LOADING

ಹುಡುಕಲು ಟೈಪ್ ಮಾಡಿ

ಜಾನಪದ ಮನೆಯಂಗಳದಲ್ಲಿ ಮಾತುಕತೆ

ಡಾ|| ಎಚ್.ಎಲ್.ನಾಗೇಗೌಡ

ಕನ್ನಡ ಹೆಸರಾಂತ ಲೇಖಕರು, ಜಾನಪದ ತಜ್ಞರು ಹಾಗೂ ದಕ್ಷ ಆಡಳಿತಗಾರರು ಶ್ರೀ ಎಚ್.ಎಲ್ ನಾಗೇಗೌಡ ಅವರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ದೊಡ್ಡಮನೆ ಕುಟುಂಬದಲ್ಲಿ ೧೯೧೫ರ ಫೆಬ್ರವರಿ ೧೧ರಂದು ಜನಿಸಿದರು.
ತಮ್ಮ ವಿದ್ಯಾಭ್ಯಾಸವನ್ನು ಕ್ರಮವಾಗಿ ನಾಗತಿಹಳ್ಳಿ ಚೆನ್ನರಾಯಪಟ್ಟಣ ಹಾಗೂ ಚನ್ನಪಟ್ಟಣಗಳಲ್ಲಿ ನಡೆಸಿ, ಮೈಸೂರಿನಲ್ಲಿ ಬಿ.ಎಸ್ಸಿ., ಪದವಿಯನ್ನೂ ಹಾಗೂ ಪೂನಾದಲ್ಲಿ ಎಲ್ಎಲ್.ಬಿ., ಪದವಿಯನ್ನು ಪಡೆದರು. ಅಂದಿನ ಎಂ.ಸಿ.ಎಸ್., ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಪ್ರೊಬೇಷನರ್ ಆಗಿ ಸರ್ಕಾರಿ ಸೇವೆಗೆ ಸೇರಿದ ಶ್ರೀ ಎಚ್.ಎಲ್ ನಾಗೇಗೌಡ ಅವರು ೧೯೬೧ರಲ್ಲಿ ಐ.ಎ.ಎಸ್., ಶ್ರೇಣಿಗೆ ಸೇರ್ಪಡೆಯಾಗಿ ಜಿಲ್ಲಾಧಿಕಾರಿಯಾಗಿ, ಕಾರ್ಮಿಕ ಆಯುಕ್ತರಾಗಿ, ಸರ್ವೆ ಇಲಾಖೆಯ ಮುಖ್ಯಾಧಿಕಾರಿಯಾಗಿ, ಮುಜರಾಯಿ ಆಯುಕ್ತರಾಗಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ವಿವಿಧ ಹುದ್ದೆಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ್ದಾರೆ.
ಮುಖ್ಯವಾಗಿ ಆರಂಭದಿಂದಲೂ ಜಾನಪದ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಶ್ರೀ ಎಚ್.ಎಲ್.ನಾಗೇಗೌಡ ಅವರು ತಮಗೆ ಸಾರ್ವಜನಿಕ ಸನ್ಮಾನದಿಂದ ಬಂದ ಹಣದಿಂದ ೧೯೭೯ರಲ್ಲಿ ಕರ್ನಾಟಕ ಜಾನಪದ ಟ್ರಸ್ಟ್ನ್ನು ಸ್ಥಾಪಿಸಿದರು.ಜಾನಪದ ಸಾಹಿತ್ಯಕ್ಕೆ ಮೀಸಲಾದ ಜಾನಪದ ಜಗತ್ತು ತ್ರೈಮಾಸಿಕವನ್ನು ಹೊರತಂದರು.ನಂತರ ತಮ್ಮ ಬಹುಕಾಲದ ಕನಸಾಗಿದ್ದ ಬೃಹತ್ತಾದ, ವಿಸ್ತಾರವಾದ, ಆಕರ್ಷಕವಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ‘ಜಾನಪದ ಲೋಕ’’ವನ್ನು ರಾಮನಗರದ ಬಳಿ ಹೆದ್ದಾರಿ ಬದಿಯಲ್ಲಿ ಸ್ಥಾಪಿಸಿದರು.ಇಂದು ಅದನ್ನು ಏಷ್ಯಾ ಖಂಡದಲ್ಲೇ ಅಪರೂಪದ ಒಂದು ಅಮೂಲ್ಯ ಜಾನಪದ ಕಣಜ ಎಂದೇ ಹೇಳಬೇಕು.
ಸ್ವಶಕ್ತಿಯಿಂದ ಉನ್ನತಿಗೇರಿದ ಶ್ರೀಯುತರ ಅಗಣ್ಯ ಸೇವೆಯನ್ನು ಗುರುತಿಸಿ ಅರಸಿ ಬಂದ ಗೌರವ ಪ್ರಶಸ್ತಿಗಳು ಹಲವಾರು. ಅಖಿಲ ಭಾರತ ೬೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯತ್ವ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪದವಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮೊದಲಾದವು ಮುಖ್ಯವಾದವುಗಳು.
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಗೆ ತೊಡಗಿದ ಶ್ರೀ ನಾಗೇಗೌಡರು ಕಾವ್ಯ, ಕತೆ, ಕಾದಂಬರಿ, ಲೇಖನ, ಪ್ರವಾಸಕಥನ, ಜಾನಪದ ಸಂಗ್ರಹ, ವಿಮರ್ಶೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಈವರೆಗೆ ಸುಮಾರು ೫೦ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ನಾನಾಗುವೆ ಗೀಜಗನ ಹಕ್ಕಿ’ (ಕವನಗಳು), ನನ್ನೂರು (ಗ್ರಾಮೀಣ ಚಿತ್ರ), ಸೋಬಾನೆ ಚಿಕ್ಕಮ್ಮನ ಪದಗಳು, ಬೆಟ್ಟದಿಂದ ಬಟ್ಟಲಿಗೆ, ದೊಡ್ಡಮನೆ(ಕಾದಂಬರಿ), ಸೊನ್ನೆಯಿಂದ ಸೊನ್ನೆಗೆ(ಕಾದಂಬರಿ), ಭೂಮಿಗೆ ಬಂದ ಗಂಧರ್ವ (ಕಾದಂಬರಿ), ಕಂಡು ಕೇಳಿದ ಕಥೆಗಳು, ನಾ ಕಂಡ ಪ್ರಪಂಚ (ಪ್ರವಾಸ ಕಥನ), ಪ್ರವಾಸಿ ಕಂಡ ಇಂಡಿಯಾ (7 ಸಂಪುಟಗಳು) ಮೊದಲಾದವು ಪ್ರಮುಖ ಕೃತಿಗಳು.
ಎಂಭತ್ತಾರು ವಸಂತಗಳನ್ನು ಪೂರೈಸಿದರೂ ಎಂದಿಗೂ ಲವಲವಿಕೆಯಿಂದ ಕ್ರಿಯಾಶೀಲರಾಗಿ ಶ್ರಮಿಸುತ್ತಿರುವ ಶ್ರೀ ಎಚ್.ಎಲ್.ನಾಗೇಗೌಡ ಅವರು ಜಾನಪದ ವಿಶ್ವಕೋಶವೆಂದೇ ಹೆಸರಾದ ಬಹುಮುಖ ಪ್ರತಿಭೆಯ ಅಪರೂಪದ ಮಹಾನ್ ಜಾನಪದ ಶಕ್ತಿ-ವ್ಯಕ್ತಿ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *