LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಕರ್ಮಿಗಳು

ಶ್ರೀ ಸಿ. ಬಸವಲಿಂಗಯ್ಯ

ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಸಂಘಟಕರಾಗಿ, ಕನ್ನಡ ರಂಗಭೂಮಿಗೆ ವಿಶೇಷತೆ ತಂದುಕೊಟ್ಟವರು ಶ್ರೀ ಸಿ. ಬಸವಲಿಂಗಯ್ಯ ಅವರು. ಜನನ 1959ರಲ್ಲಿ ಕನ್ನಡ ಸ್ನಾತಕೋತ್ತರ ಪದವಿಯ ಜೊತೆಗೆ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಶ್ರೀಯುತರು ಕನ್ನಡ ರಂಗಭೂಮಿಗೆ ರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿರುವ ಪ್ರಮುಖ ಕಲಾವಿದರು.
ರಾಷ್ಟ್ರಿಯ ನಾಟಕ ಶಾಲೆಯ ಫೆಲೋಶಿಪ್ನಲ್ಲಿ ಉತ್ತರ ಕರ್ನಾಟಕದ ಜಾನಪದ ರಂಗಕಲೆಗಳ ಅಧ್ಯಯನ ಮಾಡಿದ ಬಸವಲಿಂಗಯ್ಯನವರು ರಂಗಭೂಮಿಯ ಸಮಗ್ರ ಅಭಿವೃದ್ಧಿಯ ಸಂಚಾಲಕರಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ. ನಾಟಕ ಕರ್ನಾಟಕ ರಂಗಾಯಣದ ರೆಪರ್ಟರಿಯಲ್ಲಿ ರಂಗಪ್ರಮುಖರಾಗಿ ಹಾಗೂ ರಂಗ ತರಬೇತಿ ಶಿಬಿರಗಳ ಸಂಘಟಕರಾಗಿ ಹಾಗೂ ರಂಗಾಯಣದ ನಿರ್ದೇಶಕರಾಗಿ ರಂಗಭೂಮಿಗಾಗಿ ಇವರು ನೀಡಿದ ಕೊಡುಗೆ ಅಮೂಲ್ಯವಾದುದು. ಒಂದು ದಶಕ ಕಾಲ ‘ಸಮುದಾಯ’ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ‘ಪದ್ಮಶ್ರೀ ಬಿ.ವಿ. ಕಾರಂತ ಅಧ್ಯಯನ ಪೀಠ’ದ ಗೌರವ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಯುತರು ಕನ್ನಡ, ಹಿಂದಿ ತೆಲುಗು, ಮಾಲಯಾಳಂ ಸೇರಿದಂತೆ 30ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಮಾದಾರಿ ಮಾದಯ್ಯ, ಸಂಕ್ರಾಂತಿ, ಹುಲಿಯ ನೆರಳು, ಮ್ಯಾಕ್ಬೆತ್, ಸಂತ್ಯಾಗ ನಿಂತಾನ, ಕಬೀರ, ಅಂಧಯುಗ, ಉಚಲ್ಯ, ಕುಸುಮಬಾಲೆ ಇವರ ನಿರ್ದೇಶನದ ಪ್ರಮುಖ ನಾಟಕಗಳಾಗಿದ್ದು, ಜನಮನದಲ್ಲಿ ನೆಲೆಯೂರಿವೆ.
ಸುಮಾರು 80ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ರಾಷ್ಟ್ರವ್ಯಾಪಿ ಸಂಘಟಿಸಿ ರಂಗಚಳುವಳಿಯನ್ನು ನಿರಂತರವಾಗಿ ಕಾಯ್ದಿಟ್ಟುಕೊಂಡ ಕ್ರಿಯಾಶೀಲ ಶ್ರೀ ಸಿ. ಬಸವಲಿಂಗಯ್ಯನವರಿಗೆ 1996 ರಲ್ಲಿ ಕರ್ನಾಟಕ ನಾಟಕ ಆಕಾಡೆಮಿ ಫೆಲೋಷಿಪ್ ನೀಡಿ ಗೌರವಿಸಿದೆ.
ರಂಗಪ್ರಯೋಗದ ವಿಭಿನ್ನ ಸಾಧ್ಯತೆಗಳನ್ನು ನಿರಂತರವಾಗಿ ಅನ್ವೇಷಿಸಿದ ಶ್ರೀಯುತರು ಆಧುನಿಕ ಬದುಕಿನ ಆಯಾಮಾಗಳ ನಿರಂತರ 9 ಗಂಟೆಗಳ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಯಶಸ್ವಿ ರಂಗರೂಪ ಪ್ರದರ್ಶನ ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗೆ ಮಾನವನ ಏಕತೆ ಪ್ರತಿಪಾದಿಸಿದ ಎಲ್ಲಾ ಸಂತರ, ಮಹಾನೀಯರ ಸಂದೇಶ ಪ್ರತಿಪಾದಿಸಿದ 2000 ವರ್ಷಗಳ ನಾಗರಿಕತೆಯ ‘ಮನುಷ್ಯ ಜಾತಿ ತಾನೊಂದೇ ವಲಂ’ ಇವರ ಸಾಧನೆಯ ಮತ್ತೊಂದು ಮೈಲುಗಲ್ಲು.
2001ರಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿ ಪುರಸ್ಕೃತರಾದ ಶ್ರೀ ಸಿ. ಬಸಲಿಂಗಯ್ಯನವರ ನಾಡಿನ ಸೇವೆ ನಿರಂತರವಾಗಿರಲಿ. ಕರ್ನಾಟಕದ ಕೀರ್ತಿಯನ್ನು ಉನ್ನತ ಶಿಖರಕ್ಕೇರಿಸಲಿ, ಅವರಿಗೆ ಶುಭಾಗಲಿ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *