LOADING

ಹುಡುಕಲು ಟೈಪ್ ಮಾಡಿ

ನಿವೃತ್ತ ನ್ಯಾಯಮೂರ್ತಿಗಳು, ಉಚ್ಛನ್ಯಾಯಾಲಯ ಮನೆಯಂಗಳದಲ್ಲಿ ಮಾತುಕತೆ

ಎ.ಜೆ.ಸದಾಶಿವ

ನ್ಯಾಯಾಂಗ ಕ್ಷೇತ್ರದಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿ ಖ್ಯಾತಿ ಪಡೆದ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅತ್ಯುತ್ತಮ ನಟರೆಂಬ ಹೆಗ್ಗಳಿಕೆಗೆ ಪಾತ್ರರಾದವರು.
ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ (೧೯೩೭) ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಮೈಸೂರಿನಲ್ಲಿ ಪದವಿ ವ್ಯಾಸಂಗ ಮಾಡಿ ನಂತರ ತೋಟಗಾರಿಕೆ ಇಲಾಖೆಯಲ್ಲಿ ನೌಕರಿ ಹಿಡಿದಿದ್ದರು. ಸಹೋದರನ ಒತ್ತಾಯದಿಂದ ಬೆಂಗಳೂರಿನ ಸರ್ಕಾರಿ ಕಾನೂನು ಪದವಿ ಪಡೆದ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ತೋಟಗಾರಿಕೆ ಇಲಾಖೆಯ ಉದ್ಯೋಗ ಬಿಟ್ಟು ೧೯೬೪ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು.
ವಕೀಲರಾಗಿ ಮನ್ನಣೆ ಪಡೆದ ಅವರು ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಹಲವು ಪ್ರಗತಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಕಾನೂನು ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾದರು. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ೧೯೯೩ರಲ್ಲಿ ನೇಮಕಗೊಂಡ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಹಲವಾರು ದಿಟ್ಟ ತೀರ್ಪುಗಳನ್ನು ನೀಡುವ ಮೂಲಕ ಗಮನ ಸೆಳೆದರು. ಕನ್ಆಟಕ ಸೇವಾ ಪ್ರಾಧಿಕಾರದ ಮೊದಲ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ತಮಿಳುನಾಡು ಕರ್ನಾಟಕ ಟಾಕ್ಸ್ ಕೋರ್ಸ್ ಪಡೆಯವರು ಬುಡಕಟ್ಟು ಜನಾಂಗದವರ ಮೇಲೆ ಮಾಡಿದರೆನ್ನಲಾದ ದೌರ್ಜನ್ಯದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೇಮಿಸಿದ್ದ ಪೂರ್ವಭಾವಿ ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮಹತ್ವದ ವರದಿ ನೀಡಿದರು.
ದಲಿತ ಜನಾಂಗದಲ್ಲಿ ತಾರತಮ್ಯದ ಬಗೆಗೆ ವಿಚಾರಣೆ ನಡೆಸಿ ಸರ್ಕಾರಕ್ಕೆ ಸಲಹೆ ನೀಡಲು ಕರ್ನಾಟಕ ಸರ್ಕಾರ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿಯೂ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಕಾರ್ಯನಿರ್ವಹಿಸಿ ನೊಂದವರಿಗೆ ಪರಿಹಾರ ಒದಗಿಸಿಕೊಡುವಲ್ಲಿ ನೆರವಾದರು.
ರಂಗಭೂಮಿ ಮತ್ತು ಚಲನಚಿತ್ರ ನಟರಾಗಬೇಕೆಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಬಾಲ್ಯದ ಕನಸು. ಶಾಲಾ ಕಾಲೇಜುಗಳಲ್ಲಿ ಅನೇಕ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಬೆಂಗಳೂರಿನಲ್ಲಿ ನೆಲೆನಿಂತ ಮೇಲೆ ಹವ್ಯಾಸ ರಂಗಭೂಮಿಯಲ್ಲಿ ಸಕ್ರೀಯರಾದರು.ಕಾಲೇಜು ವಿದ್ಯಾರ್ಥಿಗಳು ಏರ್ಪಡಿಸುತ್ತಿದ್ದ ರಾಜ್ಯ ಮಟ್ಟದ ‘ಉಲ್ಲಾಳ್ ಸ್ಮಾರಕ’ ನಾಟಕ ಸ್ಪರ್ಧೆಯಲ್ಲಿ ಪಾತ್ರವಹಿಸಿ ಪಾರಿತೋಷಕ ಹಾಗೂ ಬಹುಮಾನಗಳನ್ನು ತಮ್ಮದಾಗಿಸಿಕೊಂಡ ವೈಶಿಷ್ಟ್ಯ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರದು.
ಪಿ.ಲಂಕೇಶರ ‘ನನ್ನ ತಂಗಿಗೊಂದು ಗಂಡುಕೊಡಿ’, ಗಿರೀಶ್ ಕಾರ್ನಾಡರ ‘ಯಯಾತಿ’, ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೊದಲಾದ ನಾಟಕಗಳಲ್ಲಿ ಪ್ರಮುಖ ಪಾತ್ರವಹಿಸಿ ನೋಡುಗರ ಪ್ರಶಂಸೆಗೆ ಪಾತ್ರರಾದವರು ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು. ಅತ್ಯುತ್ತಮ ಹವ್ಯಾಸಿ ನಟರೆಂದು ಖ್ಯಾತಿ ಪಡೆದಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಕಾನೂನು ವಲಯದಲ್ಲಿಯೂ ಹೆಸರು ಮಾಡಿದ್ದರು.
ಕಾನೂನು ಕ್ಷೇತ್ರ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳೂ ಸಂದಿವೆ.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *