LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ನಾಡೋಜ ಸಿದ್ಧಲಿಂಗಯ್ಯ

ಇಕ್ರಲಾ ವದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ರೇ ಅಂತಾರೆ, ಓಣೆಗೊಂದ್ ತರ ಗುಡಿ ಕಟ್ಸವ್ರೆ ಎಂದೆನ್ನುತ್ತಾ, ಒಂದಿಡೀ ಸಮುದಾಯದ ತಲೆಮಾರುಗಳ ನೋವು-ಅಸಹನೆಗಳಿಗೆ ದನಿಯಾಗಿ ನಿಂತವರು ಸಿದ್ದಲಿಂಗಯ್ಯ ತಮ್ಮೆಲ್ಲ ಆಕ್ರೋಶವನ್ನು ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ ಗೀತೆಗಳ ಮೂಲಕ ನಿರಂತರ ಸಮಾಜಮುಖಿ ಚಿಂತನೆಗೆ ಮತ್ತು ಸಮಾಜದ ಮನದಾಳದಲ್ಲಿ ಮಡುಗಟ್ಟಿದ್ದ ಆಕ್ರೋಶಗಳಿಗೆ ದನಿಯಾಗಿ ಜಾಗೃತ ಸಮಾಜದ ನಿರ್ಮಾಣಕ್ಕೆ ನೆರವಾಗಿದ್ದಂತೂ ದಿಟ.
೧೯೫೪ ಫೆಬ್ರವರಿ ೩ ಎಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದ ಶ್ರೀ ದೇವಯ್ಯ ಮತ್ತು ಶ್ರೀಮತಿ ವೆಂಕಟಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದ ಸಿದ್ಧಲಿಂಗಯ್ಯನವರಿಗೆ ಬಾಲ್ಯದುದ್ದಕ್ಕೂ ನೆರಳಾಗಿದ್ದು ಬಡತನವೇ. ಸಮಾಜದ ಶೋಷಣೆ, ತಾರತಮ್ಯಗಳನ್ನು ಅನುಭವಿಸುತ್ತಲೇ ಮಾಗಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿ ೧೯೭೪ರಲ್ಲಿ ಬೆಂಗಳೂರು ವಿವಿಯಲ್ಲಿ ಬಿ.ಎ. ಆನರ್ಸ್ (ಐಚ್ಚಿಕ ಕನ್ನಡ ) ಮತ್ತು ೧೯೭೬ರಲ್ಲಿ ಶ್ರೀ ಡಿ.ಎಲ್. ನರಸಿಂಹಾಚಾರ್ಯ ಸ್ವರ್ಣ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದರು.ಹಿಂಗದ ಅಕ್ಷರದ ಹಸಿವನ್ನು ೧೯೮೯ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ರಾಷ್ಟ್ರಕವಿ ಡಾ|| ಜಿ.ಎಸ್.ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ “ಗ್ರಾಮ ದೇವತೆಗಳು” ಪ್ರೌಢಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ.ಪದವಿಯನ್ನು ಸಂಪಾದಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಸಿದ್ಧಲಿಂಗಯ್ಯನವರು, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ಇವರ ಮಾರ್ಗದರ್ಶನದಲ್ಲಿ ೧೧ ಮಂದಿ ಎಂ.ಫಿಲ್ ಮತ್ತು ೮ ಮಂದಿ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಇದಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಿಗಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಶ್ರೀ ಸಿದ್ದಲಿಂಗಯ್ಯನವರು ಕರ್ನಾಟಕ ವಿಧಾನ ಪರಿಷತ್ತಿಗೆ ಎರಡು ಅವಧಿಗೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಬೂಸಾ ಸಾಹಿತ್ಯ ಚಳುವಲಿಯ ಮಂಚೂಣಿಯಲ್ಲಿದ್ದ ಸಿದ್ದಲಿಂಗಯ್ಯನವರು ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿ ಆ ಸಂಸ್ಥೆಗಳ ಹೋರಾಟಕ್ಕೆ ಕೆಚ್ಚನ್ನು ತುಂಬಿದವರು. ಡಾ|| ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ರಾಮಮನೋಹರ ಲೋಹಿಯಾ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿಗಳ ಮೂಲಕ ಸಾಹಿತ್ಯ ಸೃಜನೆಗೆ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯಕ್ಕಾಗಿ ಸಮಕಾಲೀನ ಕನ್ನಡ ಕವಿತೆಗಳು ೩ ಮತ್ತು ೪ನೆಯ ಸಂಪುಟಗಳನ್ನು ಸಂಪಾದಿಸಿಕೊಟ್ಟಿದ್ದಾರೆ.
ಕಾವ್ಯಾಭಿವ್ಯಕ್ತಿಯ ಮಾಧ್ಯಮದಿಂದ ಶೋಷಿತ, ದನಿನಿಯಲ್ಲದ ಜನವರ್ಗಕ್ಕೆ ಸ್ವಾಭಿಮಾನದ ಕಿಚ್ಚು ಹಚ್ಚಿ ಅವರೆಲ್ಲರ ಶತಶತಮಾನಗಳ ಸಿಟ್ಟು-ಸೆಡವುಗಳನ್ನು ಅಕ್ಷರರೂಪಕ್ಕಿಳಿಸಿ ನಾಗರಿಕ ಲೋಕಕ್ಕೆ ಪರಿಚಿಸಿದವರು ಸಿದ್ದಲಿಂಗಯ್ಯನವರು. ಅಕ್ಷರ ಕ್ರಾಂತಿ ಎಂದೇ ಕರೆಯಬಹುದಾದ ಕಾವ್ಯ ಪ್ರಕಾರದ ಮೂಲಕ ಜನಾಭಿಪ್ರಾಯಗಳನ್ನು ರೂಪಿಸಿದವರು. ಕನ್ನಡ ಸಾಹಿತ್ಯ ಲೋಕದಲ್ಲಿ ಸಹಜವಾಗಿ ಬೆಳೆದು ಬಂದಿರುವ ಸಾಹಿತ್ಯ ಪರಂಪರೆಯ ಮೂಲಧಾತುಗಳಾದ ವಚನ ಸಾಹಿತ್ಯ, ದಾಸ ಸಾಹಿತ್ಯ, ಕುವೆಂಪು ಅವರಂತಹ ಕ್ರಾಂತಿ ಮನೋಧರ್ಮದ ಪ್ರಭಾವ ಸಿದ್ದಲಿಂಗಯ್ಯನವರ ಮೂಲಕ ಮುಂದಿನ ತಲೆಮಾರಿಗೂ ಹರಿದು ಬಂದಿದೆ.
೧೯೭೫ ರಲ್ಲಿ ಪ್ರಕಟಿಸಿದ ‘ಹೊಲೆಮಾದಿಗರ ಹಾಡು’ ಕವನ ಸಂಕಲನ ಕವಿಯ ಜನ್ಮವನ್ನು ಲೋಕಕೆಲ್ಲ ತಿಳಿಸಿಕೊಟ್ಟರೆ, ‘ಸಾವಿರಾರು ನದಿಗಳು’, ‘ಆಯ್ದ ಕವಿತೆಗಳು’, ‘ಮೆರವಣಿಗೆ’, ‘ಕಪ್ಪು ಕಾಡಿನ ಹಾಡು’ ಮುಂತಾದವು ಜನಪ್ರಿಯ ಕವಿತಾ ಸಂಕಲನಗಳು. ಇವರು “ಊರುಕೇರಿ’ ಆತ್ಮ ಚರಿತ್ರೆ ಸಮಕಾಲೀನ ಸಮಾಜದ ಒಟ್ಟಂದದ ಚಿತ್ರಣ ನೀಡುತ್ತದೆ.ಇದು ತಮಿಳು ಹಾಗೂ ಇಂಗ್ಲೀಷ್ ಭಾಷೆಗೂ ಅನುವಾದಗೊಂಡಿದ್ದು.ಇಂಗ್ಲೀಷ್ ಅವತರಣೆಕೆಯನ್ನು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಕಟಿಸಿದೆ.ಇದಲ್ಲದೆ, ‘ಪಂಚಮ ಮತ್ತು ನೆಲಸಮ’, ‘ಏಕಲವ್ಯ’ ಇವರ ಲೇಖನಿಯಿಂದ ಮೂಡಿದ ಪ್ರಮುಖ ನಾಟಕಗಳಾದರೆ.‘ಅವತಾರಗಳು’ ಪ್ರಮುಖ ಪ್ರಬಂಧ ಕೃತಿ. ‘ಹಕ್ಕಿ ನೋಟ’, ‘ಜನಸಂಸ್ಕೃತಿ’, ‘ ಉರಿಕಂಡಾಯ’ ಮೊದಲಾದವು ಅವರ ಲೇಖನ ಸಂಗ್ರಹಳು. ಇವರ ಹಲವು ಕವನಗಳು ಚಿತ್ರಗೀತೆಗಳಾಗಿಯೂ ಜನಪ್ರಿಯವಾಗಿದೆ.ಪುಟ್ಟಣ್ಣ ಕಣಗಾಲರ ನಿರ್ದೇಶನದ ‘ಧರಣೆ ಮಂಡಲು ಮಧ್ಯದೊಳಗೆ’ ಚಿತ್ರಗೀತೆಗಾಗಿ ಇವರಿಗೆ ೧೯೮೩-೮೪ರ ರಾಜ್ಯಪ್ರಶಸ್ತಿ ದೊರಕಿದೆ.ಇವರ ಜನಪ್ರಿಯ ಕವಿತೆ ‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಬಾ ನಲ್ಲೆ ಮಧುಚಂದ್ರಕೆ ಚಲನಚಿತ್ರದಲ್ಲಿನ ಅತ್ಯಂತ ಜನಪ್ರಿಯ ಚಿತ್ರಗೀತೆಯಾಗಿಯೂ ಮೂಡಿಬಂದಿದೆ.ಚಲನಚಿತ್ರ ರಂಗದಲ್ಲಿಯೂ ಇವರ ಸಾಹಿತ್ಯ ಸೃಜನೆ ಅಪಾರ ಜನಮನ್ನಣೆ ಗಳಿಸಿದೆ.
ಪಣಜಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನಾಧ್ಯಕ್ಷತೆ, ಬೀದರ್ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಹಲವಾರು ಪ್ರತಿಷ್ಠಿತ ಉತ್ಸವಗಳ ಕವಿಗೋಷ್ಠಿ ಅಧ್ಯಕ್ಷತೆಯೂ ಸೇರಿದಂತೆ ಇವರ ಸೃಜನಶೀಲ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಕೊಡುಮಾಡುವ ಕರ್ನಾಟಕ ರಾಜ್ಯೋತ್ಸ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ|| ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನದ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವನಗಳು ಇವರಿಗೆ ಸಂದಿವೆ. ಇವೆಲ್ಲಕ್ಕೂ ಮುಕುಟವಿಟ್ಟಂತೆ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಭಾಜನರಾದ ಸಿದ್ದಲಿಂಗಯ್ಯನವರು ಇಂದು ನಮ್ಮೊಡನೆ ಮನೆಯಂಗಳಲ್ಲಿ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *