LOADING

ಹುಡುಕಲು ಟೈಪ್ ಮಾಡಿ

ಗಮಕಿ ಮನೆಯಂಗಳದಲ್ಲಿ ಮಾತುಕತೆ

ಎ.ವಿ. ಪ್ರಸನ್ನ

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂಬ ನುಡಿಗಟ್ಟು ಕಾವ್ಯ ಕಥನ ಶೈಲಿಯ ಸಾಮರ್ಥ್ಯದ ದ್ಯೋತಕ. ಗಮಕ ಶೈಲಿಗೆ ಕುಮಾರವ್ಯಾಸ ಭಾರತ ಕಥೆಯು ಮಹತ್ವವಾದದ್ದು. ನಾಡಿನ ಒಳ-ಹೊರಗೆ ಗಮಕ ವ್ಯಾಖ್ಯಾನ ಮಾಡುವ ಮೂಲಕ ಜನಸಾಮಾನ್ಯರಲ್ಲಿ ಸಹ ಸಾಹಿತ್ಯ ವಲಯದ ಬಗ್ಗೆ ಆಸಕ್ತಿ ಮೂಡಿಸಿರುವುದು ಎ.ವಿ.ಪ್ರಸನ್ನ ಅವರ ವೈಶಿಷ್ಟ್ಯ.
ಆಗಸ್ಟ್ ೧೮, ೧೯೫೦ರಲ್ಲಿ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪೊನ್ನಾಥಪುರದಲ್ಲಿ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ಎ.ಜಿ.ವೆಂಕಟನಾರಾಯಣಪ್ಪ ದಂಪತಿಗಳ ಸುಪುತ್ರರಾಗಿ ಜನಿಸಿದ ಪ್ರಸನ್ನ ಅವರು ಬಾಲ್ಯದ ವಿದ್ಯಾಭ್ಯಾಸವನ್ನು ಹಾಸನ ಜಿಲ್ಲೆಯ ಪೊನ್ನಾಥಪುರ ಮತ್ತು ಗೊರೂರಿನಲ್ಲಿ ಪೂರೈಸಿದರು. ನಂತರ ಬೆಂಗಳೂರಿನಲ್ಲಿ ವೃತ್ತಿಜೀವನದ ಜೊತೆ ಜೊತೆಗೆ ಸಂಜೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಕಾನೂನು ಪದವಿಯನ್ನು ಪೂರೈಸಿದ್ದಲ್ಲದೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೂಲಕ ‘ಕುಮಾರವ್ಯಾಸನ ಕಾವ್ಯ ಚಿತ್ರಗಳು ಒಂದು ಅಧ್ಯಯನ’ ಎಂಬ ವಿಷಯದ ಬಗ್ಗೆ ಮಹಾಪ್ರಬಂಧವನ್ನು ಮಂಡಿಸಿ ಡಿ.ಲಿಟ್ ಪದವಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಜೆ.ಕೆ.ಡಬ್ಲ್ಯೂ ಕಾರ್ಖಾನೆಯಲ್ಲಿ ಉದ್ಯೋಗ ಆರಂಭಿಸಿ, ಎಂ.ಇ.ಎಸ್ ಸಂಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸಹ ಸೇವೆ ಸಲ್ಲಿಸಿದರು. ನಂತರ ಕರ್ನಟಕ ಆಡಳಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ತರುವಾಯ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರವೂ ತಮ್ಮ ಅನುಭವವನ್ನು ಆಡಳಿತಕ್ಕೆ ಬಳಸುವ ಸದಾಶಯದಿಂದ ಪ್ರಸಕ್ತ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ವಿಶೇಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯಾಸಕ್ತ ಸಂಘಟನೆಗಳ ವೇದಿಕೆಗಳಲ್ಲಿ ಹಳಗನ್ನಡ ಸಾಹಿತ್ಯ ಮತ್ತು ಕುಮಾರವ್ಯಾಸ, ರಾಘವಾಂಕ, ಪಂಪ, ರನ್ನ, ಲಕ್ಷ್ಮೀಶ ಕವಿಗಳ-ಕೃತಿಗಳ ಬಗ್ಗೆ ವಿಸ್ತೃತ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಶಿವಮೊಗ್ಗದಿಂದ ಪ್ರಕಟವಾಗುವ ‘ಗಮಕ ಸಂಪದ’ ಮಾಸಿಕಕ್ಕೆ ‘ಗಮಕಸಾಹಿತ್ಯ’ ಎಂಬ ಅಂಕಣ ಬರೆಯುತ್ತಿದ್ದಾರೆ. ಈ ಎಲ್ಲ ಲೇಖನಗಳನ್ನು ಶಬ್ದಲಂಘನ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಕುಮಾರವ್ಯಾಸ ಮತ್ತು ತಿಮ್ಮಣ್ಣ ಕವಿಗಳ ಭಾರತಗಳನ್ನು ‘ಕನ್ನಡ ಭಾರತ’ ಎಂಬ ಹೆಸರಿನಲ್ಲಿ ಪರಿಷ್ಕರಿಸಿ ಸಂಪಾದಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಕುಮಾರವ್ಯಾಸ ಪ್ರತಿಮೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಸನ್ನ ಅವರು, ತುಮಕೂರು ವಿಶ್ವವಿದ್ಯಾಲಯದಲ್ಲಿ ಕುಮಾರವ್ಯಾಸ ಅಧ್ಯಯನ ಪೀಠದ ಸ್ಥಾಪನೆಯಲ್ಲಿಯೂ ಶ್ರಮ ವಹಿಸಿದ್ದಾರೆ. ಕರ್ನಾಟಕ ಸರ್ಕಾರವು ಗಮಕ ಕಲಾವಿದರಿಗಾಗಿ ಕೊಡಮಾಡುವ ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿಯಾದ ಕುಮಾರವ್ಯಾಸ ಪ್ರಶಸ್ತಿ ಸ್ಥಾಪನೆಗಾಗಿ ಸಹ ಶ್ರಮಿಸಿದ್ದಾರೆ.
ಹಲವು ಆಯಾಮಗಳಿಂದ ಹಳಗನ್ನಡ ಪರಂಪರೆಯ ಸಂರಕ್ಷಣೆಗೆ ಮುಂದಾಗಿರುವ ಪ್ರಸನ್ನ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ‘ಕರ್ನಾಟಕ ಕಲಾಶ್ರೀ’ ಸೇರಿದಂತೆ ನಾಡಿನ ಹಲವು ಸಂಗೀತ ಮತ್ತು ಸಂಸ್ಕೃತಿ ಸಂಸ್ಥೆಗಳ ಪ್ರತಿಷ್ಠಿತ ಗೌರವ ಅವರ ಸಿರಿಮುಡಿಗಾರಿದೆ. ಗಮಕಗ್ರಾಮ ಹೊಸಹಳ್ಳಿಯ ರಾಜ್ಯಮಟ್ಟದ ಗಮಕ ಸಮ್ಮೇಳನಾಧ್ಯಕ್ಷತೆಯ ಗೌರವವೂ ಅವರಿಗೆ ದಕ್ಕಿದೆ. ಇವರ ಸಾಹಿತ್ಯ ಸೇವೆ ಇನ್ನಷ್ಟು ಕಾಲ ನಾಡಿಗೆ ದೊರೆತು ಸಾಹಿತ್ಯಾಭಿಲಾಷಿಗಳಿಗೆ ಇನ್ನಷ್ಟು ಲಾಭವಾಗಲಿ ಎಂದು ಹಾರೈಸುತ್ತೇನೆ.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *