LOADING

ಹುಡುಕಲು ಟೈಪ್ ಮಾಡಿ

ಜಾನಪದ ಮನೆಯಂಗಳದಲ್ಲಿ ಮಾತುಕತೆ

ಶ್ರೀ ತಂಬೂರಿ ಜವರಯ್ಯ

ಬದುಕಿನ ಬಂಡಿಗೆ ತಂಬೂರಿಯನ್ನೇ ಜೀವಾಳವನ್ನಾಗಿಸಿಕೊಂಡು ಮನೆ ಮನೆಗೂ ತತ್ವಪದಗಳನ್ನು ಹಾಡುವ ಮೂಲಕ ಜಾನಪದ ಕ್ಷೇತ್ರದ ಮೆರಗನ್ನು ವಿಸ್ತಾರಗೊಳಿಸಿದ ಹಿರಿಯ ಜನಪದ ಕಲಾವಿದ ಶ್ರೀ ತಂಬೂರಿ ಜವರಯ್ಯ ಅವರು.
ಶ್ರೀ ತಂಬೂರಿ ಜವರಯ್ಯ ಅವರು ಹುಟ್ಟಿದ್ದು ದಿನಾಂಕ ೧೯.೭.೧೯೩೭ರಲ್ಲಿ ಮಂಡ್ಯ ಜಿಲ್ಲೆ, ಬಸರಾಳು ಹೋಬಳಿ, ಹುನಗನಹಳ್ಳಿಯಲ್ಲಿ. ತಂದೆ ಜಾಂಬಾಡಿ ದಾಸಯ್ಯ, ತಾಯಿ ಗಿರಿಗಮ್ಮ. ಅಂದಿನ ಕಡುಬಡತನದಲ್ಲಿ ಇವರು ಕಲಿಯಲು ಸಾಧ್ಯವಾಗಿದ್ದು ಪ್ರಾಥಮಿಕ ಶಾಲೆಯ ೫ನೇ ತರಗತಿ ಮಾತ್ರ. ತಂದೆಯಿಂದ ಬಳುವಳಿಯಾಗಿ ಬಂದ ತತ್ವಪದಗಳನ್ನೇ ಮನೆ ಮನೆಗೂ ಹಾಡುತ್ತ ಅಕ್ಷರಶಃ ಭಿಕ್ಷಾಟನೆಯಿಂದ ಜೀವನ ಸಾಗಿಸುವ ಕಾಯಕ ಇವರದು. ಪತ್ನಿ ಬೋರಮ್ಮನವರೊಂದಿಗೆ ಗುರುದೀಕ್ಷೆಯನ್ನು ಪಡೆದು ಕನ್ನಡದ ಅನುಭಾವಿ ಪರಂಪರೆಯಲ್ಲಿ ಬಹುದೊಡ್ಡ ಪರಂಪರೆಯಾದ ತತ್ವಪದಗಳನ್ನು ಹಾಡುತ್ತ, ಜನಪದ ಹಿರಿಮೆಯನ್ನು ವಿಸ್ತಾರಗೊಳಿಸಿದ ಹಿರಿಯ ಜೀವ ತಂಬೂರಿ ಜವರಯ್ಯ ಅವರದು. ಕಳೆದ ೫೦ ವರ್ಷಗಳಿಂದಲೂ ತತ್ವಪದಗಳನ್ನು ಹಾಡುವ ಕಾಯಕಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಸಿಟ್ಟುಕೊಂಡಿದ್ದಾರೆ.
ಶಿಶುನಾಳ ಷರೀಫ, ನಾಗಲಿಂಗಯೋಗಿ, ಕೈವಾರ ನಾರಾಯಣಪ್ಪ, ಕಡಕೋಳು ಮಡಿವಾಳಪ್ಪ, ಶಂಕರಾನಂದ ಶಿವಯೋಗಿ ಮುಂತಾದವರ ತತ್ವಪದಗಳನ್ನು ಹಾಡುತ್ತ ಭಿಕ್ಷಾಟನೆಯ ಮೂಲಕ ಜನತೆಯ ನಡುವೆಯೇ ಬದುಕುತ್ತಿರುವ ಕಲಾವಿದ. ತಾವು ಹಾಡುವ ತತ್ವಪದಗಳಲ್ಲಿರುವ ತತ್ವಗಳನ್ನು ಜನತೆಗೆ ತಿಳಿ ಹೇಳುತ್ತಾ, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ತಿಳಿಗೊಳಿಸುವಲ್ಲಿ ಇವರ ಪಾತ್ರ ಹಿರಿದು. ಅಂತೆಯೇ ಈ ದಂಪತಿಗಳನ್ನು ಮಂಡ್ಯ ಜಿಲ್ಲೆಯ ಜನತೆ ಆದರದಿಂದ ಕಾಣುತ್ತದೆ.
ನಾಡಿನ ಉದ್ದಗಲಕ್ಕೂ ಮನೆ ಮನೆಗಳಿಗೂ ತತ್ವಪದಗಳ ಸಾರವನ್ನು ಉಣಬಡಿಸಿರುವ ದಂಪತಿಗಳು ಬೆಂಗಳೂರು ದೂರದರ್ಶನದ ಮೂಲಕ ಹಲವಾರು ತತ್ವಪದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೈಸೂರು ದಸರ, ಬಳ್ಳಾರಿ ಜಿಲ್ಲೆ ಗಡಿನಾಡು ಉತ್ಸವ, ಬೆಂಗಳೂರು ವಿಶ್ವವಿದ್ಯಾಲಯ, ಬೆಳಗಾವಿ, ಮಂಡ್ಯ, ಬೀದರ್, ಶಿವಮೊಗ್ಗ, ಹಾಸನ ಮುಂತಾದ ಜಿಲ್ಲಾ ಉತ್ಸವಗಳಲ್ಲಿ ತತ್ವಪದಗಳನ್ನು ಹಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮ ಇಳಿ ವಯಸ್ಸಿನಲ್ಲಿಯೂ ತತ್ವಪದ ಹಾಡುವುದನ್ನೇ ನಿತ್ಯ ಕಾಯಕವನ್ನಾಗಿಸಿಕೊಂಡಿರುವ ಶ್ರೀಯುತರು ಪತ್ನಿ ಬೋರಮ್ಮನವರೊಂದಿಗೆ ಸುಶ್ರಾವ್ಯವಾಗಿ ನೂರಾರು ತತ್ವಪದಗಳನ್ನು ಹಾಡಬಲ್ಲರು.ಇವರ ಕಲಾಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವದಿಂದ ಸನ್ಮಾನಿಸಿ, ಸತ್ಕರಿಸಿವೆ.ಜನಪದ ಕ್ಷೇತ್ರದ ತತ್ವಪದ ಪರಂಪರೆಗೆ ಇವರು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ೧೯೯೮ರಲ್ಲಿ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *