LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಲಲಿತಕಲಾ ವಿಮರ್ಶಕರು

ಡಿ.ಕೆ. ಚೌಟ

ಉದ್ಯಮಿ, ಲೇಖಕ, ಕಲಾವಿದ, ರಂಗಕರ್ಮಿ ಹೀಗೆ ವೈವಿಧ್ಯಮಯ ಸೃಜನಶೀಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ದರ್ಭೆ ಕೃಷ್ಣಾನಂದ ಚೌಟ ಅವರು ಡಿ.ಕೆ.ಚೌಟ ಎಂದೇ ಕಲಾವಲಯದಲ್ಲಿ ಜನಪ್ರಿಯರು.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಊರಾದ ಮಂಜೇಶ್ವರದ ಬಳಿಯ ಮೀಯಪದವಿನಲ್ಲಿ ಮೂಲತಃ ಕೃಷಿಕ ಕುಟುಂಬದ ನಾರಾಯಣ ಚೌಟ ಮತ್ತು ಮೋಹಿನಿ ಚೌಟ ದಂಪತಿಗಳ ಸುಪುತ್ರರಾಗಿ ಜನಿಸಿದ ಕೃಷ್ಣಾನಂದರು, ಮಂಜೇಶ್ವರದಲ್ಲಿ ಅಕ್ಷರಾಭ್ಯಾಸ ನಡೆಯಿಸಿ, ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪದವೀಧರರಾದರು. ಜ್ಞಾನದಾಹವನ್ನು ಇಂಗಿಸುವ ಸದಾಶಯದಿಂದ ಮುಂಬೈ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪೂರೈಸಿದರು.
ಶಿಕ್ಷಣದ ನಂತರ ವಿದೇಶಗಳಿಗೆ ತೆರಳಿ ಅಲ್ಲಿನ ನೆಲದಲ್ಲಿ ನೆಲೆ ನಿಂತು ಉದ್ಯಮದಲ್ಲಿ ತೊಡಗಿದೆ ಚೌಟ ಅವರು ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಪಶ್ಚಿಮ ಆಫ್ರಿಕಾದ ಘಾನಾ ಮತ್ತು ನೈಜೀರಿಯಾಗಳಲ್ಲಿ ವ್ಯಾಪಾರ ವಹಿವಾಟು ನಡೆಸಿದರು. ಭಾರತಕ್ಕೆ ಮರಳಿದ ನಂತರ ರಫ್ತು ವ್ಯವಹಾರಗಳಲ್ಲಿ ಸಹ ತೊಡಗಿಸಿಕೊಂಡಿದ್ದ ಅವರು ತಮ್ಮ ಪವರ್ಗೇರ್ ಸಂಸ್ಥೆಯ ಮೂಲಕ ಅಮೆರಿಕಾಗೆ ವಿದ್ಯುತ್ ಸಾಮಗ್ರಿ ರಫ್ತಿಗಾಗಿ ವಿಶೇಷ ಪ್ರಶಸ್ತಿಗಳನ್ನು ಪಡೆದರು.
ಬಾಲ್ಯದಲ್ಲಿಯೇ ರಂಗಭೂಮಿಯಲ್ಲಿ ತೊಡಗಿಕೊಂಡ ಕೃಷ್ಣಾನಂದ ಚೌಟರು ಮುಂಬಯಿಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಯಕ್ಷಗಾನ ಪ್ರದರ್ಶನ ನಡೆಸುವ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ತೋಡಿದವರು. ಮಿತ್ತೆಬೈಲ್ ಯಮುನಕ್ಕೆ ಎಂಬ ಕೃತಿಯನ್ನು ತುಳು ಭಾಷೆಯಲ್ಲಿ ರಚಿಸುವ ಮೂಲಕ ತುಳು ಭಾಷೆಯ ಸಾಹಿತ್ಯಕ ಸಾಧ್ಯತೆಗಳಿಗೆ ಹೊಸ ಆಯಾಮವನ್ನು ತಂದುಕೊಟ್ಟವರು. ಈ ಕೃತಿ ಸಾಹಿತ್ಯ ಲೋಕದ ಹಿರಿಯರಿಂದ ಮಾನ್ಯತೆ ಪಡೆದಿದ್ದು, ಕನ್ನಡ ಭಾಷೆಗೂ ಅನುವಾದಗೊಂಡಿದೆ. ಇಂಗ್ಲಿಷ್ ಭಾಷೆಗೂ ಅನುವಾದಗೊಳ್ಳುತ್ತಿದೆ. ಅಷ್ಟೇ ಅಲ್ಲದೆ ರಂಗರೂಪಕವಾಗಿಯೂ ಜನಮಾನ್ಯತೆ ಪಡೆದಿದೆ. ಚೌಟ ಅವರು ಬರೆಹದಲ್ಲಿ ತೊಡಗಿಸಿಕೊಂಡು ಕರಿಯವಜ್ಜೆರನ ಕತೆ, ಪಿಲಿಪತ್ತಿಗಡಸ್, ಪತ್ತ್ಪಜ್ಜೆಲು, ಧರ್ಮೆತ್ತಿಮಾಯೆ, ಉರಿಉಷ್ಣದ ಮಾಯೆ ಮತ್ತು ಮಿತ್ತೆಬೈಲ್ ಯಮುನಕ್ಕೆ ಕೃತಿಗಳನ್ನು ತುಳುಸಾಹಿತ್ಯದಲ್ಲಿ ರಚಿಸಿದವರು. ಇವರ ಪಿಲಿಪತ್ತಿಗಡಸ್ ಕೃತಿಯು ಇನ್ನೂರು ರಂಗರೂಪಕಗಳಾಗಿದೆ.
ವೃತ್ತಿ ಬದುಕಿನಿಂದ ನಿವೃತ್ತರಾದ ಚೌಟರು, ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾದರು. ಬೆಂಗಳೂರಿನ ಬಂಟರ ಸಂಘದ ಅಧ್ಯಕ್ಷರಾಗಿ ಬಂಟರ ಸಮುದಾಯದ ಪ್ರಥಮ ವಿಶ್ವ ಸಮ್ಮೇಳನ ನಡೆಸುವ ಮೂಲಕ ಪ್ರಶಂಸೆಗೆ ಪಾತ್ರರಾದರು. ಬೆಂಗಳೂರಿನ ತುಳುಕೂಟದ ರಜತಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ತುಳು ಸಮ್ಮೇಳನ ನಡೆಸಿಕೊಡುವಲ್ಲಿ ಚೌಟರದು ಪ್ರಧಾನ ಭೂಮಿಕೆ. ಇವರ ಪುತ್ರ ಸಂದೀಪ ಚೌಟ ಅವರು ಸಂಗೀತ ಲೋಕದಲ್ಲಿ ತಮ್ಮ ವಿಶಿಷ್ಟತೆ ಮೆರೆದಿದ್ದರೆ, ಪುತ್ರಿ ಪ್ರಜ್ಞಾ ಅತ್ಯಂತ ವಿಶಿಷ್ಟವಾಗಿ ಆನೆಗಳ ಸಹವಾಸದಲ್ಲಿ ನೈಸರ್ಗಿಕ ಬದುಕನ್ನು ರೂಪಿಸುವ ಮೂಲಕ ಪ್ರಕೃತಿ ತಳಿ ವಿಜ್ಞಾನಿಯಾಗಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ಮುನ್ನಡೆಸುವ ಮೂಲಕ ಜಾಗತಿಕ ನೆಲೆಗೆ ಅದನ್ನು ವಿಸ್ತರಿಸಿದ ಹಿರಿಮೆ ಚೌಟರದು. ಅತ್ಯಂತ ವಿನೂತನವಾಗಿ ಚಿತ್ರ ಕಲಾವಿದರನ್ನು ಮತ್ತು ಚಿತ್ರಕಲಾಕೃತಿಗಳನ್ನು ಸುಲಭವಾಗಿ ಜನರಿಗೆ ಪರಿಚಯಿಸಿ ತಲುಪಿಸುವ ಕ್ರಾಂತಿಕಾರಿ ಚಟುವಟಿಕೆ ಎಂದೇ ಕಲಾಲೋಕದಲ್ಲಿ ಮಾನ್ಯವಾದ ಚಿತ್ರಸಂತೆಯನ್ನು ಹುಟ್ಟುಹಾಕಿ ಸತತವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಡಿ.ಕೆ.ಚೌಟ ಅವರದು.
ಸಮಗ್ರ ಕೃಷಿಯಲ್ಲಿ ತೊಡಗಿರುವ ಚೌಟ ಅವರು ಸುಮಾರು ೧೦೦ ಎಕರೆ ಪ್ರದೇಶದಲ್ಲಿ ತೆಂಗು ಅಡಿಕೆ, ಬಾಳೆ, ಭತ್ತ, ರಬ್ಬರ್, ಮುಂತಾದವನ್ನು ನೈಸರ್ಗಿಕವಾಗಿ ಬೆಳೆಯಿಸುವ ಪ್ರಾಯೋಗಿಕ ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ರೂಪಿಸುವ ಕಾರ್ಯಗಳಲ್ಲಿ ಸಹ ತಮ್ಮ ಅನುಭವ ಧಾರೆ ಎರಯುತ್ತಿದ್ದಾರೆ. ಮೀಯಪದವಿನ ಚೌಟರ ಚಾವಡಿ ಟ್ರಸ್ಟ್ ಅಧ್ಯಕ್ಷರಾಗಿ, ಬೆಂಗಳೂರು ರಂಗಚೇತನ ಮತ್ತು ರಂಗನಿರಂತರ ಸಂಸ್ಥೆಗಳ ಅಧ್ಯಕ್ಷರಾಗಿ, ರಾಷ್ಟ್ರಕವಿ ಮಂಜೇಶ್ವರ ಗಓವಿಂದ ಪೈ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾಗಿ, ಚಿತ್ರಕಲಾ ಪರಿಷತ್ತಿನ ಟ್ರಸ್ಟಿಯಾಗಿ ಸಕ್ರಿಯರಾಗಿದ್ದಾರೆ.
ಡಿ.ಕೆ.ಚೌಟ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಪಣಿಯಾಡಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳು ದೊರೆತಿವೆ. ಅಷ್ಟೇ ಅಲ್ಲದೆ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಅವರ ಮುಡಿಗೇರಿವೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *