LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ನಾಡೋಜ ಎಂ.ಎಚ್. ಕೃಷ್ಣಯ್ಯ

ಲಲಿತಕಲೆ, ಶಿಲ್ಪಕಲೆ, ಸಂಗೀತ, ಸಾಹಿತ್ಯ, ಜನಪದ ಸಂಶೋಧನೆ ಹೀಗೆ ಯಾವುದೇ ಕ್ಷೇತ್ರವಾದರು ಅತ್ಯಂತ ಶಿಸ್ತಿನಿಂದ ಕ್ರಮಬದ್ಧ ಅಧ್ಯಯನ ಕೈಗೊಳ್ಳುವ ಎಂ.ಎಚ್.ಕೃಷ್ಣಯ್ಯ ಅವರು ಯಾರನ್ನೋ ಮೆಚ್ಚಿಸುವ ಸಲುವಾಗಿ ಅಸತ್ಯವನ್ನು ನುಡಿಯುವ ಹಂಗಿಗೆ ಒಳಗಾಗದ ನಿಷ್ಟುರವಾದಿಗಳು.ಅವರು ಬರೆದದ್ದು ಕಡಿಮೆ, ಅವರ ಎಲ್ಲ ಕೃತಿಗಳು ವಿದ್ವಜ್ಜನರ ಮೆಚ್ಚುಗೆಗೆ ಮತ್ತು ಸಾಹಿತ್ಯಾಸಕ್ತರ ಆಧ್ಯಯನಕ್ಕೆ ಪಾತ್ರವಾಗಿದೆ.ವಿದ್ಯಾರ್ಥಿಗಳಲ್ಲಿ ಚಿಂತನಶೀಲತೆಯನ್ನು ಜಾಗೃತಿಗೊಳಿಸುವ ಅವರ ಬೋಧನಾ ಕ್ರಮ ಶಿಸ್ತಿನ ಅಧ್ಯಯನ, ಕಲಾ ವಿಮರ್ಶೆ, ಸಾಹಿತ್ಯ ವಿಮರ್ಶೆ, ಮಹತ್ವದ ಸಂಪಾದಿತ ಕೃತಗಳದೇ ಸಿಂಹಪಾಲು.
ದಿನಾಂಕ: 31.07.1937 ರಲ್ಲಿ ಮೈಸೂರಿನಲ್ಲಿ ಶ್ರೀ ಹುಚ್ಚಯ್ಯ ಮತ್ತು ಶ್ರೀಮತಿ ಕೆಂಪಮ್ಮನವರ ಸುಪುತ್ರರಾಗಿ ಜನಿಸಿದ ಎಂ.ಎಚ್. ಕೃಷ್ಣಯ್ಯ ಅವರು ತಮ್ಮ ಬಾಲ್ಯವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದವರು.ಮೈಸೂರು ವಿಶ್ವವಿದ್ಯಾಲಯದ ಮೂಲಕ ಬಿ.ಎ. ಪದವಿ ಪಡೆದು ಎಂ.ಎ. ಪದವಿಯನ್ನೂ ಪೂರೈಸಿದರು.
ಅಧ್ಯಾಪನಾ ವೃತ್ತಿಯ ಸಲುವಾಗಿ ಬೆಂಗಳೂರು, ಮಂಗಳೂರು, ಕೋಲಾರ, ಮಾಗಡಿ ಮುಂತಾ ಕಡೆಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಕೃಷ್ಣಯ್ಯನವರು ಚನ್ನಪಟ್ಟಣ ಮತ್ತು ಮಾಗಡಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸಹ ಸೇವೆ ಸಲ್ಲಿಸಿದರು. ತರುವಾಯ ನಿವೃತ್ತಿಯವರೆಗೂ ಬೆಂಗಳೂರಿನ ಮಹಾರಾಣಿ ಮಹಿಳಾ
ಕಲಾ ಕಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದು.
ವೃತ್ತಿಯಿಂದ ನಿವೃತ್ತರಾದರು ಪ್ರವೃತ್ತಿಯಿಂದ ನಿವೃತ್ತರಾಗದ ಎಂ.ಎಚ್. ಕೃಷ್ಣಯ್ಯನವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಸ್ಕಾಲರ್ ಶಿಪ್ ಮತ್ತು ಫೆಲೋಶಿಪ್ ಆಯ್ಕೆ ಸಮಿತಿಗಳ ತಜ್ಞ ಸದಸ್ಯರಾಗಿ ವಿಶ್ವವಿದ್ಯಾಲಯಗಳ ಪದವಿಪೂರ್ವ ಪಠ್ಯ ಸಮಿತಿಗಳಲ್ಲಿ ಸದಸ್ಯರಾಗಿ, ಕರ್ನಾಟಕ ಕಲಾವರ್ತೆ, ಕರ್ನಾಟಕ ಲಲಿತಕಲಾ ಅಕಾಡೆಮಿ ಪತ್ರಿಕೆಗಳಿಗೆ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೃಷ್ಣಯ್ಯ ಅವರ ಸಾಹಿತ್ಯ ಕೃಷಿಯ ಹರಹುಗಳು ಹಲವು. ಸಂಪಾದಿತ ಕೃತಿಗಳು – ರನ್ನನ ಅಜಿರಪುರಾಣ ಸಂಗ್ರಹ, ಬಿರಿಮೊಗ್ಗು (ಪ್ರಬಂಧ), ಹೊಳಪು-ಝಳಪು (ಕವನ), ಕಾಲು ಶತಮಾನ ಕಂಡ ಕನ್ನಡ ಪತ್ರಿಕೆಗಳು (ಪತ್ರಿಕಾ ಅಕಾಡೆಮಿ), ಕಲಾವಿಮರ್ಶಾ ಕೃತಿಗಳು-ಶೃಂಗಾರ ಲಹರಿ, ಎಂ.ಆರ್.ಹಡಪದ್, ಕಲಾಲೋಕದ ದಿಗ್ಗಜಗಳ ರಚನೆಯ ತಲಸ್ಪರ್ಶಿ ಇತಿಹಾಸ ಅಧ್ಯಯನದ ಅಜಂತ ಎಲ್ಲೋರ, ರೂಪಶಿಲ್ಪಿ ಬಸವಯ್ಯ, ಎಚ್.ಎನ್. ಕುಲಕರ್ಣಿ ಮುಂತಾದವರ ಬಗ್ಗೆ ರಚಿಸಿದ ಕೃತಿಗಳು, ಜೀವನಚರಿತ್ರೆ- ‘ ತ್ಯಾಗಯೋಗಿ’ ಕನಕಪುರದ ಎಸ್. ಕರಿಯಪ್ಪ, ಎಚ್.ಕೆ.ವೀರಣ್ಣಗೌಡರು. ಸಾಹಿತ್ಯವಿಮರ್ಶೆ- ಕಾವ್ಯಭಾಷೆ, ಸಾಹಿತ್ಯ ಕಲೆ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ನಾಟಕ ಮತ್ತು ಸೌಂದರ್ಯ ಪ್ರಜ್ಞೆ, ನಿಟ್ಟೂರು ನೂರರ ನೆನಪು ಮುಂತಾದ ಗ್ರಂಥಗಳು, ಕಲೆ ಮತ್ತು ರಸಸ್ವಾದನೆ, ಸಾಹಿತ್ಯ ಮತ್ತು ಕಲೆಗಲ್ಲಿ ಪರಿವರ್ತನೆ ಮತ್ತು ಪ್ರಗತಿ, ಸಾಲುದೀಪಗಳು, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಹಳೆಯ ಗದ್ಯ ಸಾಹಿತ್ಯ, ಸುವಿದ್ಯಾ, ಬೆಂಗಳೂರು ಕೆಂಪೇಗೌಡರ ವಂಶಸ್ಥರು, ಮೂರ್ತಾಮೂರ್ತ, ಕುವೆಂಪು ಸಾಹಿತ್ಯ-ಚಿತ್ರಸಂಪುಟ, ಬೆಂಗಳೂರು ದರ್ಶನ ಮುಂತಾದ ಕೃತಿಗಳು ಅವರ ಅಧ್ಯಯನ ಮತ್ತು ಕೃತಿ ರಚನೆ-ಸಂಪಾದನಾ ಶಿಸ್ತಿಗೆ ಸಾಕ್ಷಿಯಾಗಿವೆ.
ಎಂ.ಎಚ್. ಕೃಷ್ಣಯ್ಯನವರ ಸಾಧನೆಗೆ ಅರಸಿ ಬಂದ ಪುಸ್ಕಾರ-ಸಮ್ಮಾನಗಳು ಹಲವು, ಅವರ ಶೃಂಗಾರ ಲಹರಿಗೆ ಕರ್ನಾಟಕ ಲಲಿತಕಲ ಅಕಾಡೆಮಿಯ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿವೆ. ಮಾಡಸ್ತಿ ಪ್ರಶಸ್ತಿ ಅವರಿಗೆ ಸಂದ ಮತ್ತೊಂದು ವಿಶಿಷ್ಟ ಗೌರವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವವೂ ಸೇರೆದಂತೆ ಹಲವಾರು ಗೌರವ-ಸಮ್ಮಾನಗಳು ಅವರ ಸಿರಿ ಮುಡಿಗೇರಿವೆ, ನಾಡೋಜ ಎಂ.ಎಚ್.ಕೃಷ್ಣಯ್ಯ ಅವರ ಅಧ್ಯಯನ ಮತ್ತು ಸಾಹಿತ್ಯ ಸಿರಿಯ ಸಂರಕ್ಷಣೆ ಮತ್ತು ಸಂಪಾದನೆಯ ಆಸಕ್ತಿ ಮುಂದಿನ ತಲೆಮಾರಿಗೂ ವಿಸ್ತಿರಿಸಲಿ ಎಂದು ಆಸಿಸುತ್ತೇವೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *