘ಹದಿನೈದು ಪದ್ಯಗಳು’, ‘ಅಜ್ಜನ ಹೆಗಲ ಸುಕ್ಕುಗಳು’, ‘ಮಿಥುನ’ ಎಂಬ ಕವನ ಸಂಕಲನಗಳು; ‘ಆವಾಹನೆ’ ಒಂದು ನಾಟಕ ಕರತಿ ಮೊದಲಾದ ಮೌಲಿಕ ಕೃತಿಗಳು ಹೊರಬಂದಿರುತ್ತವೆ.
ಕನ್ನಡ ನಾಡು –ನುಡಿ, ಸಂಸ್ಕೃತಿಗಳ ಬೆಳವಣಿಗೆಯಲ್ಲಿ ಪದ್ಮಭೂಷಣ ಡಾ.ಯು.ಆರ್.ಅನಂತ ಮೂರ್ತಿಯವರ ಕೊಡುಗೆ ಅನನ್ಯವಾದುದು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *