LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ಬರಗೂರು ರಾಮಚಂದ್ರಪ್ಪ

ಸಾಹಿತ್ಯ ರಚನೆ, ಸಂಘಟನೆ, ನಾಡು-ನುಡಿ-ಸಂಸ್ಕೃತಿಗಳ ಚಿಂತನೆ, ಸಿನಿಮಾ ನಿರ್ದೇಶನ ಹೀಗೆ ಬಹುಮುಖ ಪ್ರತಿಭೆಯ ವಿಶಿಷ್ಟ ವ್ಯಕ್ತಿತ್ವ ನಾಡೋಜ ಡಾ.ಬರಗೂರು ರಾಮಚಂದ್ರ್ಪಪ ಅವರದು. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರಿನಲ್ಲಿ ಹುಟ್ಟಿದ ರಾಮಚಂದ್ರಪ್ಪನವರು ಗ್ರಾಮೀಣ ಬದುಕಿನ ದಟ್ಟ ಅನುಭವಗಳ ಜೊತೆಗೆ ಶೋಷಿತ ಸಮುದಾಯಗಳ ನೋವು, ದುಃಖ, ವೇದನೆಗಳನ್ನು ಅನುಭವಿಸಿದವರು. ಆದ್ದರಿಂದಲೇ ಅವರ ಬರೆವಣಿಗೆಯಲ್ಲಿ, ಆಲೋಚನೆಯಲ್ಲಿ ಶೋಷಿತ ಸಮುದಾಯಗಳ ವೇದನೆಗೆ ಸಂವೇದಿಸುವ ಸೂಕ್ಷ್ಮತೆ ಇದೆ. ಅವರ ಬದುಕು ಮತ್ತು ಬರಹದ ನಡುವೆ ಅವಿನಾಭಾವ ಸಂಬಂಧವಿದೆ. ಅಂತೆಯೇ ಶೋಷಣೆಯ ವಿರುದ್ಧ ಖಂಡೇಳುವ ಗುಣವೂ ಇದೆ.
ಶ್ರೀಯುತರು ಬರಗೂರು ಹಾಗೂ ತುಮಕೂರಿನಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಲ್ಲಿಯೇ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ವೃತ್ತಿಯ ಜೊತೆಗೇ ಓದು ಮತ್ತು ಹೋರಾಟದ ಬದುಕನ್ನು ವಿಸ್ತರಿಸಿಕೊಂಡ ಬರಗೂರರು ಮುಂದೆ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ ನಾಡಿನ ತುಂಬಾ ಬಂಡಾಯ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಹೊಸ ಬಗೆಯ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದರು. ಇದರಿಂದ ಆವರೆಗೆ ಸಾಹಿತ್ಯ ರಚನೆಯ ಮಾರ್ಗದಲ್ಲಿ ಮರೆಯಲ್ಲಿಯೇ ಇದ್ದ ಅನೇಕ ಹಿರಿಯ-ಕಿರಿಯ ತಳಸಮುದಾಯದ ಲೇಖಕರು ಬೆಳಕಿಗೆ ಬರಲು ಕಾರಣರಾದರು. ಕಿರಿಯ ವಯಸ್ಸಿನಲ್ಲಿಯೇ ಕರ್ನಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯಂಥ ಜವಾಬ್ದಾರಿಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದರಲ್ಲದೆ, ಸಾಹಿತ್ಯ ಅಕಾಡೆಮಿಯ ಆಲೋಚನಾ ಕ್ರಮಗಳಿಗೆ ಹೊಸ ಬಗೆಯ ಚಿಂತೆನೆಗಳ ಸ್ಪರ್ಶ ನೀಡಿದರು. ಪರಿಣಾಮವಾಗಿ ಸಾಹಿತ್ಯ ಅಕಾಡೆಮಿಯಿಂದ ಉಪಸಂಸ್ಕೃತಿ ಮಾಲೆ, ಅಂತರ್ಶಿಸ್ತ್ರೀಯ ಅಧ್ಯಯನ ಮಾಲೆ, ಪುನರ್ಮೌಲ್ಯೀಕರಣ ಮಾಲೆ, ಸಾಮಾಜಿಕ ಚಿಂತನ ಮಾಲೆ, ಮರೆಯಲಾಗದ ಬರಹಗಾರರು ಮಾಲೆಗಳಡಿ ನೂರಾರು ಹೊಸ ಬಗೆಯ ಕೃತಿಗಳು ಪ್ರಕಟಗೊಂಡವು. ಉಪಸಂಸ್ಕೃತಿ ಮಾಲೆಯಂತೂ ಈ ನಾಡಿನ ಬಹುಸಂಸ್ಕೃತಿಯ ಸತ್ವವನ್ನು ಎತ್ತಿ ಹಿಡಿದ ಸಾರ್ವಕಾಲಿಕ ಮಹತ್ವದ ಮಾಲಿಕೆಯೆನಿಸಿತು. ಮುಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಅವರು ರೂಪಿಸಿದ ಅನೇಕ ಯೋಜನೆಗಳು ನಾಡಿನ ತುಂಬಾ ಜನಮನದಲ್ಲಿ ಭಾಷಾ ಜಾಗೃತಿ ಮೂಡಿಸಿದವು.
ಕಾವ್ಯ, ಕಥೆ, ಕಾದಂಬರಿ, ವಿಚಾರ-ವಿಮರ್ಶೆ, ಸಂಸ್ಕೃತಿ ಚಿಂತನೆ, ರಾಜಕೀಯ ಚಿಂತನೆ, ಸಿನಿಮಾ ಮತ್ತು ಕನ್ನಡ ಚಿಂತನೆಗಳನ್ನು ಒಳಗೊಂಡ ಅನೇಕ ವಿಶಿಷ್ಟ ಕೃತಿಗಳನ್ನು ಕನ್ನಡಕ್ಕೆ ನೀಡಿದ ಬರಗೂರರ ಸಾಹಿತ್ಯ ಸಾಧನೆಗೆ ಅನೇಕ ಗೌರವ ಸಮ್ಮಾನಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯ ಸಾಹಿತ್ಯ ಪರಿಷತ್ತಿನಿಂದ ನೀಡುವ ನೃಪತುಂಗ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಸಂದಿವೆ. ಅಲ್ಲದೆ ಬರಗೂರರು ನಿರ್ದೇಶಿಸಿದ ‘ಶಾಂತಿ’ ಚಲನಚಿತ್ರ ಗಿನ್ನೆಸ್ ದಾಖಲೆ ನಿರ್ಮಿಸಿತು. ಅವರ ನಿರ್ದೇಶನದ ಅನೇಕ ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಸಂದಿವೆ. ಅನೇಕ ಚಲನಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿವೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಇದೇ ಡಿಸೆಂಬರ್ ೨,೩ ಮತ್ತು ೪, ೨೦೧೬ರಂದು ರಾಯಚೂರಿನಲ್ಲಿ ಜರುಗಿದ ೮೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿ ತಮ್ಮ ಅಧ್ಯಕ್ಷ ಭಾಷಣದ ಮೂಲಕ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಕ್ಷೇತ್ರದಲ್ಲೂ ನಮ್ಮ ಬದ್ಧತೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಹೇಗಿರಬೇಕೆಂಬ ಸ್ಪಷ್ಟ ಮಾರ್ಗದರ್ಶನ ನೀಡಿದ ಪ್ರೊ.ಬರಗೂರು ರಾಮಚಂದ್ರಪ್ಪ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ತಿಂಗಳ ಅತಿಥಿಗಳಾಗಿ ಕನ್ನಡ ಭವನದ ಮನೆಯಂಗಳಕ್ಕೆ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದೆ.

ಟ್ಯಾಗ್‌ಗಳು:
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *