LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ಎಸ್.ದಿವಾಕರ್

ಸಣ್ಣಕತೆ, ಕಾವ್ಯ, ಪ್ರಬಂಧ, ವಿಮರ್ಶೆ, ಭಾಷಾಂತರ, ಸಂಪಾದನೆ, ಅಂಕಣ ಬರಹ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಕೈಗೊಂಡು ೩೦ಕ್ಕು ಹೆಚ್ಚು ಕೃತಿಗಳನ್ನು ರಚಿಸಿರುವ ಎಸ್.ದಿವಾಕರ್ ಅವರ ಬರೆವಣಿಗೆಯ ಹರಹು ಬಲು ವಿಸ್ತಾರವಾದದ್ದು. ಬೇಂದ್ರೆ ಮತ್ತು ಅಡಿಗರ ಬಗ್ಗೆ ಅತ್ಯಂತ ಅಧಿಕಾರಯುತವಾಗಿ ಮಾತನಾಡುವ ದಿವಾಕರ್ ಅವರು ಸಂಗೀತ ಕ್ಷೇತ್ರದಲ್ಲಿ ಹೊಂದಿರುವ ವಿಷಯ ತಜ್ಞತೆ ಕೂಡ ಬೆರಗು ಮೂಡಿಸುವಂತಹುದು.
ಎಸ್.ದಿವಾಕರ್ ಅವರು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ ಜನಿಸಿರುತ್ತಾರೆ. ದೇವನಹಳ್ಳಿ ಮತ್ತು ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸ ಕೈಗೊಂಡ ದಿವಾಕರ್ ಅವರು ಮುಂದೆ ವಿದ್ಯಾಭ್ಯಾಸಕ್ಕೆ ಹೊದದ್ದು ಕರ್ನಾಟಕದ ಸಾಹಿತ್ಯ ಕಾಶಿ ಎಂದೇ ಖ್ಯಾತವಾದ ಧಾರವಾಡಕ್ಕೆ. 1965ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಮೂಲಕ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದ ದಿವಾಕರ್ ಅವರನ್ನು ಪತ್ರಿಕೋದ್ಯಮ ಕೈ ಬೀಸಿ ಕರೆಯಿತು. ಶ್ರೀ ಮತಿ ಜಯಶ್ರೀ ಕಾಸರವಳ್ಳಿ ಅವರೊಂದಿಗೆ ವಿವಾಹವಾಗಿರುವ ದಿವಾಕರ್ ಇಬ್ಬರು ಮಕ್ಕಳೊಂದಿಗೆ ಸಂತೃಪ್ತ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ.
ವೃತ್ತಿಯಿಂದ ಪತ್ರಕರ್ತರಾದ ಅವರು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ, ಸಂಯುಕ್ತ ಕರ್ನಾಟಕ, ಮಲ್ಲಿಗೆ, ಸುಧಾ, ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಸಂಪಾದಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಕೆಲಸಮಾಡಿದರು; ೧೯೮೯ರಿಂದ ೨೦೦೫ರವರೆಗೆ ಚೆನ್ನೈಯಲ್ಲಿರುವ ಅಮೆರಿಕನ್ ಕಾನ್ಸುಲೇಟ್ನಲ್ಲಿ ಸಂಪಾದಕರಾಗಿದ್ದರು; ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆಯಲ್ಲಿ ಸಾಹಿತ್ಯ ಸಲಹೆಗಾರರಾಗಿ ಸಹ ಸೇವೆ ಸಲ್ಲಿಸಿರುತ್ತಾರೆ.
ಎಸ್.ದಿವಾಕರ್ ಅವರು ಅವರು ೨೦೦೨ರಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯ ಪ್ರತಿವರ್ಷವೂ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ದಿವಾಕರ್ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ‘Hundreds of Streets to the Palace of Lights’. ಕೃತಿಯೂ ೨೦೧೬ರಲ್ಲಿ ಅಖಿಲ ಭಾರತ ‘ಕ್ರಾಸ್ವರ್ಡ್ ಪ್ರಶಸ್ತಿ’ಗೆ ಆಯ್ಕೆ ಆಗಿತ್ತು.
ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ, ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ, ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ, ಒಂದೊಂದು ನೆನಪಿಗೂ ಒಂದೊಂದು ವಾಸನೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಸಮೂಹ ಮಾಧ್ಯಮಗಳು (ಸಮೀಕ್ಷೆ), ಪಂ. ಭೀಮಸೇನ ಜೋಶಿ (ಜೀವನ ಚಿತ್ರ) ಅವರ ಕೃತಿಗಳಾಗಿರುತ್ತವೆ.
ದಿವಾಕರ್ ಅವರ ಅನುವಾದದಲ್ಲಿ ಮೂಡಿದ ಕೃತಿಗಳಲ್ಲಿ ಕಥಾ ಜಗತ್ತು (ನೊಬೆಲ್ ಪ್ರಶಸ್ತಿ ವಿಜೇತ ಲೇಖಕರು ಬರೆದ ೫೦ ಕತೆಗಳ ಅನುವಾದ), ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು (ವಿವಿಧ ದೇಶಗಳ ಕತೆಗಳು), ಹಾರಿಕೊಂಡು ಹೋದವನು (ವಿವಿಧ ದೇಶಗಳ ಅತಿ ಸಣ್ಣಕತೆಗಳು), ಈ ಊರಿನಲ್ಲಿ ಕಳ್ಳರೇ ಇಲ್ಲ (ಗಾಬ್ರಿಯೇಲ್ ಗಾರ್ಸಿಯಾ ಮಾರ್ಕೆಸ್ನ ಕತೆಗಳು) ಪ್ರಮುಖವಾದವು. ಶತಮಾನದ ಸಣ್ಣ ಕತೆಗಳು, ಸಣ್ಣಕತೆ ೧೯೮೩, ಕನ್ನಡದ ಅತಿಸಣ್ಣ ಕತೆಗಳು, ಸಾಹಿತ್ಯ – ಕಲೆ, ನಾದದ ನವನೀತ (ಸಂಗೀತವನ್ನು ಕುರಿತ ಪ್ರಬಂಧಗಳು, ಕವಿತೆಗಳು, ಸಣ್ಣಕತೆಗಳು), ಬೆಸ್ಟ್ ಆಫ್ ಕೇಫ ಅವರು ಸಂಪಾದಿಸಿರುವ ಕೃತಿಗಳಾಗಿರುತ್ತವೆ.
ದಿವಾಕರ್ ಅವರನ್ನರಸಿ ಬಂದ ಪುರಸ್ಕಾರಗಳು ಹಲವು. ಇವುಗಳ ಪೈಕಿ ಪ್ರಮುಖವಾದವು ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಸೀನಿಯರ್ ಫೆಲೋಶಿಪ್, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ರೈಟರ್-ಇನ್-ರೆಸಿಡೆನ್ಸ್, ಅಯೋವಾ ವಿಶ್ವವಿದ್ಯಾಲಯ, ಯು.ಎಸ್.ಎ., ಅಖಿಲ ಭಾರತ ಕಥಾ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ, ಕೋಲ್ಕತಾದ ಅಖಿಲ ಭಾರತ ಹಿಂದೀ ಪುರಸ್ಕಾರ್ ಮುಂತಾದವುಗಳಾಗಿರುತ್ತವೆ.
ಇಂತಹ ಸಾಧಕರನ್ನು ಮನೆಯಂಗಳದ ಮಾತುಕತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದರಗಳೊಂದಿಗೆ ಅಹ್ವಾನಿಸಲಾಗಿದೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *