LOADING

ಹುಡುಕಲು ಟೈಪ್ ಮಾಡಿ

ಖ್ಯಾತ ರಂಗಭೂಮಿ ಕಲಾವಿದರು ಹಾಗೂ ಕವಿಗಳು ಮನೆಯಂಗಳದಲ್ಲಿ ಮಾತುಕತೆ

ಶ್ರೀ ಪಿ.ಬಿ. ಧುತ್ತರಗಿ

ಕರ್ನಾಟಕ ವೃತ್ತಿರಂಗಭೂಮಿಯಲ್ಲಿ ನಾಟಕಕಾರರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ಕಂಪನಿಯ ಮಾಲೀಕರಾಗಿ ಅನನ್ಯ ಸಾಧನೆ ಮಾಡಿರುವ ನಾಟಕ ಸಾಹಿತ್ಯ ರತ್ನ ಶ್ರೀ ಪುಂಡಲೀಕಗೌಡ ಬಸವನಗೌಡ ಧುತ್ತರಗಿ ಅವರು ನಾಟಕದ ಕವಿ ಎಂದೇ ಪ್ರಸಿದ್ಧರು.
೧೫.೦೬.೧೯೨೯ ರಲ್ಲಿ ಬಾಗಲಕೋಟೆ ಜಿಲ್ಲೆಯ ಸೂಳೇಬಾವಿಯಲ್ಲಿ ಜನನ. ಪೂರ್ವಜರು ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಧುತ್ತರಗಿ ಗ್ರಾಮದವರು. ತಂದೆ ಬಸವನಗೌಡರು ನಾಟಕ ಕಲಾವಿದರು. ಬಡ ನೇಕಾರ ಕುಟುಂಬದಲ್ಲಿ ಜನಿಸಿದ ಧುತ್ತರಗಿ ಶಾಲೆಯಲ್ಲಿ ಕಲಿತದ್ದು ಕಡಿಮೆ. ೧೪ನೆಯ ವಯಸ್ಸಿನಲ್ಲಿಯೇ ಶಾಲೆ ಬಿಟ್ಟು ಕುಲಕಸುಬು ನೆಯ್ಗೆ ಕಾಯಕ ಆರಂಭಿಸಿದರು.
೧೯೪೪ ರಲ್ಲಿ ತಂದೆಯ ಜೊತೆ ಹಂದಿಗನೂರು ಸಿದ್ರಾಮಪ್ಪನವರ ನಾಟಕ ಕಂಪನಿ ಸಂಪರ್ಕ, ನಂತರ ನಾಟಕಕಾರ ಜಿ.ಜಿ. ಹೆಗಡೆ ಅವರ ಸೇವೆಯಲ್ಲಿ ತೊಡಗಿದರು. ಗೆಳೆಯರೊಂದಿಗೆ ೧೯೫೦ರಲ್ಲಿ ‘ರವೀಂದ್ರ ವಾಚನಾಲಯ’ ಸ್ಥಾಪನೆ. ೧೯೫೬ರಲ್ಲಿ ‘ರವೀಂದ್ರ ನಾಟ್ಯ ಸಂಘ’ ಕಟ್ಟಿ “ಕುಂಕುಮ”, “ರಕ್ತಾಕ್ಷಿ” ನಾಟಕಗಳನ್ನು ಆಡಿದರು. ೧೯೫೪ ರಲ್ಲಿ ಕಂದಗಲ್ಲು ಹನುಮಂತರಾಯರ ಒಡನಾಟ. ೧೯೫೬ರಲ್ಲಿ ಮೊದಲ ನಾಟಕ ‘ಕಲ್ಪನಾ ಪ್ರಪಂಚ’ ರಚನೆ. ನಂತರ ನಂದಾದೀಪ, ನ್ಯಾಯಾಧೀಶ ಅರ್ಥಾತ್ ಕಾನೂನು, ಹರಿಗಿರಿಜೆ, ತಾಯಿಕರುಳು, ಶ್ರೀ ವಿಜಯ ಮಹಾಂತೇಶ್ವರ ಮಹಾತ್ಮೆ, ಸಂಪತ್ತಿಗೆ ಸವಾಲ್, ಸಹೋದರಿ ಹೀಗೆ ಸುಮಾರು ೩೧ ಸಾಮಾಜಿಕ ನಾಟಕಗಳನ್ನು, ೯ ಐತಿಹಾಸಿಕ ನಾಟಕಗಳನ್ನು, ೫ ಪೌರಾಣಿಕ ನಾಟಕಗಳನ್ನು, ೭ ಭಕ್ತಿಪ್ರಧಾನ ನಾಟಕಗಳನ್ನು ರಚಿಸಿದ್ದಾರೆ. ‘ಸಂಗೊಳ್ಳಿ ರಾಯಣ್ಣ’ ಕನ್ನಡ ಚಲನಚಿತ್ರಕ್ಕೆ ಗೀತರಚನೆ ಮಾಡಿರುವ ಶ್ರೀಯುತ ‘ಸಂಪತ್ತಿಗೆ ಸವಾಲ್’ ನಾಟಕ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಚಲನಚಿತ್ರವಾಗಿ ಅದ್ಭುತ ಯಶಸ್ಸು ಗಳಿಸಿತು. ಇದಲ್ಲದೆ ಇವರ ‘ಚಿಕ್ಕ ಸೊಸೆ’ ನಾಟಕವು ‘ಸೊಸೆ ತಂದ ಸೌಭಾಗ್ಯ’ ಹೆಸರಿನಲ್ಲಿ ಚಲನಚಿತ್ರವಾಗಿದೆ. ಇವರ ನಾಟಕಗಳು ಹಲವಾರು ಪ್ರದರ್ಶನಗಳನ್ನು ಕಂಡಿವೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯತ್ವ ಮುಂತಾದವು ನಾಟ್ಯ ಕವಿಪುಂಗವ ಶ್ರೀ ಪಿ.ಬಿ. ಧುತ್ತರಗಿ ಅವರಿಗೆ ಸಂದ ಗೌರವ ಪುರಸ್ಕಾರಗಳು. ಹಿರಣ್ಣಯ್ಯನವರ ಕಂಪನಿ ಹೊರತುಪಡಿಸಿ, ಕರ್ನಾಟಕದ ಬಹುತೇಕ ಎಲ್ಲ ಕಂಪನಿಗಳು ಶ್ರೀಯುತರ ನಾಟಕಗಳನ್ನು ಪ್ರದರ್ಶಿಸಿವೆ. ಕಂಪನಿಗಳ ಮಾಲೀಕರಾಗಿ, ವೃತ್ತಿರಂಗಭೂಮಿಗೆ ಮಹತ್ತರ ಕಾಣಿಕೆ ನೀಡಿರುವ ಅಧ್ಭುತ ನಾಟಕಕಾರ ಶ್ರೀ ಪಿ.ಬಿ. ಧುತ್ತರಗಿ ಅವರು.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *