LOADING

ಹುಡುಕಲು ಟೈಪ್ ಮಾಡಿ

ಪತ್ರಕರ್ತರು ಮನೆಯಂಗಳದಲ್ಲಿ ಮಾತುಕತೆ

ನಾಗೇಶ್‌ ಹೆಗಡೆ

ಪರಿಸರದ ಕಾಳಜಿಯನ್ನು ಬರಿ ಮಾತಾಗಿಸದೆ ಕೃತಿಯ ಮೂಲಕ ಅನುಷ್ಠಾನ ಮಾಡುತ್ತ ಬಂದಿರುವ ಪರಿಸರವಾದಿ, ಡಾ|| ನಾಗೇಶ ಹೆಗಡೆ ಅವರು ಅಧಿಕೃತವಾಗಿ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಮಾತನಾಡಬಲ್ಲವರು.
೧೯೪೮ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಕ್ಕೆಮನೆಯಲ್ಲಿ ಜನಿಸಿದವರು. ಖರಗಪುರದ ಐಐಟಿಯಲ್ಲಿ ಭೂವಿಜ್ಞಾನದ ಎಂ.ಎಸ್ಸಿ ಪದವಿಯನ್ನು ಮತ್ತು ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನ ಎಂ.ಫಿಲ್ ಪದವಿಯನ್ನೂ ಪಡೆದ ಪರಿಸರ ವಿಜ್ಞಾನಿಗಳು. ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಪರಿಸರವಿಜ್ಞಾನ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರೂ ಮಾದ್ಯಮದ ಸೆಳೆತಕ್ಕೆ ಒಳಗಾದ ನಾಗೇಶ ಹೆಗಡೆ ಅವರು ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ೧೯೮೦ರಿಂದ ವೃತ್ತಿಜೀವನವನ್ನು ಆರಂಭಿಸಿದರು. ಗಗನಸಖಿಯೂ ಜೀವನಸಖಿಯೂ ಆದ ಶ್ರೀಮತಿ ರೇಖಾ ಅವರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.
ಸುಮಾರು ೨೬ ವರ್ಷಗಳ ಕಾಲ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಿದ ನಾಗೇಶ ಹೆಗಡೆ ಅವರು ವಿವಿಧ ವಿಷಯಗಳ ಬಗ್ಗೆ ಸಕಾಲಿಕ ಅಂಕಣ ಮತ್ತು ಲೇಖನಗಳು ಸರ್ಕಾರಗಳನ್ನು ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪ್ರೇರೇಪಿಸಿವೆ. ಪರಿಸರ ಕುರಿತ ಜಾಗೃತಿಗೆ ಮಾಗದರ್ಶಿಯಾದ ಹಲವು ವಿಷಯವಸ್ತುಗಳನ್ನು ಒದಗಿಸಿದೆ.
ವೃತ್ತಿಯಿಂದ ನಿವೃತ್ತರಾದ ನಂತರವೂ ಪ್ರವೃತ್ತಿಯಿಂದ ನಿವೃತ್ತರಾಗದ ನಾಗೇಶ ಹೆಗಡೆ ಅವರು ಪ್ರಜಾವಾಣಿಯಲ್ಲಿ ವಿಜ್ಞಾನ ವಿಶೇಷ ಅಂಕಣವನ್ನು ಕಳೆದ ೩೩ ವರ್ಷಗಳಿಂದಲೂ ನಿರಂತರವಾಗಿ ಬರೆಯುತ್ತಿದ್ದಾರೆ. ಇಷ್ಟು ದೀರ್ಘಕಾಲ ಒಂದು ಅಂಕಣ ಜನಪ್ರಿಯವಾಗಿ ಪತ್ರಿಕೆಯಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿರುವುದು ಈ ಪ್ರಕಾರಗಳಲ್ಲಿಯೇ ವಿಶೇಷ ಎನ್ನಬಹುದು.
ಪರಿಸರ ಸಂಬಂಧಿ ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಲು ಬ್ರೆಜಿಲ್, ಕೀನ್ಯಾ, ಮಲೇಶಿಯಾ, ಹಾಂಕಾಂಗ್, ಮುಂತಾದ ದೇಶಗಳ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುವುದೇ ಅಲ್ಲದೆ ರಿಯೋದಲ್ಲಿ ನಡೆದ ಪೃಥ್ವಿ ಶೃಂಗಸಭೆಯಲ್ಲಿ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಗೃತ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಹೆಗಡೆಯವರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಪ್ರೆಸ್ ಕ್ಲಬ್ ಪ್ರಶಸ್ತಿ, ಮಾಧ್ಯಮ ಅಕಾಡೆಮಿಯ ಜೀವಮಾನದ ಪ್ರಶಸ್ತಿ, ಶಿವರಾಮ ಕಾರಂತರ ಬಾಲವನ ಪ್ರಶಸ್ತಿ, ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಮನುಕುಲದ ರಕ್ಷಣೆಗೆ ಮಹತ್ವದ ದಿನಗಳು, ಸುರಿಹೊಂಡ ಭರತಯುಗ, ನಮ್ಮೊಳಗಿನ ಬ್ರಹ್ಮಾಂಡ, ಇರುವುದೊಂದೇ ಭೂಮಿ ಮುಷ್ಠಿಯಲ್ಲಿ ಮಿಲೆನಿಯಂ, ಅಭಿವೃದ್ಧಿಯ ಅಂಧಯುಗ, ನರಮಂಡಲ ಬ್ರಹ್ಮಾಂಡ, ಸೇರಿದಂತೆ ಹಲವು ಮೌಲ್ಯಯುತ ಕೃತಿಗಳನ್ನು ಬರೆದಿದ್ದಾರೆ.
ನಾಗೇಶ ಹೆಗಡೆ ಅವರು ಇಂದಿಗೂ ಪತ್ರಿಕೋದ್ಯಮ ಕಾಲೇಜಿನ ಸಂದರ್ಶಕ ಉಪನ್ಯಾಸಕರಾಗಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಸಂಪನ್ಮೂಲ ಮಾರ್ಗದರ್ಶಕರಾಗಿ ವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ. ಲೇಖಕ, ವಿಜ್ಞಾನ ಸಂವಹನಕಾರ, ಚಿತ್ರಕಲಾವಿದ, ಛಾಯಾಚಿತ್ರಗ್ರಾಹಕ ಹೀಗೇ ಬಹುಮುಖೀ ಆಯಾಮಗಳಲ್ಲಿ ಸಕ್ರಿಯರಾಗಿರುವ ನಾಗೇಶ ಹೆಗಡೆ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ಜ್ಞಾನಕೋಶದ ತಜ್ಞ ಸಲಹೆಗಾರರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *