LOADING

ಹುಡುಕಲು ಟೈಪ್ ಮಾಡಿ

ನಾಟಕ ಮನೆಯಂಗಳದಲ್ಲಿ ಮಾತುಕತೆ

ಶ್ರೀಮತಿ ರಂಗನಾಯಕಮ್ಮ

ಕನ್ನಡದ ವೃತ್ತಿರಂಗಭೂಮಿಯ ಅಭಿಜಾತ ಕಲಾವಿದೆ ಶ್ರೀಮತಿ ರಂಗನಾಯಕಮ್ಮ ಅವರು.ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ ೧೯೪೦ರಲ್ಲಿ.ತಂದೆ ಶ್ರೀ ಕೇಶವನ್ ಅವರು, ತಾಯಿ ಶ್ರೀಮತಿ ಶಾರದಮ್ಮ ಅವರು.ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರು ತಂದೆಯ ಆಶ್ರಯದಲ್ಲಿಯೇ ಬೆಳೆದರು.ಕಲಿತಿದ್ದು ೫ನೇ ತರಗತಿ ಮಾತ್ರ. ೧೯೪೮ರಲ್ಲಿ ಸುಬ್ಬಯ್ಯನಾಯ್ಡು ಕಂಪನಿಯ ಮೂಲಕ ಕೃಷ್ಣಲೀಲೆ ನಾಟಕದಲ್ಲಿ ಶ್ರೀ ಕೃಷ್ಣನ ಪಾತ್ರಧಾರಿಯಾಗಿ ರಂಗಪ್ರವೇಶ ಪಡೆದ ಇವರು ಸಂಗೀತವನ್ನು ದಿ|| ಎಂ.ಶಂಕರಯ್ಯ ಮತ್ತು ವೆಂಕೋಬರಾವ್ ಅವರಲ್ಲಿ, ರಂಗಸಂಗೀತವನ್ನು ಬಿ.ಎಂ.ನಾರಾಯಣದಾಸ್, ಟೋಪಿ ಮುನಿಸ್ವಾಮಪ್ಪ, ಯೋಗ ನರಸಿಂಹಮೂರ್ತಿ ಮತ್ತು ಆರ್.ಪರಮಶಿವನ್ ಅವರಲ್ಲಿ ಕಲಿತರು.
ಶ್ರೀಮತಿ ರಂಗನಾಯಕಮ್ಮ ಅವರು ತಮ್ಮ ವೃತ್ತಿನಾಟಕ ಜೀವನದ ಸುಮಾರು ೨೫ ವರ್ಷಗಳ ಕಾಲ ಗುಬ್ಬಿಕಂಪನಿಯಲ್ಲಿ ಸೇವೆ ಸಲ್ಲಿಸಿದ ಇವರು ಸುಬ್ಬಯ್ಯನಾಯ್ಡು ಕಂಪನಿ, ಹೊನ್ನಪ್ಪ ಭಾಗವತ ಕಂಪನಿ, ಸುಳ್ಯ ದೇಸಾಯಿಯವರ ಕಂಪನಿ, ಮಹಾಂತೇಶ ಶಾಸ್ತ್ರಿಗಳ ಕಂಪನಿ, ಯೋಗ ನರಸಿಂಹಮೂರ್ತಿಗಳ ಕಂಪನಿ, ಎಂ.ಸಿ.ಮಹದೇವಸ್ವಾಮಿಗಳ ಕಂಪನಿ, ಸ್ತ್ರೀ ನಾಟಕ ಮಂಡಳಿ, ಶ್ರೀಕಂಠಮೂರ್ತಿಗಳ ಕಂಪನಿ ಹಾಗೂ ಮಾಸ್ಟರ್ ಹಿರಣ್ಣಯ್ಯನವರ ಕಂಪನಿಗಳಲ್ಲೂ ಸೇವೆ ಸಲ್ಲಿಸಿದ್ದಾರೆ.
ಬೇಡರಕಣ್ಣಪ್ಪ, ಶ್ರೀಕೃಷ್ಣಲೀಲೆ, ಭೂ ಕೈಲಾಸ, ಜಗಜ್ಯೋತಿ ಬಸವೇಶ್ವರ, ಕುರುಕ್ಷೇತ್ರ, ಸದಾರಮೆ, ಗಾಜಿನಮನೆ, ಶ್ರೀನಿವಾಸ ಕಲ್ಯಾಣ, ದಾನಶೂರಕರ್ಣ, ಲಂಚಾವತಾರ, ದೇವದಾಸಿ, ಮಕಮಲ್ ಟೋಪಿ, ಎಚ್ಛಮ ನಾಯಕ, ರಾಜಾ ವಿಕ್ರಮ, ಚಂದ್ರಹಾಸ, ಅತ್ತೆಸೊಸೆ ಮುಂತಾದ ಹಲವಾರು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ವಿವಿಧ ಪಾತ್ರಗಳಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.
೧೯೪೬ರಲ್ಲಿ ‘ಲೋಕನಾಥ ಮಿತ್ರ ಮಂಡಲಿ’ ಎಂಬ ಹೆಸರಿನಲ್ಲಿ ಸ್ವಂತ ಕಂಪನಿಯನ್ನು ಕಟ್ಟಿ ಎರಡು ವರ್ಷಗಳ ಕಾಲ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ ಶ್ರೀಮತಿ ರಂಗನಾಯಕಮ್ಮ ಅವರು ರಂಗಭೂಮಿಯ ಜೊತೆಗೆ ಮೌನಗೀತೆ, ಬಿಸಿರಕ್ತ, ಬೆಟ್ಟದ ಗೌರಿ, ಚಕ್ರ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುವ ಮುಳಕ ಚಲನಚಿತ್ರರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ.
ವೃತ್ತಿರಂಗಭೂಮಿಯಲ್ಲಿ ಸುಮಾರು ೫೫ ವರ್ಷಗಳ ಕಾಲ ಇವರು ಸಲ್ಲಿಸಿರುವ ಸುದೀರ್ಘ ಸೇವೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.ಅಭಿನಯ ಸರಸ್ವತಿ, ನಾಟ್ಯಗಾನಕೋಗಿಲೆ ಇತ್ಯಾದಿ ಬಿರುದುಗಳನ್ನು ಪಡೆದಿರುವ ಶ್ರೀಮತಿ ರಂಗನಾಯಕಮ್ಮ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ೧೯೯೦ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.ಅಲ್ಲದೆ, ಕರ್ನಾಟಕ ಸರ್ಕಾರ ಇವರ ಕಲಾಸೇವೆಯನ್ನು ಗುರುತಿಸಿ ೨೦೦೫ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ವೃತ್ತಿರಂಗಭೂಮಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡು ನಟನೆಯ ಮುಲಕ ರಂಗಭೂಮಿಯ ಅಭಿಜಾತ ಕಲಾವಿದೆ ಎನಿಸಿಕೊಂಡಿರುವ ಸರಳ, ಸಜ್ಜನಿಕೆಯ ಕಲಾವಿದೆ ಶ್ರೀಮತಿ ಎಂಗನಾಯಕಮ್ಮ ಅವರು.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *