LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಭೂಮಿ ಕಲಾವಿದರು

ಶ್ರೀಮತಿ ಮಾಲತಿಶ್ರೀ

ಕನ್ನಡ ವೃತ್ತಿರಂಗಭೂಮಿಯ ಶ್ರೇಷ್ಠ ನಟಿಯರ ಸಾಲನಲ್ಲಿ ಎದ್ದು ಕಾಣುವ ಹೆಸರು ಶ್ರೀಮತಿ ಮಾಲತಿಶ್ರೀ ಮೈಸೂರು, ಅವರದು.ದಿನಾಂಕ ೦೧.೦೫.೧೯೫೪ರಲ್ಲಿ ಮೈಸೂರು ಕೆಂಪೆಗೌಡ ಮತ್ತು ಸಿದ್ಧಮ್ಮನವರ ಮಗಳಾಗಿ ಜನಿಸಿದ ಶ್ರೀಮತಿ ಮಾಲತಿಶ್ರೀ ರಂಗನಟಿಯಾಗಿ ಪ್ರಸಿದ್ಧಿ ಪಡೆದಿದ್ದು ಉತ್ತರ ಕರ್ನಾಟಕದಲ್ಲಿ. ಬಾಲ್ಯದಲ್ಲಿನ ಕಷ್ಟ ಕಾರ್ಪಣ್ಯಗಳಿಗಾಗಿ ತಮ್ಮ ಎಂಟನೇ ವಯಸ್ಸಿನಲ್ಲಿ ಶ್ರೀಕಂಠಮೂರ್ತಿ ನಾಟಕ ಕಂಪನಿಯ ಮೂಲಕ ರಂಗ ಪ್ರವೇಶ ಪಡೆದ ಇವರು ಬಣ್ಣದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡರು. ಮುಂದೆ ತಮ್ಮ ಸ್ನೇಹಿತೆಯ ಸಹಾಯದಿಂದ ಗೋಕಾಕದ ಶ್ರೀ ಶಾರದಾ ನಾಟಕ ಮಂಡಳಿ ಕಂಪನಿ ಸೇರಿ ದಿ:ಬಸವರಾಜ ಹೊಸಮನಿ ಅವರ ನಿರ್ದೇಶನದಲ್ಲಿ ನಟಿಯಾಗುವ ಅವಕಾಶ ಪಡೆದರು.
ರಂಗಭೂಮಿಗೆ ತಕ್ಕ ರೂಪ, ಅಭಿನಯ, ನೃತ್ಯ, ಕೌಶಲ್ಯಗಳೆಲ್ಲವನ್ನು ಪಡೆದಿರು ಮಾಲತಿಶ್ರೀ ಎಂತಹ ಪಾತ್ರದಲ್ಲೂ ಮಿಳಿತವಾಗುವಂಥವರು. ಹೆಚ್ಚಾಗಿ ದುಃಖಾಂತ್ಯ ಪಾತ್ರಗಳಲ್ಲಿ ಮಿಂಚಿರುವ ಇವರು ಹಾಸ್ಯ ಪಾತ್ರಗಳಲ್ಲೂ ನಟಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ. ‘ಗೆದ್ದವರು ಯಾರು’ ನಾಟಕದ ಹಾಸ್ಯ ಪಾತ್ರವಂತೂ ಉತ್ತರ ಕರ್ನಾಟಕದ ಪ್ರೇಕ್ಷಕರು ಮರೆಯದ ಪಾತ್ರವಾಗಿದೆ. ‘ ಎಲ್ಲಿಗೆ ಬಂತೋ ಸಂಗಯ್ಯಾಟ’ ನಾಟಕದ ರೂಪಾಳ ಪಾತ್ರ, ‘ಕುಲದೀಪ ನಾಟಕ’ದ ಹುಚ್ಚಿಯ ಪಾತ್ರ ಇವರ ಕಲಾ ಪ್ರತಿಭೆಗೆ ಸಾಕ್ಷಿ.
ಸುಮಾರು ೬೦ ಶೀರ್ಷಿಕೆಗಳ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿರುವ ಮಾಲತಿಶ್ರೀ ರೇಣುಕಾ ದೇವಿ, ಮೈ ಆಟೋಗ್ರಾಫ್ ಮನ್ಮಥ, ತೆನಾಲಿರಾಮ ಮುಂತಾದ ಹದಿನೈದು ಚಲನಚಿತ್ರಗಳಲ್ಲಿ ಸುಮತಿ, ನಾಕುತಂತಿ, ಮಹಾಯಾನ, ಕಲ್ಯಾಣರೇಖೆ, ಮಣ್ಣಿನ ಋಣ ಮುಂತಾದ ನಲವತ್ತಕ್ಕೂ ಹೆಚ್ಚಿನ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪನೋರಮಕ್ಕೆ ಆಯ್ಕೆಯಾದ ‘ಮೊಗ್ಗಿನ ಜಡೆ’ ಸಿನಿಮಾದ ತಾಯಿ ಪಾತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಇವರಿಗೆ ಚಲನಚಿತ್ರ ನಿರ್ದೇಶಕರ ಪ್ರಶಸ್ತಿ ಪ್ರಾಪ್ತವಾಗಿದೆ.
ನಾಡಿನ ವೃತ್ತಿರಂಗಭೂಮಿ, ಚಲನಚಿತ್ರ, ಕಿರುತೆರೆಗಳಲ್ಲಿನ ಇವರ ಮನೋಜ್ಞ ಅಭಿನಯವನ್ನೂ, ಅಪಾರ ಕಲಾ ಸೇವೆಯನ್ನೂ ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತರೂ ಆಗಿರುವ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ೧೯೯೯ರಲ್ಲಿ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *