LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸ್ವಾತಂತ್ರ್ಯ ಹೋರಾಟಗಾರರು

ಹೋ. ಶ್ರೀನಿವಾಸಯ್ಯ

ಸಹಕಾರಿ ಚಳುವಳಿ, ಗಾಂಧೀವಾದದ ಚಿಂತನೆಗಳಿಗೆ ಪಾತ್ರರಾದ ಹೊ.ಶ್ರೀನಿವಾಸಯ್ಯ ಅವರು ತಮ್ಮ ಬಹುಮುಖೀ ವ್ಯಕ್ತಿತ್ವದಿಂದಲೇ ಜನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು. ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘದ ಸ್ಥಾಪಕ ಟ್ರಸ್ಟಿಯಾಗಿ ಗಾಂಧೀ ವಿಚಾರಧಾರೆಗಳನ್ನು ಪ್ರತಿಪಾದಿಸುವ ಪ್ರಮುಖರು.
೧೯೨೫ರ ಜನವರಿ ೪ ರಂದು ಸಕ್ಕರೆನಾಡು ಮಂಡ್ಯದಲ್ಲಿ ರೈತಕುಟುಂಬದವರಾಗಿ ಜನಿಸಿದ ಹೊ.ಶ್ರೀನಿವಾಸಯ್ಯ ಅವರು ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಸಮಾಜ ಸೇವಕರು. ಸ್ವಾತಂತ್ರ ಚಿಂತನೆಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತ ಬಂದವರು.
ಹಿಂದೂಸ್ಥಾನ್ ವಿಮಾನ ಕಾರ್ಖಾನೆಯ ಇಂಜಿನಿಯರ್ ಆಗಿ ಸೇವೆಯನ್ನು ಆರಂಭಿಸಿ ಭಾರತ ಅರ್ತ್ ಮೂವರ್ (ಬಿ.ಇ.ಎಂ.ಎಲ್) ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ, ಆಡಳಿತ ಅಧಿಕಾರಿಯಾಗಿ, ರೈಲುಗಾಡಿ ವಿಭಾಗದ ಉಪ ಮಹಾವ್ಯವಸ್ಥಾಪಕರಾಗಿ ಹೊ.ಶ್ರೀನಿವಾಸಯ್ಯ ಅವರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಿಸ್ಪೃಹವಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಸ್ವಾತಂತ್ರದ ಬುನಾದಿಯೇ ಸ್ವಾವಲಂಬನೆ ಎಂಬುದನ್ನರಿತ ಶ್ರೀನಿವಾಸಯ್ಯ ಅವರು ಹಲವು ಸಹಕಾರಿ ಚಳುವಳಿಗಳನ್ನು ಆರಂಭಿಸಿ ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿದವರು. ತಾವು ಕಾರ್ಯ ನಿರ್ವಹಿಸುತ್ತಿದ್ದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೌಕರರಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು. ನಂತರ ಮುಂದುವರೆದು ಶ್ರೀರಾಮ ಸಹಕಾರಿ ಬ್ಯಾಂಕ್, ಆಂಜನೇಯ ಸಹಕಾರಿ ಬ್ಯಾಂಕ್ಗಳ ಸ್ಥಾಪನೆಗೆ ಕೈ ಜೋಡಿಸಿ ಬಡಜನರ, ಶ್ರೀಸಾಮಾನ್ಯರ ಹಿತಸಾಧನೆಗೆ ಸಮುದಾಯವ್ನನು ಕಾರಣಕರ್ತರಾಗಿದ್ದಾರೆ.
ಧಾರ್ಮಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಹ ಸ್ಕರಿಯವಾಗಿ ತೊಡಗಿರುವ ಹೊ.ಶ್ರೀನಿವಾಸಯ್ಯ ಅವರು ಆದಿಚುಂಚನಗಿರಿ ಟ್ರಸ್ಟ್ ಬೆಂಗಳೂರು ಶಾಲೆಯ ಟ್ರಸ್ಟಿಯಾಗಿ, ಯಲಹಂಕ ಆಂಜನೇಯಸ್ವಾಮಿ ದೇವಾಲಯ, ರಾಮಮಂದಿರ ಹೀಗೆ ಹಲವು ಸಂಘಟನೆಗಳ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡವಿದ್ಯಾರ್ಥಿಗಳಿಗೆ ತಮ್ಮ ಜಯಶ್ರೀ ಟ್ರಸ್ಟ್ ಮೂಲಕ ವಿದ್ಯಾರ್ಥಿ ವೇತನ ನೀಡುತ್ತ ಬಂದಿದ್ದಾರೆ. ದಕ್ಷಿಣ ಭಾರತ ಗೋಸೇವಾ ಸಂಘದ ಧರ್ಮದರ್ಶಿಯಾಗಿ ಪಶುಪಕ್ಷಿಗಳಿಗೂ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ಗಾಂಧಿ ಸಮಿತಿಯ ಚುಕ್ಕಾಣಿ ಹಿಡಿದು ಗಾಂಧೀಜಿ ಪ್ರೇರಿತ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.
ಗ್ರಾಮಾಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀನಿವಾಸಯ್ಯ ಅವರು, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಪ್ರತಿಪಾದನೆ ಮತ್ತು ಪ್ರಚಾರಕ್ಕಾಗಿ ಸಹ ಶ್ರಮಿಸುತ್ತಿದ್ದಾರೆ. ಗಾಂಧೀಜಿ ಚಿಂತನೆಗಳನ್ನು ಕುರಿತ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಮಕ್ಕಳಿಗಾಗಿ ಇವರು ರಚಿಸಿರುವ ಗಾಂಧೀಜಿ ಜೀವನ ಕುರಿತ ಹೊತ್ತಿಗೆಯು ಅತ್ಯಂತ ಜನಪ್ರಿಯವಾಗಿದೆ.
ಇವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ರಾಜ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಗಾಂಧೀ ಸದ್ಭಾವನಾ ರಾಜ್ಯ ಪ್ರಶಸ್ತಿಗಳು ಇವರ ಸಿರಿಮುಡಿಗೇರಿವೆ. ಹಲವಾರು ಸಂಘ-ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಗೌರವಿಸಿವೆ. ಇವರ ಚಿಂತನೆಗಳು ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸುತ್ತೇನೆ.

ಟ್ಯಾಗ್‌ಗಳು:
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *