LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ಟಿ.ಆರ್‌.ಮಹಾದೇವಯ್ಯ

ಕನ್ನಡ ನಿಘಂಟು ಮತ್ತು ಜಾನಪದ ಕೋಶಗಳೂ ಸೇರಿದಂತೆ ಹಲವು ಮಹತ್ವದ ಸಂಪಾದನಾ ಕಾರ್ಯಗಳಲ್ಲಿ ಮತ್ತು ಸಾಹಿತ್ಯ ಸೃಜನೆಯ ತಮ್ಮ ಛಾಪನ್ನು ಮೂಡಿಸಿರುವ ಎಲೆಮರೆಯ ಹಿರಿಯ ಸಾಹಿತಿಗಳು ಟಿ.ಆರ್.ಮಹದೇವಯ್ಯ ಅವರು.
ತ್ರಿವಿಧ ದಾಸೋಹ ಕ್ಷೇತ್ರ ತುಮಕೂರಿನ ರಂಗಭೂಮಿಯ ದಿಗ್ಗಜ ಗುಬ್ಬಿ ವೀರಣ್ಣ ಅವರ ಊರಾದ ಗುಬ್ಬಿಯ ತಿಪ್ಪೂರಿನಲ್ಲಿ ೦೬.೧೨.೧೯೩೪ರಲ್ಲಿ ಜನಿಸಿದ ಟಿ.ಆರ್.ಮಹದೇವಯ್ಯ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆಲ್ಲದರಲ್ಲಿಯೂ ಸಮಾನ ಪ್ರಭುತ್ವ ಹೊಂದಿರುವ ಕನ್ನಡ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವೀಧರರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪನ ವೃತ್ತಿ ಜೀವನ ಆರಂಭಿಸಿದ ಮಹದೇವಯ್ಯ ಅವರು ಕೆ.ಎಲ್.ಇ. ಸಂಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನುಡಿ ಸೇವಾಸಕ್ತರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿದ್ದ ಮಹದೇವಯ್ಯ ಅವರು ಯೋಜನೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಕನ್ನಡ ಜಾನಪದ ಕೋಶದ ಸಂಪಾದಕರಾಗಿ, ಕಾನೂನು ಪದಕೋಶದ ಸಂಪಾದಕರಾಗಿ. ತ್ರಿಭಾಷಾ ವಚನ ಪದ ಸಂಪದದ ಸಂಪಾದಕರಾಗಿ ಇವರ ಕೊಡುಗೆ ಬಲು ಹಿರಿದು.
ಶ್ರೀ ಮಹದೇವಯ್ಯ ಅವರ ಸಾಹಿತ್ಯ ರಚನೆಯ ಹರಹು ಬಲು ವಿಸ್ತಾರವಾದದ್ದು. ಜೀವನಚರಿತ್ರೆ, ವಿಮರ್ಶೆ, ಚಿಂತನ ಸಾಹಿತ್ಯ, ಸಾಹಿತ್ಯ ಸಂಪಾದನೆ, ಅನುವಾದ ನಾಟಕ ಪ್ರಕಾರಗಳಲ್ಲಿ ಇವರ ಕೃಷಿ ಸಾಗಿದೆ. ವಿಶ್ವ ಮಾನವ ಬಸವಣ್ಣ ಕೃತಿಯನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚನೆ, ಶಾಂತಿನಾಥ ಕವಿ, ಮಲ್ಲಿಕಾರ್ಜುನ ಶಿವಯೋಗಿಗಳು, ಶಿವಯೋಗಿ ಸಿದ್ಧರಾಮ, ಅಲ್ಲಮಪ್ರಭು ಸೇರಿದಂತೆ ಹಲವು ಸಾಧಕರ ಜೀವನಚರಿತ್ರೆಗೆ ಇವರು ಕೈಗನ್ನಡಿ ಹಿಡಿದಿದ್ದಾರೆ.
ಸಾಹಿತ್ಯದ ವಸ್ತುನಿಷ್ಠ ಮೌಲ್ಯಮಾಪನಕ್ಕೆ ಹೆಸರಾದ ಮಹದೇವಯ್ಯ ಅವರು ತಮ್ಮ ವಿಮರ್ಶೆಯಲ್ಲಿ ಸಾಹಿತ್ಯ ಕೃತಿಯ ಸಾಧ್ಯತೆಗಳನ್ನು ವಿಮರ್ಶೆ ಮಾಡುವಲ್ಲಿ ಸಫಲರಾಗಿದ್ದಾರೆ. ಸಾಹಿತ್ಯ ಮಧು, ಶರಣ ಸೌರಭ, ವೀರಶೈವ ವಾಗ್ಗೇಯಕಾರರು, ಹರಿಹರ-ಬಸವಣ್ಣ, ಕಾಯಕ-ದಾಸೋಹ, ವಚನಗಳಲ್ಲಿ ಮಾನವೀಯ ಮೌಲ್ಯಗಳು ಸೇರಿದಂತೆ ಹಲವು ವಿಮರ್ಶಾ ಕೃತಿಗಳು ಓದುಗರಿಗೆ ವಿಷಯವಸ್ತುವಿನ ಸಾಹಿತ್ಯ ಒಳನೋಟಗಳನ್ನು ದೊರಕಿಸಿಕೊಡುತ್ತದೆ. ಇವರ ಮತ್ತೊಂದು ವೈಶಿಷ್ಟ್ಯವೆಂದರೆ ಚಿಂತನ ಸಾಹಿತ್ಯ ಸರಣಿ. ಈವರೆಗೆ ಸುಮಾರು ಎಂಟು ಕೃತಿಗಳನ್ನು ವಿವಿಧ ಚಿಂತನೆಗಳನ್ನು ತಮ್ಮ ಲೇಖನಿಯಿಂದ ಒಡಮೂಡಿಸಿದ್ದಾರೆ.
ಬಸವಣ್ಣನವರ ವಚನ ಸಂಗ್ರಹ, ಜೇಡರ ದಾಸಿಮಯ್ಯನ ವಚನ ಸಂಗ್ರಹ-ಸಟೀಕಾ ಕೃತಿ, ಸಿದ್ದಗಂಗಾಶ್ರೀ, ದಲಿತೋದಯ ಕೃತಿ ಎರಡು ಸಂಪುಟಗಳಲ್ಲಿ, ಬಸವಣ್ಣನವರ ಸಮಗ್ರ ವಚನಗಳು, ಜತ್ತಿಕಾವ್ಯಾಭಿನಂದನ ಕೃತಿಗಳು ಇವರ ಸಂಪಾದಕತ್ವದಲ್ಲಿ ಮೂಡಿಬಂದಕೃತಿ ರತ್ನಗಳು. ಐ.ಬಿ.ಎಚ್. ಪ್ರಕಾಶನದ ಸಚಿತ್ರ ಶಾಲಾ ನಿಘಂಟು ಇವರ ಸಂಪಾದಕತ್ವದಲ್ಲಿಯೇ ಮೂಡಿಬಂದ ಚಂದದ ಕೃತಿ.
ಪ್ರೌಢದೇವರಾಯ ನಾಟಕ, ಸರ್ವಾಚಾರ ಸಂಪದ ವೆಂಬ ಸಿದ್ದಾಂತ ಗ್ರಂಥ, ಬುದ್ಧ ಮತ್ತು ಬಸವ ಅನುವಾದ ಕೃತಿ, ಹೀಗೆ ಹಲವು ಪ್ರಕಾರಗಳಲ್ಲಿ ಅವಿಶ್ರಾಂತವಾಗಿ ದುಡಿಯುತ್ತಿರುವ ಮಹದೇವಯ್ಯ ಅವರನ್ನು ಅರಸಿ ಬಂದ ಮನ್ನಣೆಗಳು ಹಲವು. ಗುಬ್ಬಿತಾಲೂಕು ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ತುಮಕೂರು ಜಿಲ್ಲಾ ಉತ್ಸವದಲ್ಲಿ ಗೌರವ ಪುರಸ್ಕಾರ, ಸಿದ್ದಗಂಗಾ ಮಠದ ಸಿದ್ದಗಂಗಾ ಶಿವಕುಮಾರಶ್ರೀ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವ ಗೌರವ ಪುರಸ್ಕಾರಗಳು ಸಂದಿವೆ. ‘ಶರಣ ಸೌರಭ’ ಕೃತಿಗೆ ಕಾವ್ಯಾನಂದ ಪುರಸ್ಕಾರ, ಮಹದೇವಯ್ಯ ಷಷ್ಟ್ಯಬ್ಧಿ ಸ್ಮರಣ ಸಂಚಿಕೆ ‘ಸಾತ್ವಿಕ’ ಅವರ ಸಾಹಿತ್ಯ ಸಾಧನೆಗೆ ಸಂದ ಗೌರವಗಳು.
ಶ್ರೀ ಟಿ.ಆರ್.ಮಹದೇವಯ್ಯ ಅವರು ತಮ್ಮ ಅವಿಶ್ರಾಂತ ಸಾಹಿತ್ಯ ಸಾಧನೆಯ ಮೂಲಕ ಇಂದಿನ ತಲೆಮಾರಿಗೆ ಆದರ್ಶಪ್ರಾಯರಾಗಿದ್ದಾರೆ.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *