LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಕರ್ಮಿಗಳು

ಪ್ರೊ. ಜಿ.ಕೆ. ಗೋವಿಂದರಾವ್

ಪ್ರೊ. ಜಿ.ಕೆ. ಗೋವಿಂದರಾವ್ ಮೂಲತಃ ಇಂಗ್ಲೀಷ್ ಪ್ರಾಧ್ಯಾಪಕರು, ನಾಟಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚಿನಿಂದ ಆಪಾರ ಆಸಕ್ತಿ ಹೊಂದಿ, ನವ್ಯ ಕಥೆ, ಕಾವ್ಯ, ನಾಟಕಗಳ ರೂಪುರೇಷೆಗಳು ಗರಿಗಟ್ಟಿಕೊಳ್ಳುತ್ತಿದ್ದ ಆರಂಭದ ದಿನಗಳಲ್ಲಿ ಚಕಮಕಿಯ ಕಾವಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ನಾಟಕ ರಚನಾಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ನಾಟಕಾಭಿಮಾನಿಗಳ ಗಮನ ಸೆಳೆದರು. ಪ್ರೊ. ಜಿ.ಕೆ. ಗೋವಿಂದರಾವ್ ಅತ್ಯುತ್ತಮ ನಟರು ಮತ್ತು ನಾಟಕಕಾರರು, ಸಮುದಾಯ ಸಂಸ್ಥೆಯನ್ನು ಒಳಗೊಂಡಂತೆ ಬಹಳಷ್ಟು ನಾಟಕ ಸಂಸ್ಥೆಗಳ ಪದಾಧಿಕಾರಿಗಳಾಗಿ ಹಲವಾರು ಅರ್ಥಪೂರ್ಣವಾದ ನಾಟಕಗಳು ರಂಗಕ್ಕೆ ಬರಲು ಕಾರಣರಾದವರು.
ತುಂಬ ಭಿನ್ನವಾದ ಶೈಲಿಯಲ್ಲಿ ಅಂಕುರ್ ನಿರ್ದೇಶಿಸಿದ್ಧ ‘ಸಂಸ್ಕಾರ’ ನಾಟಕದಲ್ಲಿ ಪ್ರಾಣೇಶಾಚಾರಿಯಾಗಿ ಪ್ರೊ.ಜಿ.ಕೆ. ಗೋವಿಂದರಾವ್ ರವರ ಅಭಿನಯ ಸ್ಮರಣೀಯವಾದುದು. ಅಲ್ಲದೇ ‘ಸಮುದಾಯ’ ಹಾಗೂ ನಾಟಕ ಗೋಷ್ಠಿಗಳಲ್ಲಿ ಪ್ರಬಂದ ಮಂಡಿಸಿ ದಿನಪತ್ರಿಕೆ, ವಾರ್ತಾ ಇಲಾಖೆಯ ವಾರ್ತಾ ಪತ್ರ, ಸಾಂಸ್ಕೃತಿಕ ಪತ್ರಿಕೆಗಳಿಗೆ ವಿದ್ವತ್ಪೂರ್ಣ ಲೇಖನಗಳನ್ನು ಬರೆದು ಓದುಗರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ. ಚೆಕಾವ್, ಇಬ್ಸನ್, ಷೇಕ್ಸ್ಪಿಯರ್ ಮೊದಲಾದ ನಾಟಕಕಾರರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲಷ್ಟು ಅಧ್ಯಯನ ಮಾಡಿದ್ದಾರೆ.
‘ಎಂಟರ್ ಎ ಫ್ರೀಮ್ಯಾನ್’, ‘ಆಲ್ ಮೈಸನ್ಸ್’ ನಾಟಕದ ಕನ್ನಡ ರೂಪಾಂತರ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ ಬಿ.ವಿ. ಕಾರಂತರ ನಿರ್ದೇಶನದ ‘ಚೆಗೆವಾರಾ’ದಲ್ಲಿ ಪ್ರಸನ್ನರ ನಿರ್ದೇಶನದ ‘ಮ್ಯಾಕಬೆತ್ನಲ್ಲಿ’ ಇವರ ಅಭಿನಯ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತದ್ದು. ನಾಟಕ ರಂಗದಲ್ಲಿನ ಇವರ ಸಾಧನೆ ಮೆಚ್ಚಿದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರ ಕಣಗಾಲ ಪುಟ್ಟಣ್ಣನವರು ‘ಕಾಲೇಜುರಂಗ’ ಹಾಗೂ ‘ಹಂಗು’ ಚಿತ್ರಗಳಲ್ಲಿ ಇವರನ್ನು ಅಭಿನಯಕ್ಕೆಂದು ಆಹ್ವಾನಿಸಿದರು. ಆನಂತರ ಪ್ರೊ.ಜಿ.ಕೆ. ಗೋವಿಂದರಾವ್ ಬಹಳಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿ ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ನಾಟಕಾಭಿಮಾನದಿಂದಾಗಿ ತಾವು ಅಧ್ಯಾಪನ ಮಾಡಿದ ಕಾಲೇಜಿನಲ್ಲಿ ಕನ್ನಡ ನಾಟಕಗಳ ಅಭಿನಯ ಶಿಬಿರಗಳಿಗೆ ತಳಪಾಯ ಹಾಕಿದರು ಅತ್ಯುತ್ತಮ ವಾಗ್ಮಿಗಳಾದ ಪ್ರೊ.ಜಿ.ಕೆ. ಗೋವಿಂದರಾವ್ ರವರು ರಂಗಭೂಮಿ, ಚಲನಚಿತ್ರ, ಕಿರುತೆರೆ, ಸಾಹಿತ್ಯ, ಶಿಕ್ಷಣ, ಸಾಮಾಜಿಕ ಕಳಕಳಿ, ಜನಪರ ಚಳುವಲಿ ಹೀಗೆ ಬಹುಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು ತಮ್ಮ ನೇರ ನಿಷ್ಠುರ ನಿಲುವಿಗೆ ಹೆಸರಾದವರು. ತಮ್ಮ ಜನಪರವಾದ ನಿಲುವನ್ನು ನಿರ್ದಾಕ್ಷಿಣ್ಯವಾಗಿ ಪ್ರಕಟಿಸಿದವರು. ಅಷ್ಟೇ ಸಜ್ಜನರು. ಶ್ರೀಯುತರು ನಮ್ಮ ನಾಡಿನ ಸಾಂಸ್ಕೃತಿಕ, ಬೌದ್ಧಿಕ ಲೋಕದ ಆಸ್ತಿ. ಇದು ನಾಡಿನ ಹೆಮ್ಮೆಯ ಸಂಗತಿಯಾಗಿದೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *