LOADING

ಹುಡುಕಲು ಟೈಪ್ ಮಾಡಿ

ಚಿತ್ರ ಕಲಾವಿದರು ಮನೆಯಂಗಳದಲ್ಲಿ ಮಾತುಕತೆ

ವೈಜನಾಥ ಬಿರಾದಾರ

ಕೆದರಿದ ಕೂದಲು, ಗುಳಿಬಿದ್ದ ಕಣ್ಣುಗಳು, ಒಡಲು ಬಡತನದ ಬಡಬಾನಲ. ದೈನ್ಯತೆಯೇ ಮೂರ್ತಿವೆತ್ತಂತ ನೋಟ-ಹೀಗಿದ್ದರೂ ತೆರೆಯ ಮೇಲೆ ಈ ಮುಖ ಕಂಡೊಡನೆ ಪ್ರೇಕ್ಷಕರ ಮುಖದಲ್ಲಿ ನಗೆ ಉಕ್ಕಿಸುವ ಬಗೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರದ ಅದ್ವಿತೀಯ ನಟ ವೈಜನಾಥ ಬಿರಾದಾರ್ ಅವರದು. ಈ ಬಗೆಯ ನಟನ ಪ್ರತಿಭೆ “ನನ್ನಪಾಡು ನನಗಿರಲು ನನ್ನ ಹಾಡನಷ್ಟೇ ಉಣಬಡಿಸುವೆನು ರಸಿಕ” ಎಂಬ ಕವಿನುಡಿಯ ರೂಪಕದಂತಿದೆ.
ಉತ್ತರ ಕರ್ನಾಟಕದ ಗಡಿ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ತೇಗಂಪುರದಲ್ಲಿ ಬಸಪ್ಪ ನಾಗಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಬಿರಾದಾರರು ಚಿಕ್ಕಂದಿನಲ್ಲಿಯೇ ನಟನೆಯ ಗೀಳನ್ನು ಅಂಟಿಸಿಕೊಂಡವರು. ಏಕಪಾತ್ರಾಭಿನಯ, ನಾಟಕ, ಸಿನಿಮಾ ಪಾತ್ರಗಳ ಅನುಕರಣೆ ಹೀಗೆ ಓದಿಗೆ ತಿಲಾಂಜಲಿಕೊಟ್ಟು ಧಾರವಾಡದ ಪಂಚಲಿಂಗೇಶ್ವರ ನಾಟಕ ಕಂಪನಿಗೆ ಸೇರ್ಪಡೆಯಾದರು. “ಬಸ್ ಹಮಾಲ್” ನಾಟಕದ ಮೂಲಕ ಬಣ್ಣ ಹಚ್ಚಿದ ಬಿರಾದಾರರು ಮುಂದೆ “ತಾಯಿಯ ಕರುಳು”, “ಮುದುಕನ ಮದುವೆ” ಹೀಗೆ ಒಂದಾದ ಮೇಲೊಂದರಂತೆ ನಾಟಕಗಳಲ್ಲಿ ಅಭಿನಯಿಸುತ್ತಾ ಜನಪ್ರಿಯರಾದರು. ತಮ್ಮ ಸಣಕಲು ದೇಹದ ವಿಶಿಷ್ಟ ಹಾವಭಾವದಿಂದಲೆ ಹಾಸ್ಯನಟರಾಗಿ ನಾಡಿನಾದ್ಯಂತ ಜನಮನ ಸೂರೆಗೊಂಡರು. ೧೯೭೦ರಲ್ಲಿ ಎಂ.ಎಸ್. ಸತ್ಯು ರವರ “ಬರ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ. ಹಾಸ್ಯನಟರ ಕೊರತೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗ ಬಿರಾದಾರರನ್ನು ತಟ್ಟನೆ ಸೆಳೆದುಕೊಂಡಿತು. ಕಳೆದ ೩೦ ವರ್ಷಗಳಲ್ಲಿ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಬಿರಾದಾರರು ಅತ್ಯಂತ ಬೇಡಿಕೆಯ ಪೋಷಕ ನಟರಾದರು.
ಚಲನಚಿತ್ರದಲ್ಲಿ ಅಪಾರ ಬೇಡಿಕೆಯಿದ್ದರೂ ತಮ್ಮನ್ನು ಬೆಳೆಸಿದ ರಂಗಭೂಮಿಯ ಕಳ್ಳು ಬಳ್ಳಿ ಸಂಬಂಧವನ್ನು ಕಡಿದುಕೊಳ್ಳದ ಬಿರಾದಾರರು ಇಂದಿಗೂ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. “ಸಂಘಮೇಶ್ವರ ಕಲಾವೃಂದ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಾಸ್ಯ ನಾಟಕಗಳು ಮತ್ತು ರಸಮಂಜರಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ತಮ್ಮ ಸಹಜ ಅಭಿನಯದಿಂದ “ಕನಸೆಂಬ ಕುದುರೆಯನೇರಿ” ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು. ಶ್ರೀಯುತರ ರಂಗಭೂಮಿ ಮತ್ತು ಚಲನಚಿತ್ರದ ಅವಿರತ ಸೇವೆಗಾಗಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕ ಪ್ರಶಸ್ತಿ, ವೃತ್ತಿರಂಗಭೂಮಿ ಕಲಾರತ್ನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ಕರ್ನಾಟಕ ಗೌರವ ಪುರಸ್ಕಾರಗಳಲ್ಲದೆ ೨೦೧೪ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.
ತಮ್ಮ ಜೀವನವನ್ನು ಪರಿಪೂರ್ಣವಾಗಿ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಕ್ಕೆ ಮುಡಿಪಾಗಿಟ್ಟು ದುಡಿಯುತ್ತಿರುವ ಜನಪ್ರಿಯ ಹಾಸ್ಯ ಕಲಾವಿದ ವೈಜನಾಥ ಬಿರಾದಾರರನ್ನು ಕನ್ನಡ ಭವನದ ಮನೆಯಂಗಳಕ್ಕೆ ತಿಂಗಳ ಅತಿಥಿಯಾಗಿ ಬರಮಾಡಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹರ್ಷಿಸುತ್ತದೆ.

ಟ್ಯಾಗ್‌ಗಳು:
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *