LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಭೂಮಿ ಕಲಾವಿದರು

ಶ್ರೀ ಎನ್.ಬಸವರಾಜ ಗುಡಗೇರಿ

ಚಾಣಾಕ್ಷ ಸಂಘಟಕ, ಪರಂಪರೆಯವಾಹಕರೂ ಆದ ನಟ, ನಾಟಕಕಾರ, ರಂಗಭೂಮಿಯಲ್ಲಿ ನಿರಂತರ ಸುಮಾರು ಅರ್ಧ ಶತಮಾನಗಳ ಅನುಭವ ಹೊಂದಿರುವ ಕಲಾವಿದ ಶ್ರೀ ಎನ್.ಬಸವರಾಜ ಗುಡಗೇರಿ ಅವರು.ಹಾವೇರಿ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುಡಗೇರಿಯಲ್ಲಿ ಜನನ.ರೈತ ದಂಪತಿಗಳಾದ ಶ್ರೀಮತಿ ಗೌರಮ್ಮ ಮತ್ತು ಶ್ರೀ ಚನ್ನಪ್ಪ ಅವರ ಮಗ. ಕನಸುಗಾರ ಬಸವರಾಜ ಮಾಸ್ತರರಿಂದ ಹೊಡೆತ ತಿಂದನಂತರ ಮತ್ತೆ ಶಾಲೆಯ ಕಡೆ ತಲೆ ಹಾಕಲಿಲ್ಲ. ಶಾಲೆಗೆ ಶರಣು ಹೊಡೆದು ನಾಟಕದ ಗೀಳಿನಿಂದ ಜೀವನಾಧಾರವಾಗಿದ್ದ ಆಸ್ತಿ ಮಾರಿ ನಾಟಕ ಕಂಪನಿ ಕಟ್ಟಿದವರು ಶ್ರೀ ಗುಡಗೇರಿ ಬಸವರಾಜರು. ಪ್ರಾರಂಭದಲ್ಲಿ ಕುಸ್ತಿಪಟುವಾಗಿ ೨೫೦ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸಿ ನಾಡಿನ ಎಲ್ಲೆಡೆ ಜಯಭೇರಿ ಹೊಡೆದು ಬಹುಮಾನಿತರಾಗಿ ಕರ್ನಾಟಕದಲ್ಲಿ ಹೆಸರುವಾಸಿಯಾದರು.
೧೯೬೩ರಲ್ಲಿ ಶ್ರೀ ಸಂಗಮೇಶ್ವರ ನಾಟ್ಯ ಸಂಘ ಸ್ಥಾಠಪಿಸಿದ್ದಲ್ಲದೆ ಶ್ರೀ ಸಂಗಮೇಶ್ವರ ನಾಟ್ಯ ಸಂಘದ ಹೆಸರಿನಲ್ಲಿ ಮೂರು ಕಂಪನಿಗಳನ್ನು ಹನ್ನೊಂದು ವರ್ಷ ಮತ್ತು ಎರಡು ಕಂಪನಿಗಳನ್ನು ಹದಿನೆಂಟು ವರ್ಷ ನಡೆಸಿದ ದಾಖಲೆ ಇವರದು. ಕಲಿಯುಗದ ರಾಮ, ಛಲ ತೀರಿತು, ಸತ್ಯ ಸತ್ತಿತು, ರೈತನ ಮಕ್ಕಳು, ವಿಧಿ ಕೈವಾಡ, ಹೆತ್ತ ತಾಯಿ, ಸಂಪನ್ನರು ಸಿಟ್ಟಿಗೆದ್ದರೆ, ವರನೋಡಿ ಹೆಣ್ಣು ಕೊಡು, ದುಡ್ಡಿನ ದರ್ಪ, ರಾಜಾವಿಕ್ರಮ ಇತ್ಯಾದಿ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಈ ನಾಟಕಗಳು ಭಾವಪ್ರಧಾನವಾಗಿದ್ದು ಶ್ರೀಮಂತಿಕೆಯ ದರ್ಪ ಬಡತನದ ಸ್ವಾಭಿಮಾನದ ನಡುವಿನ ಸಂಘರ್ಷವನ್ನು ಬಿಂಬಿಸುತ್ತವೆ.ವೀರ ಸಿಂಧೂರ ಲಕ್ಷ್ಮಣ, ರೈತನ ಮಕ್ಕಳು ಇತ್ಯಾದಿ ಚಲನಚಿತ್ರಗಳನ್ನು ಶ್ರೀಯುತರು ನಿರ್ಮಿಸಿದ್ದಾರೆ.
ಎರಡು ಅವಧಿಗೆ ರಾಜ್ಯ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಶ್ರೀಯುತರು ಉತ್ತರ ಕರ್ನಾಟಕ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ, ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ, ರಂಗಕಲಾವಿದರ ಸಂಘದ ಗೌರವ ಅಧ್ಯಕ್ಷ ಇತ್ಯಾದಿ ಹುದ್ದೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ದಾವಣಗೆರೆಯಲ್ಲಿ ಜರುಗಿದ ಪ್ರಥಮ ವೃತ್ತಿ ರಂಗಭೂಮಿ ಕಲಾವಿದರ ಮಹಾಸಮ್ಮೇಳನದ ಅಧ್ಯಕ್ಷರಾಗಿದ್ದರು. ವೃತ್ತಿರಂಗಭೂಮಿಯ ಚಿರಪರಿಚಿತ ಕಲಾಪೋಷಕ, ಕಲಾವಿದರ ಆಶ್ರಯದಾತ, ಸಮಾಜ ಸೇವಕ, ಧಾರ್ಮಿಕ ಮನೋಭಾವದ ಗರಡಿಮನೆಯಿಂದ ರಂಗಮಂಚದವರೆಗಿನ ರಂಗುರಂಗಿನ ಬದುಕಿನ ಕಲಾವಿದ ಶ್ರೀ ಎನ್.ಬಸವರಾಜ ಗುಡಗೇರಿ ಅವರು ವೃತ್ತಿರಂಗಭೂಮಿಗೆ ಕ್ರಿಯಾಶೀಲರಾಗಿ ಸಲ್ಲಿಸಿದ ಅನನ್ಯ ಸೇವೆಗಾಗಿ ಕರ್ನಾಟಕ ಸರ್ಕಾರ ೧೯೯೮ರಲ್ಲಿ ರಾಜ್ಯ ಪ್ರಶಸ್ತಿ ಹಾಗೂ ೨೦೦೮ರ ಸಾಲಿನಲ್ಲಿ ರಂಗಭೂಮಿಗೆ ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *