LOADING

ಹುಡುಕಲು ಟೈಪ್ ಮಾಡಿ

ನಾಟಕ ಮನೆಯಂಗಳದಲ್ಲಿ ಮಾತುಕತೆ

ಶ್ರೀ ವಿ. ರಾಮಮೂರ್ತಿ

ನಿರ್ದೇಶನ, ಅಭಿನಯ, ಮೂಕಾಭಿನಯ, ರಂಗವಿನ್ಯಾಸ, ಬೆಳಕು ವಿನ್ಯಾಸ, ರಂಗಸಂಗೀತ, ಪ್ರಸಾಧನ ಹಾಗೂ ವಸ್ತ್ರವಿನ್ಯಾಸ – ಹೀಗೆ ರಂಗಭೂಮಿಯ ಎಲ್ಲಾ ವಿಭಾಗಗಳಲ್ಲಿ ಅಪಾರ ಪರಿಣತಿ ಸಾಧಿಸಿರುವ ಶ್ರೀ ವಿ.ರಾಮಮೂರ್ತಿ ಅವರು ವಿಶೇಷವಾಗಿ, ಬೆಳಕಿನ ಸಂಯೋಜನೆಯಲ್ಲಿ ನಿಷ್ಣಾತರಾಗಿರುವ ಪ್ರತಿಭಾವಂತ ರಂಗಕರ್ಮಿ.
ದಿನಾಂಕ ೨೪.೦೨.೧೯೩೫ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀ ರಾಮಮೂರ್ತಿ ಬಾಲ್ಯದಿಂದಲೂ ನಾಟಕದ ಕಡೆಗೆ ಒಲವು ಹೊಂದಿದ್ದವರು. ತಂದೆ ದಿವಂಗತ ಪ್ರೊ.ಬಿ.ವೆಂಕಟಾದ್ರಿ ಶರ್ಮ, ತಾಯಿ ದಿವಂಗತ ಶ್ರೀಮತಿ ವಿ. ಪದ್ಮಾವತಮ್ಮ. ೧೯೬೧-೧೯೬೪ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿಯ ವಿದ್ಯಾರ್ಥಿ ವೇತನ ಪಡೆದು ರಾಷ್ಟ್ರೀಯ ನಾಟಕಶಾಲೆಯಿಂದ ನಿರ್ದೇಶನ ಮತ್ತು ರಂಗ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ. ೧೯೬೬-೬೮ರಲ್ಲಿ ಅಮೆರಿಕ ಸರ್ಕಾರದ ‘ಈಸ್ಟ್-ವೆಸ್ಟ್ ಸೆಂಟರ್’ನ ವಿದ್ಯಾರ್ಥಿವೇತನ ಪಡೆದು ರಂಗತಂತ್ರಗಳಲ್ಲಿ ಪದವಿ, ೧೯೬೮-೧೯೭೧ರ ವರೆಗೆ ನ್ಯೂಯಾರ್ಕ್ ನಗರದಲ್ಲಿರುವ ಯು.ಎಸ್. ಇನ್ಸ್ಟಿಟ್ಯೂಟ್ ಫಾರ್ ಥಿಯೇಟರ್ ಟೆಕ್ನಾಲಜಿ ವಿದ್ಯಾರ್ಥಿವೇತನವನ್ನು ಪಡೆದು ರಂಗತಂತ್ರಜ್ಞಾನ (Theatre & lighting technology) ದಲ್ಲಿ ಪದವಿಯನ್ನು ಪಡೆದಿರುತ್ತಾರೆ.

ನ್ಯೂಯಾರ್ಕ್ ನಗರ, ಅಮೆರಿಕಾ ಮತ್ತು ಯುರೋಪ್ನ ಪ್ರಮುಖ ಕೇಂದ್ರಗಳಲ್ಲಿ ರಂಗಭೂಮಿಯ ಎಲ್ಲಾ ವಿಭಾಗಗಳಲ್ಲಿ ಕೆಲಸಮಾಡಿ ಅಪಾರವಾದ ಅನುಭವ ಪಡೆದಿರುತ್ತಾರೆ. ನ್ಯೂಯಾರ್ಕ್ ನಗರದಲ್ಲಿರುವ ಬೆಳಕಿನ ಉಪಕರಣಗಳನ್ನು ತಯಾರು ಮಾಡುವ ಕ್ಲಿಗಲ್ ಬ್ರದರ್ಸ್ (Kliegl Brothers) ಸಂಸ್ಥೆಯಲ್ಲಿ ತಾಂತ್ರಿಕ ಬೆಳಕು ವಿನ್ಯಾಸಕರಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಭಾರತದ ಬೇರೆ ಬೇರೆ ಪ್ರದೇಶದ ಸುಮಾರು ೫೦ಕ್ಕೂ ಹೆಚ್ಚು ರಂಗಶಾಲೆಗಳಿಗೆ ಸಲಹೆಗಾರರಾಗಿ, ಭಾರತದಲ್ಲಿರುವ ೮ ವಿಶ್ವವಿದ್ಯಾಲಯಗಳ ರಂಗಭೂಮಿ ವಿಭಾಗಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ರಂಗಭೂಮಿಯ ಬಗೆಗೆ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆಗೆ ಪಾತ್ರರು. ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಶ್ರೀಯುತರಿಗೆ ೧೯೭೨ರಲ್ಲಿ ದೆಹಲಿಯಲ್ಲಿ ನಡೆದ ಏಷಿಯಾ-೭೨ ಪ್ರದರ್ಶನದಲ್ಲಿ ಬೆಳಕು ವಿನ್ಯಾಸಕ್ಕೆ ಫಿಲಫ್ಸ್ ಪ್ರಶಸ್ತಿ, ೧೯೭೮ರಲ್ಲಿ ಬೆಳಕು ವಿನ್ಯಾಸಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ: ೧೯೮೫ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ: ೧೯೭೭ರಲ್ಲಿ ರಾಷ್ಟ್ರಮಟ್ಟದ ಚಮನ್ಲಾಲ್ ಸ್ಮಾರಕ ಪ್ರಶಸ್ತಿ: ೨೦೦೧ರಲ್ಲಿ ಉತ್ತರ ಪ್ರದೇಶದ ಭಾರತೇಂದು ನಾಟಕ ಅಕಾಡೆಮಿ ಪ್ರಶಸ್ತಿ: ಹಾಗೂ ೨೦೦೬ರಲ್ಲಿ ಬಿ.ವಿ.ಕಾರಂತ ಸ್ಮೃತಿ ಪುರಸ್ಕಾರ: ನವೆಂಬರ್ ೨೦೦೮ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.
ರಾಷ್ಟ್ರಾದ್ಯಂತ ಸುಮಾರು ಮೂವತ್ತೈದು ರಂಗಮಂದಿರಗಳ ಕಟ್ಟಡಗಳಿಗೆ ಬೆಳಕಿನ ವ್ಯವಸ್ಥೆಯ ವಿನ್ಯಾಸ ಸಲಹೆಗಾರರಾಗಿ ಕೆಲಸ ನಿರ್ವಹಿಸಿರುವ, ರಂಗಭೂಮಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದು ಕರ್ನಾಟಕಕ್ಕೆ ಕೀರ್ತಿ ತಂದಿರುವ ಕ್ರಿಯಾಶೀಲ ರಂಗತಜ್ಞರು ಶ್ರೀ ವಿ. ರಾಮಮೂರ್ತಿ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *