LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಕಲಾವಿದರು

ಲಕ್ಷ್ಮಿ ಚಂದ್ರಶೇಖರ್‌

ಲಕ್ಷ್ಮೀ ಚಂದ್ರಶೇಖರ್ ಅವರು ಕನ್ನಡ ರಂಗಭೂಮಿಯ ಅತ್ಯಂತ ಪ್ರತಿಭಾವಂತ ರಂಗಕರ್ಮಿಗಳಲ್ಲೊಬ್ಬರು. ವೃತ್ತಿಯಾಚೆಗೆ ಪ್ರವೃತ್ತಿಯಾಗಿ ರೂಪಿಸಿಕೊಂಡ ಕ್ಷೇತ್ರ ರಂಗಭೂಮಿ.
೧೯೫೧ರಲ್ಲಿ ಜನಿಸಿದ ಲಕ್ಷ್ಮೀ ಅವರು ತಮ್ಮ ಬಾಲ್ಯದ ದಿನಗಳಿಂದಲೂ ಬಣ್ಣದ ಪ್ರಪಂಚದ ಸೆಳೆತಕ್ಕೆ ಸಿಕ್ಕಿ ಶಾಲಾ ದಿನಗಳಲ್ಲಿಯೇ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಲಕ್ಷ್ಮೀ ಚಂದ್ರಶೇಖರ್. ಮೈಸೂರು ವಿಶ್ವವಿದ್ಯಾಲಯದಿಂದ ಆಂಗ್ಲ ಸ್ನಾತಕೋತ್ತರ ಪದವಿ ಪಡೆದು ಆಂಗ್ಲ ಪ್ರಾಧ್ಯಾಪಕಿಯಾಗಿ ಎನ್.ಎಂ.ಕೆ.ಆರ್.ವಿ.ಕಾಲೇಜಿನ ವಿದ್ಯಾರ್ಥಿನಿಯರ ಮೆಚ್ಚಿನ ಟೀಚರ್ ಕೂಡ ಹೌದು.
ಮದುವೆಯ ಬಂಧದಲ್ಲಿ ಬದುಕಿನ ನಡಿಗೆಗೆ ಜೊತೆಯಾದವರು ಹಿರಿಯ ರಾಜಕಾರಣಿ, ಸಂಸ್ಕೃತಿ ಚಿಂತಕರಾದ ಪ್ರೊ|| ಬಿ.ಕೆ.ಚಂದ್ರಶೇಖರ್. ಅವರೊಂದಿಗಿನ ಒಡನಾಟದಲ್ಲಿ ಇಬ್ಬರು ಮಕ್ಕಳೊಡನೆ ಸಂತೃಪ್ತ ಕುಟುಂಬ ಜೀವನ ನಡೆಸುತ್ತಿದ್ದಾರೆ. ಅವರ ಒಡಲ ತುಡಿತದ ಪರಿಣಾಮ ರಂಗಭೂಮಿಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ದೊರೆಯಲು ಸಾಧ್ಯವಾಗಿದೆ.
ಸಮುದಾಯ ರಂಗತಂಡದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಲಕ್ಷ್ಮೀ ಚಂದ್ರಶೇಖರ್ ಅವರು ಹಲವು ಪ್ರಮುಖ ರಂಗರೂಪಕಗಳಲ್ಲಿ ಜನ ಮೆಚ್ಚುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಮೂರುವರೆ ದಶಕಗಳ ರಂಗ ಅನುಭವದಲ್ಲಿ ೧೯೮೮ರಲ್ಲಿ ಕಟ್ಟಿದ ಕ್ರಿಯೇಟೀವ್ ಥಿಯೇಟರ್ ಇವರ ರಂಗಕಲ್ಪನೆಯ ಕೂಸು. ಇಂಗ್ಲಿಷಿನ ಕ್ರಿಯೇಟಿವಿಟಿಗೆ, ಸಂಸ್ಕೃತಿ ಕ್ರಿಯೆ ಸೇರುತ್ತಲೇ ರೂಪುಗೊಂಡ ಕ್ರಿಯೇಟಿವ್ ಥಿಯೇಟರ್ ತಂಡಕ್ಕೆ ಸಾಮಾಜಿಕ ಬದುಕಿಗೆ ಸಂದೇಶಗಳನ್ನು ನೀಡುವ ರಂಗರೂಪಕಗಳನ್ನು ಪ್ರಸ್ತುತಪಡಿಸುತ್ತ ಬಂದಿದೆ.
ಅಶ್ಲೀಲವಲ್ಲದ ಹಾಸ್ಯ ರೂಪಕಗಳನ್ನು ಪ್ರಧಾನವಾಗಿ ಆರಿಸಿಕೊಂಡರೂ, ಲಕ್ಷ್ಮೀ ಚಂದ್ರಶೇಖರ್ ಅವರ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದು “ಹೆಣ್ಣಲ್ಲವೇ” ಎಂಬ ಏಕ ವ್ಯಕ್ತಿ ರಂಗರೂಪಕ. ಈ ರಂಗರೂಪಕವನ್ನ ಕನ್ನಡ ಮತ್ತು ‘ಜಸ್ಟ್ ಎ ವುಮೆನ್’ ಎಂಬ ಶೀರ್ಷಿಕೆಯಡಿ ಆಂಗ್ಲ ಭಾಷೆಗೂ ಅನುವಾದಿಸಿ ದೇಶ ವಿದೇಶಗಳಲ್ಲಿ ಅಭಿನಯಿಸಿದ್ದಾರೆ.
ಲಕ್ಷ್ಮೀ ಚಂದ್ರಶೇಖರ್ ಅವರು “ಸಿಂಗಾರೆವ್ವ” ಮತ್ತು “ಅರಮನೆ” ನಾಟಕವನ್ನು ಸಹ ಇಂಗ್ಲಿಷಿಗೂ ಅನುವಾದಿಸಿ ಹಲವು ಸಮಾವೇಶಗಳಲ್ಲಿ, ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ-ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಪ್ರದರ್ಶಿಸಿದ್ದಾರೆ. ವಿದೇಶಿ ಲೇಖಕರ ಕೃತಿಗಳನ್ನು ಕನ್ನಡ ರಂಗರೂಪಕ್ಕೆ ತಂದು ಅಭಿನಯಿಸಿದ ಕೀರ್ತಿ ಕೂಡ ಅವರದು.
ಮುದ್ದಣ್ಣ, ರಾಮಕೃಷ್ಣ ಕನರ್ಪಾಡಿ, ಗಜಾನನ ಟಿ.ನಾಯ್ಕ ಅವರೊಡಗೂಡಿ ರಚಿಸಿದ ಕ್ರಿಯೇಟಿವ್ ಥಿಯೇಟರ್ ಮೂಲಕ ಹಲವು ಕನ್ನಡ ಮತ್ತು ಇಂಗ್ಲಿಷ್ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಮೊದಮೊದಲಿಗೆ ಹೆಣ್ಣಿನ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸಲು ನಾಟಕಗಳನ್ನು ನಿರ್ಮಿಸಿದ ತಂಡ, ನಂತರ ಪರಿಸರ ಮಾಲಿನ್ಯ, ಜಾಗತೀಕರಣದಂತಹ ಸಮಕಾಲೀನ ವಿಷಯವಸ್ತುಗಳ ಬಗ್ಗೆ ರಂಗರೂಪಕಗಳನ್ನು ಪ್ರಸ್ತುತಪಡಿಸಿದ್ದಾರೆ.
ಲಕ್ಷ್ಮೀ ಚಂದ್ರಶೇಖರ್ ಅವರು ಮನೆಮಾತಾಗಿದ್ದು ಕಿರುತೆರೆಯ ಮೂಲಕ. ಗಿರೀಶ್ ಕಾಸರವಳ್ಳಿಯವರ ಗೃಹಭಂಗ ಧಾರವಾಹಿಯಲ್ಲಿ ಗಯ್ಯಾಳಿ ಪಾತ್ರ ಬಹಳ ಕಾಲ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹದ್ದು. ಟಿ.ಎನ್.ಸೀತಾರಾಮ್ ಅವರ ಮಾಯಾಮೃಗದಲ್ಲಿನ ಕಮಲು ಪಾತ್ರ ಜನಪ್ರಿಯವಾಗಿದೆ.
ಬೆಳ್ಳಿ ತೆಗೆಗೆ ೧೯೮೭ರಲ್ಲಿ ಕಾಲಿಟ್ಟ ಲಕ್ಷ್ಮೀ ಚಂದ್ರಶೇಖರ್ ಅವರು ಅವಸ್ಥೆ ಚಿತ್ರದಿಂದ ಆರಂಭಿಸಿ, ಮತದಾನ, ಬೇರು, ಪ್ರೀತಿಯಿಂದ ಸೇರಿದಂತೆ ಇತ್ತೀಚೆಗಿನ ಕಿರಗೂರಿನ ಗಯ್ಯಾಳಿಗಳು ಚಿತ್ರದವರೆಗೆ ಸುಮಾರು ಹನ್ನೆರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಿಂದೂ ಪತ್ರಿಕೆಯಲ್ಲಿ ನಿಯತವಾಗಿ ರಂಗ ಚಟುವಟಿಕೆಗಳ ಅಂಕಣಗಳನ್ನು ಬರೆಯುವ ಲಕ್ಷ್ಮೀ ಚಂದ್ರಶೇಖರ್ ಅವರು ಮಹಿಳಾ ಪರ ಚಿಂತನೆಯ ಹಲವು ಕಾರ್ಯಾಗಾರಗಳು ಮತ್ತು ಚಟುವಟಿಕೆಗಳಲ್ಲಿ ಸದಾ ಸಕ್ರಿಯರು. ಇವರ ಚಿಂತನೆಗಳು ನಮಗೆ ದಾರಿದೀಪವಾಗಲಿ ಎಂದು ಹಾರೈಸುತ್ತೇವೆ.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *