LOADING

ಹುಡುಕಲು ಟೈಪ್ ಮಾಡಿ

ಪತ್ರಕರ್ತರು ಮನೆಯಂಗಳದಲ್ಲಿ ಮಾತುಕತೆ

ಗರುಡಗಿರಿ ನಾಗರಾಜ್‌

ನಾಡಿನ ಉದ್ದಗಲದ ಬಹುತೇಕ ಎಲ್ಲ ಕ್ಷೇತ್ರಗಳ ಸವಿವರ ಪರಿಚಯ ಉಳ್ಳ ಮತ್ತು ನಾಡಿನ ಎಲ್ಲ ಜನರ ಬದುಕು ಬವಣೆಗಳ ಬಗ್ಗೆ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಿದ ಮತ್ತು ಮನುಷ್ಯ ಸಂಬಂಧಗಳನ್ನು ಅತ್ಯಂತ ಆಪ್ತವಾಗಿ ನಿರ್ವಹಿಸುವ ಸ್ನೇಹಜೀವಿ ಪತ್ರಕರ್ತ ಗರುಡನಗಿರಿ ನಾಗರಾಜ್ ಅವರು.
ಬಾಲ್ಯದಲ್ಲಿಯೇ ಓದಿನ ಜೊತೆಗೆ ನಾಡಿನ ಸ್ವಾತಂತ್ರ್ಯಕ್ಕೂ ಹೋರಾಡಿದ ನಾಗರಾಜ್ ಅವರು ಮೈಸೂರು ಸ್ಥಾನದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಹೋರಾಡಿ ಜೈಲು ಶಿಕ್ಷೆ ಕೂಡ ಅನುಭವಿಸಿದವರು. ಕೃಷಿಕರಾಗಿ ತೆಂಗು ಬೆಳೆಗಾರರಾಗಿ, ಪ್ರಗತಿಕೃಷಿಗಾಗಿ ಕೃಷಿ ಇಲಾಖೆಯಿಂದ ಪ್ರಶಸ್ತಿ ಪಡೆದ ರೈತರೆಂಬುದು ಅವರ ಮಾಧ್ಯಮ ಬೇಸಾಯದ ನಡುವೆ ಪ್ರಚಾರಕ್ಕೆ ಬರದೆ ತೆರೆಯ ಮರೆಯಲ್ಲೇ ಉಳಿದು ಹೋದ ಸೋಜಿಗಗಳಲ್ಲೊಂದು.
ಆರ್ಯ ಸಮಾಜದಿಂದ ಪ್ರೇರಣೆ ಪಡೆದು, ದಲಿತ ಕೇರಿಯಿಂದ ಮಕ್ಕಳನ್ನು ಸ್ನಾನ ಮಾಡಿಸಿ ಅವರ ಶಿಕ್ಷಣಕ್ಕೆ ಪೂರಕವಾಗಿ ಶಾಲೆಗೆ ಕರೆದೊಯ್ಯತ್ತಿದ್ದ ಗರುಡನಗಿರಿ ಅವರು ಸ್ವಚ್ಛತೆ ಮತ್ತು ಶಿಕ್ಷಣಗಳೆರಡಕ್ಕೂ ಸಮಾನ ಆದ್ಯತೆ ಕೊಟ್ಟವರು. ಸದಾ ಕಿರಿಯ ವಯಸ್ಸಿನ ಉದಯೋನ್ಮುಖ ಪತ್ರಕರ್ತರಿಗೆ ಹೊಗಳಿಕೆಯ ಮತ್ತು ಪ್ರೋತ್ಸಾಹದ ಸವಿಮಾತುಗಳನ್ನುಣಿಸಿದ ಗಡುನಗಿರಿ ಅವರು ಪತ್ರಕರ್ತರಿಗೆ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದವರು.
೧೯೯೮ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗರುಡನಗಿರಿ ನಾಗರಾಜ್ ಅವರು ಅಕಾಡೆಮಿಯ ಕಾರ್ಯಶೈಲಿಗೆ ವಿನೂತನತೆಯನ್ನು ತಂದವರು. ಪತ್ರಕರ್ತರಿಗೆ ತರಬೇತಿಯಷ್ಟೇ ಅಲ್ಲದೆ, ವಾರ್ತಾ ಇಲಾಖೆಯ ವಾರ್ತಾಧಿಕಾರಿಗಳಿಗೂ ಸುದ್ದಿಗ್ರಹಿಕೆಯ ಮತ್ತು ಮಾಧ್ಯಮ ನಿರ್ವಹಣೆಯ ವಿಷಯಗಳೂ ಸೇರಿದಂತೆ ಹಲವು ವಿಷಯಗಳಲ್ಲಿ ತರಬೇತುಗೊಳಿಸಿದ ಶ್ರೇಯ ಇವರದು.
ಕರ್ನಾಟಕ ಪರಂಪರೆಯ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ನಾಗರಾಜ್ ಅವರು ಶಿಬಿರ ಮತ್ತು ವಿಚಾರ ಮಂಥನಗಳ ಮೂಲಕ ಕರ್ನಾಟಕ ಪರಂಪರೆಯ ಬಗ್ಗೆ ವಿಷಯ ಸಂಗ್ರಹಣೆ ಮಾಡಿ ಕರ್ನಾಟಕ ಪರಂಪರೆ ಎಂಬ ಕೃತಿಯನ್ನು ಪ್ರಕಟಿಸಿರುವುದು ಮನನೀಯ. ಅವರ ಅಧ್ಯಕ್ಷಾವಧಿಯಲ್ಲಿ ವಿಷಯ ಸರಣಿಗಳಲ್ಲಿ ಕೃತಿಮಾಲೆಗಳನ್ನು ಹೊರತಂದರು. ಸುಮಾರು ೧೮ ಪ್ರಕಟಣೆಗಳು ಇವರ ನೇತೃತ್ವದಲ್ಲಿ ಬೆಳಕು ಕಂಡವು.
ಕರ್ನಾಟಕದಲ್ಲಿ ಪ್ರಕಟವಾದ ಮೊದಲ ದಿನಪತ್ರಿಕೆ ಮಂಗಳೂರು ಸಮಾಚಾರ ಪ್ರಾರಂಭವಾದ ದಿನಾಂಕ: 0೧.0೭.೧೮೪೩ರ ಸ್ಮರಣೆಯಲ್ಲಿ ಪತ್ರಿಕಾ ದಿನಾಚರಣೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿ ಪತ್ರಕರ್ತರು, ಮಾಧ್ಯಮಗಳ ನೆರವಿನಿಂದ ಪ್ರತಿ ವರ್ಷ ಅರ್ಥಪೂರ್ಣವಾಗಿ ಆಯೋಜಿಸುವಲ್ಲಿ ಕಾರಣೀಭೂತರಾಗಿದ್ದಾರೆ ಗರುಡನಗಿರಿ ನಾಗರಾಜ.
ಇಪ್ಪತ್ತು ಸಾವಿರ ಹಳ್ಳಿಗಳನ್ನು ಸುತ್ತಿ ಅಲ್ಲಿನ ನೆಲಮೂಲದ ಸಮಸ್ಯೆಗಳನ್ನು ಹೆಕ್ಕಿ ತಂದು ಪರಿಹಾರ ಒದಗಿಸಿಕೊಟ್ಟವರು ಗರುಡನಗಿರಿ ನಾಗರಾಜ್ ಅವರು. ಖೋಟಾನೋಟು ಪ್ರಕರಣ, ವೇಶ್ಯಾವಾಟಿಕೆ ಜಾಲಕ್ಕೆ ರಾಜ್ಯದ ಯುವತಿಯರ ಅಪಹರಣ ಹೀಗೇ ಜನಪರ ವರದಿಗಳ ಮೂಲಕ ರಾಜಕಾರಣಿಗಳೇ ಇರಲಿ, ಪತ್ರಕರ್ತ ಮಿತ್ರರೇ ಇರಲಿ, ಕಪಟಿಗಳನ್ನು ಮುಚ್ಚುಮರೆ ಇಲ್ಲದೇ ಬಯಲಿಗಿಟ್ಟವರು. ಕನ್ನಡ ಪ್ರಭ ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲಿ ಮತ್ತು ಕರ್ಮವೀರ ಸಾಪ್ತಾಹಿಕದಲ್ಲಿ ಕಾರ್ಯ ನಿರ್ವಹಿಸಿರುವ ಇವರು ಅನೇಕ ಕೃತಿಗಳನ್ನು ಬರೆದಿದ್ದು, ಅಂಕಣಕಾರರಾಗಿ ಸಹ ಖ್ಯಾತಿ ಪಡೆದವರು.
ಗರುಡನಗಿರಿ ನಾಗರಾಜ ಅವರು ಹಾಜರಿರುವ ಪತ್ರಿಕಾಗೋಷ್ಠಿಗಳು ಯಾವುದೇ ಸಚಿವರಿಗೆ ಸವಾಲಿನಂತೆಯೇ ತೋರುವಷ್ಟು ನೇರವಂತಿಕೆಯ ಪತ್ರಕರ್ತರು. ಹಿಂದುಳಿದ ವರ್ಗದ ಹರಿಕಾರರೆಂದೇ ಖ್ಯಾತರಾದ ದೇವರಾಜ ಅರಸು ಅವರ ರಾಜಕೀಯ ಜೀವನದಲ್ಲಿ ನೈತಿಕ ಸ್ಥೈರ್ಯವನ್ನು ತುಂಬಿದವರು. ಪ್ರತಿಷ್ಠಿತ ಟಿಎಸ್ಸಾರ್ ಪ್ರಶಸ್ತಿಯೂ ಹಲವು ಗೌರವ ಪುರಸ್ಕಾರಗಳಿಗೆ ಭಾಜನರಾದವರು.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *