LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ವಿಜ್ಞಾನ

ಪ್ರೊ.ಯು.ಆರ್.ರಾವ್

ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಗೆ ಸ್ವೋಪಜ್ಞ ಕೊಡುಗೆಯನ್ನು ನೀಡಿದ ಅಂತರಾಷ್ಟ್ರೀಯ ಮಟ್ಟದ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಉಡುಪಿ ರಾಮಚಂದ್ರರಾವ್.
೧೯೩೨ರ ಮಾರ್ಚ್ ೧೦ರಂದು ಉಡುಪಿ ತಾಲ್ಲೂಕಿನ ಮಾರ್ಪಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಪ್ರೊ.ಯು.ಆರ್.ರಾವ್ ಅವರು ಉಡುಪಿ ಮತ್ತು ಅನಂತಪುರಗಳಲ್ಲಿ ವಿದ್ಯಾಭ್ಯಾಸಗಳನ್ನು ನಡೆಸಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಭೌತವಿಜ್ಞಾನದಲ್ಲಿ ಎಂ.ಎಸ್ಸಿ. ಪದವಿ ಪಡೆದರು.ವಿಶ್ವಕಿರಣ ವಿಜ್ಞಾನಿಯಾಗಿ ಡಾ. ವಿಕ್ರಮ್ ಸಾರಾಬಾಯಿಯವರ ಮಾರ್ಗದರ್ಶನದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದ ಪ್ರೊ.ರಾವ್ ಅವರು ಸೌರ ವಿಶ್ವಕಿರಣದ ಮೂಲತತ್ವಗಳ ಬಗ್ಗೆ ಮತ್ತು ಗ್ರಹಗಳ ನಡುವಣ ಅವಕಾಶದ ವಿದ್ಯುತ್ಕಾಂತ ಸ್ಥಿತಿ ಕುರಿತಂತೆ ಬೆಳಕು ಚೆಲ್ಲಿದರು. ಬಾಹ್ಯಾಕಾಶ ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸುವ ದಿಶೆಯಲ್ಲಿ ತಮ್ಮ ಸಂಶೋಧನೆಯನ್ನು ಮುಂದುವರೆಸಿದ ಪ್ರೊ.ರಾವ್ ಅವರು ಉಪಗ್ರಹ ತಂತ್ರಜ್ಞಾನವನ್ನು ಭಾರತದಲ್ಲಿ ನೆಲೆಗೊಳಿಸಿ, ಆರ್ಯಭಟ, ಭಾಸ್ಕರ, ಆಪಲ್, ರೋಹಿಣಿ, ಇನ್ಸಾಟ್-1 ಮತ್ತು ಇನ್ಸಾಟ್-2 ಮೊದಲಾದ ಉಪಗ್ರಹಳನ್ನು ವಿನ್ಯಾಸಗೊಳಿಸಿ, ರೂಪಿಸಿ ಉಡಾವಣೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳಾಗಿ ಹಾಗೂ ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪ್ರೊ.ಯು.ಆರ್.ರಾವ್ ಅವರು ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ೧೯೯೨ರಲ್ಲಿ ಎ.ಎಸ್.ಎಲ್.ವಿ.ರಾಕೆಟನ್ನು ಯಶಸ್ವಿಯಾಗಿ ಉಡಾಯಿಸಿದರು.
ಬಾಹ್ಯಾಕಾಶ ತಂತ್ರಜ್ಞಾನವನ್ನು ಸಂಪರ್ಕ ಮತ್ತು ನೈಸರ್ಗಿಕ ಸಂಪನ್ಮೂಲಗಳ ದೂರಗ್ರಹಣಕ್ಕೆ ವ್ಯಾಪಕವಾಗಿ ಬಳಸಿದ ಕೀರ್ತಿ ಪ್ರೊ.ಯು.ಆರ್.ರಾವ್ ಅವರಿಗೆ ಸಲ್ಲುತ್ತದೆ.ಸುಮಾರು 300ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಲೇಖನಗಳನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿರುವ ಡಾ.ಯು.ಆರ್.ರಾವ್ ಅವರು ಭಾರತೀಯ ವಿಜ್ಞಾನಗಳ ಅಕಾಡೆಮಿ ಆಫ್ ಸೈನ್ಸಸ್ನ ಚುನಾಯಿತ ಫೆಲೋ ಆಗಿ, ಅಂತರರಾಷ್ಟ್ರೀಯ ಆಸ್ಟ್ರೋನಾಟಿಕಲ್ ಫೆಡರೇಷನ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಪ್ರೊ.ಯು.ಆರ್.ರಾವ್ ಅವರ ಅತ್ಯುನ್ನತ ಸಿದ್ಧಿ-ಸಾಧನೆಗಳಿಗೆ ಸಂದಿರುವ ಪ್ರಶಸ್ತಿಗಳು ಹಲವಾರು. ನಾಸಾದ ಸಾಧಕ ಪ್ರಶಸ್ತಿ, ಶಾಂತಿ ಸ್ವರೂಪ ಭಟ್ನಾಗರ್ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಜವಾಹರಲಾಲ್ ನೆಹರು ಪ್ರಶಸ್ತಿ, ನಾಡೋಜ ಪ್ರಶಸ್ತಿ, ವಿಕ್ರಮ್ ಸಾರಾಬಾಯಿ ಪ್ರಶಸ್ತಿಗಳು ಅವರಿಗೆ ಸಂದಿರುವ ಪ್ರಮುಖ ಪ್ರಶಸ್ತಿಗಳು. ಸುಮಾರು ೧೫ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವ ಪ್ರೊ.ಯು.ಆರ್.ರಾವ್ ಅವರು ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು.
ಪ್ರಸ್ತುತ ಶ್ರೀಯುತರು ಭಾರತ ಸರ್ಕಾರದ ‘ಪ್ರಸಾರ ಭಾರತಿ’ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *