LOADING

ಹುಡುಕಲು ಟೈಪ್ ಮಾಡಿ

ಚಿತ್ರ ಕಲಾವಿದರು ಮನೆಯಂಗಳದಲ್ಲಿ ಮಾತುಕತೆ

ಪ.ಸ. ಕುಮಾರ್‌

ಪ.ಸಂಪತ್ಕುಮಾರ್ ಅವರು ಪ.ಸ.ಕುಮಾರ್ ಎಂದೇ ಜನಮಾನಸದಲ್ಲಿ ಪ್ರಸಿದ್ಧರು. ತಮ್ಮ ಚಿತ್ರಗಳ ಮೂಲಕ ಹಲವು ಪತ್ರಿಕೆ-ನಿಯತಕಾಲಿಕೆಗಳ ಕಾದಂಬರಿಗಳಿಗೆ, ಪುಸ್ತಕಗಳ ಮುಖಪುಟಗಳಿಗೆ ಮತ್ತು ಕಲಾಸಕ್ತರ ಮನೆಯ ಆವರಣದಲ್ಲಿ ಸುಂದರವಾಗಿ ಕಾಣುವ ಚಿತ್ರಕಲಾಕೃತಿಗಳ ಮೂಲಕ ಲಲಿತಕಲಾ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು.
೨೬ ಅಕ್ಟೋಬರ್ ೧೯೪೯ರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರೀ ಪರಶುರಾಮ್ ಮತ್ತು ಶ್ರೀಮತಿ ಧನಲಕ್ಷ್ಮಿ ದಂಪತಿಗಳ ಸುಪುತ್ರರಾಗಿ ಜನಿಸಿದ ಸಂಪತ್ಕುಮಾರ್ ಅವರು ಅತ್ಯಂತ ವಿಶಿಷ್ಟ ಪರಂಪರೆಯ ಕೊಂಡಿಯಾಗಿ ಅರಳಿ ನಿಂತವರು. ತಂದೆ ಅಕ್ಷರಜ್ಞಾನದ ಹಂಗಿಲ್ಲದ ಅಪ್ರತಿಮ ಕಲಾವಿದರು. ದೇವಾಲಯದ ದ್ವಾರ ಮತ್ತು ಪೀಠ ರಚನೆಯಲ್ಲಿ ಅತ್ಯಂತ ನೈಪುಣ್ಯತೆಯಿಂದ ಹೆಸರು ಮಾಡಿದ್ದ ಇವರು ದೇವಾಲಯ ಶಿಲ್ಪ ನಿರ್ಮಾಣದಲ್ಲಿ ಅತ್ಯಂತ ಬೇಡಿಕೆಯ ಕಲಾವಿದರು. ವಿಧಾನಸೌಧ ನಿರ್ಮಾಣದಲ್ಲಿಯೂ ಭಾಗಿಯಾಗಿ ಕೆಲವು ನಿರ್ಮಾಣ ಕಾಮಗಾರಿಗಳಲ್ಲಿ ತಮ್ಮ ನೈಪುಣ್ಯತೆಯನ್ನು ತೋರಿದವರು. ತಾಯಿ ಸ್ವತಃ ಚಿತ್ರಕಲಾವಿದೆ ಮತ್ತು ಆಗಿನ ಕಾಲದಲ್ಲಿಯೇ ಇಂಗ್ಲಿಷ್ ಕಾನ್ವೆಂಟಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಪೂರೈಸಿದವರು. ಹೀಗೆ ಕಲೆ ಮತ್ತು ಶಿಕ್ಷಣದ ವೈಶಿಷ್ಟ್ಯಪೂರ್ಣ ಕುಟುಂಬದ ನೆರಳಿನಲ್ಲಿ ಕಲೆ ಮತ್ತು ಅಕ್ಷರಜ್ಞಾನ ಪಡೆಯುತ್ತ ಬೆಳೆದವರು.
ಬೆಂಗಳೂರಿಗೆ ಆಗಮಿಸಿ, ಮೆಜೆಸ್ಟಿಕ್ ಸಮೀಪದ ಫಿಲೋಮಿನಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಶ್ರೀರಾಮಪುರ ಸರ್ಕಾರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ಆರ್ಯವಿದ್ಯಾಶಾಲೆಯಲ್ಲಿ ಪ್ರೌಢಶಿಕ್ಷಣ ಮತ್ತು ಗವರ್ನಮೆಂಟ್ ಆಟ್ರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದವರು.
ಕೆನ್ ಕಲಾಶಾಲೆಯಲ್ಲಿ ಶ್ರೀ ಆರ್.ಎಂ.ಹಡಪದ್ ಅವರ ಮಾರ್ಗದರ್ಶನದಲ್ಲಿ ಕಲಾಶಿಕ್ಷಣ ಪಡೆದು ಜೀವನೋಪಾಯಕ್ಕಾಗಿ ಪ್ರಜಾಮತ ಕಚೇರಿ ಸೇರಿದರೂ, ತಾಯಿಯ ಒತ್ತಾಸೆಯಿಂದ ಮತ್ತೆ ವಿಜಯಾ ಸಂಜೆ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕಾಗಿ ಸೇರ್ಪಡೆ. ಮತ್ತು ಬೆಂಗಳೂರು ವಿವಿಯಿಂದ ಬಿ.ಎ. ಪದವಿ. ನಂತರ ವಿವಾಹವಾಗಿ ಮೂರು ಮಕ್ಕಳೊಡನೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ನಿಯತಕಾಲಿಕೆಗಳಲ್ಲಿ ಪ್ರಕಟವಾದ ಹಲವು ಧಾರಾವಾಹಿಗಳಿಗೆ ಚಿತ್ರ ರಚನೆಯ ಮೂಲಕ ತಮ್ಮ ನೈಪುಣ್ಯತೆ ತೋರಿದವರು ಪ.ಸ. ಕುಮಾರ್. ಇವರ ರಚನೆಯ ಸಾವಿರಕ್ಕೂ ಹೆಚ್ಚು ಪುಸ್ತಕಗಳ ಮುಖಪುಟಗಳು ಜನಮನ ಗೆದ್ದು, ಆಸಕ್ತರ ಕಪಾಟು ಸೇರಿವೆ. ಪ್ರಜಾಮತದ ನಂತರ ಕನ್ನಡ ಪ್ರಭ ಪತ್ರಿಕೆಯಲ್ಲಿಯೂ ಮುಖ್ಯಕಲಾಕಾರರಾಗಿ ಸೇವೆ ಸಲ್ಲಿಸಿದ ಪ.ಸ.ಕುಮಾರ್ ಅವರು ಹಲವು ಕಾವ್ಯ ಮತ್ತು ಕತೆ-ಕಾದಂಬರಿಗಳಿಗೆ ಚಿತ್ರಗಳನ್ನು ರಚಿಸುವ ಮೂಲಕ ಅವುಗಳನ್ನು ಹೆಚ್ಚು ಆಪ್ತವಾಗಿಸಿದ್ದಾರೆ.
ಕಲಾ ವಿಮರ್ಶೆ ಕ್ಷೇತ್ರದಲ್ಲಿಯೂ ಶ್ರಮಿಸಿರುವ ಪ.ಸ.ಕುಮಾರ್ ಅವರು ಆರ್.ಎಂ.ಹಡಪದ್, ಎಂ.ಎಸ್.ಚಂದ್ರಶೇಖರ್, ಸಿ.ಚಂದ್ರಶೇಖರ್ ಸೇರಿದಂತೆ ಹಲವು ಸಾಧಕರ ಸಾಕ್ಷ್ಯಚಿತ್ರಗಳ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ನಾಗಾಭರಣ ಅವರ ಆಸ್ಫೋಟ, ಶಿಶುನಾಳ ಷರೀಫ, ಬರಗೂರು ರಾಮಚಂದ್ರಪ್ಪ ಅವರ ಬೆಂಕಿ, ಎಚ್.ಪಿ.ವಿಶ್ವನಾಥ್ ಅವರ ಪಂಚಮವೇದ, ಸುಂದರ ಕೃಷ್ಣ ಅರಸ್ ಅವರ ಚಕ್ರ ಚಿತ್ರಗಳು ಇವರ ಚಿತ್ರಚಿತ್ತಾರದ ಮೂಲಕ ಪ್ರಚಾರ ಕಂಡಿವೆ.
ಹಲವು ಪ್ರತಿಷ್ಠಿತ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿರುವ ಪ.ಸ.ಕುಮಾರ್ ಅವರು ಸಮೂಹ ಚಿತ್ರಕಲಾಕೃತಿ ಪ್ರದರ್ಶನಗಳಲ್ಲಿಯೂ ಭಾಗವಹಿಸಿದ್ದಾರೆ. ನ್ಯಾಷನಲ್ ಗ್ಯಾಲರಿ ಫಾರ್ ಮಾಡರ್ನ್ ಆರ್ಟ್ ಸೇರಿದಂತೆ ಹಲವು ಪ್ರತಿಷ್ಟಿತ ಕಲಾಶಿಬಿರಗಳ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಚಿತ್ರಕಲೆ ಮತ್ತು ಅಭಿವ್ಯಕ್ತಿಯ ಬಗ್ಗೆ ಹಲವು ಕಮ್ಮಟ-ಕಾರ್ಯಾಗಾರಗಳಲ್ಲಿ ಪ್ರಮುಖವಾಗಿ ಉಪನ್ಯಾಸ ನೀಡಿರುವ ಪ.ಸ.ಕುಮಾರ್ ಅವರು ಕಲಾಮೇಳ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಮೇಳಗಳ ಯಶಸ್ವಿ ಸಂಘಟನೆಯಲ್ಲಿ ಭಾಗಿಯಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಲಲಿತಕಲಾ ಅಕಾಡೆಮಿ, ಪ್ರೆಸ್ಕ್ಲಬ್ ಸಾಂಸ್ಕೃತಿಕ ಸಮಿತಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಸದಸ್ಯರಾಗಿ ತಮ್ಮ ಅನುಭವದ ಮೂಲಕ ಅವುಗಳನ್ನು ಶ್ರೀಮಂತಗೊಳಿಸಿದ್ದಾರೆ.
ಇವರ ಕಲಾಸೇವೆಯನ್ನು ಗುರುತಿಸಿ ಹಲವಾರು ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಅವುಗಳಲ್ಲಿ ಪ್ರಮುಖವಾದುವೆಂದರೆ, ಚಿತ್ರಕಲಾ ಪರಿಷತ್ತಿನ ಅಖಿಲಭಾರತೀಯ ಚಿತ್ರಕಲಾ ಪ್ರದರ್ಶನದಲ್ಲಿ ಕುಮಾರ್ ಅವರ ಚಿತ್ರಕಲಾಕೃತಿಗಳ ಪ್ರದರ್ಶನ, ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಕಲಾಪ್ರದರ್ಶನಗಳ ಗೌರವ ಸಂದಿವೆ. ಪ್ರತಿಷ್ಠಿತ ರಾಜ್ಯೋತ್ಸವ ಪುರಸ್ಕಾರ, ಪ್ರೆಸ್ಕ್ಲಬ್ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಪಿ.ಆರ್.ತಿಪ್ಪೇಸ್ವಾಮಿ ಪ್ರಶಸ್ತಿ, ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಪ.ಸ. ಕುಮಾರ್ ಅವರಿಗೆ ಸಂದಿವೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *