LOADING

ಹುಡುಕಲು ಟೈಪ್ ಮಾಡಿ

ಜಾನಪದ ಮನೆಯಂಗಳದಲ್ಲಿ ಮಾತುಕತೆ

ಶ್ರೀಮತಿ ದರೋಜಿ ಈರಮ್ಮ

ಬುರ್ರಕಥಾ ಜನಪದ ಮಹಾಕಾವ್ಯ ಹಾಡುಗಾರಿಕೆ ಹಾಗೂ ಬುರ್ರವಾದ್ಯ ನುಡಿಸುವುದರಲ್ಲಿ ಅಸೀಮ ಸಾಧನೆ ಮಾಡಿರುವ ಜನಪದ ಕಲಾವಿದೆ ಶ್ರೀಮತಿ ಈರಮ್ಮ ಅವರು.
ಸುಮಾರು ೭೦ ವರ್ಷ ವಯಸ್ಸಿನ ಬಡ ದಲಿತ ಕುಟುಂಬದಿಂದ ಬಂದ ಶ್ರೀಮತಿ ಈರಮ್ಮ ಬಳ್ಳಾರಿ ಜಿಲ್ಲೆ ಸೊಂಡೂರು ತಾಲೂಕಿನ ಹಳೆ ದರೋಜಿ ಗ್ರಾಮದವರು. ತಂದೆ ಶ್ರೀ ಅಶ್ವಲಾಲಪ್ಪ, ತಾಯಿ ಶ್ರೀಮತಿ ನಾಗಮ್ಮ, ಇವರ ಮನೆತನ ಬುರ್ರಕಥೆ ಪ್ರದರ್ಶನದ ಹಿನ್ನೆಲೆಯುಳ್ಳದ್ದು. ಜನಪದ ಮಹಾಕಾವ್ಯಗಳಾದ ಕುಮಾರರಾಮನ ಮಹಾಕಾವ್ಯ, ಗಂಗಿ ಗೌರಿ ಕಾವ್ಯ, ಬಲಿಚಕ್ರವರ್ತಿ ಕಾವ್ಯ, ಬಾಲನಾಗಮ್ಮನ ಕಾವ್ಯ ಮೊದಲಾದ ಕಾವ್ಯಗಳನ್ನು ಬುರ್ರಕಥಾ ಜನಪದ ಕಲಾಪ್ರಕಾರದಲ್ಲಿ ಪ್ರಸ್ತುತಪಡಿಸುವುದು ಇವರ ಕುಟುಂಬದ ವೃತ್ತಿ ಸಹಜವಾಗಿಯೇ ಶ್ರೀಮತಿ ಈರಮ್ಮ ತಮ್ಮ ತಂದೆತಾಯಿಗಳಿಂದ ಬುರ್ರ ಕಥಾ ಹಾಡುಗಾರಿಕೆ ಹಾಗೂ ಬುರ್ರಕಥಾ ವಾದ್ಯ ನುಡಿಸುವುದನ್ನು ಕಲಿತರು.
ಶ್ರೀಮತಿ ಈರಮ್ಮ ನಾಡಿನಾದ್ಯಂತ ಅನೇಕ ಕಡೆ ಬುರ್ರಕಥಾ ಪ್ರದರ್ಶನ ನೀಡಿದ್ದಾರೆ. ಹಂಪಿ ಉತ್ಸವ, ಸ್ವಾತಂತ್ರ್ಯ ಸ್ವರ್ಣಮಹೋತ್ಸವ, ಸಾಂಸ್ಕೃತಿಕ ಉತ್ಸವ, ಜಿಲ್ಲಾ ಕಲಾಮೇಳ ಹೀಗೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಇವರು ಹಾಡಿರುವ ಕುಮಾರರಾಮನ ಮಹಾಕಾವ್ಯ, ಕೃಷ್ಣಗೊಲ್ಲರ ಮಹಾಕಾವ್ಯ, ಸವದತ್ತಿ ಎಲ್ಲಮ್ಮನ ಕಾವ್ಯ, ಆದೋನಿ ಲಕ್ಷ್ಮಮ್ಮನ ಕಾವ್ಯ, ಬಬ್ಬೂಲಿ ನಾಗಿರೆಡ್ಡಿ, ಸ್ವಾಸ್ವಿ ಚಿನ್ನಮ್ಮನ ಕಾವ್ಯ, ಮಾರವಾಡಿ ಶೇಠಿ ಕಾವ್ಯ ಮೊದಲಾದ ಮಹಾಕಾವ್ಯಗಳನ್ನು ಸಂಪಾದಿಸಿ, ಹಂಪಿ ವಿಶ್ವವಿದ್ಯಾಲಯ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.
ಶ್ರೀಮತಿ ದರೋಜಿ ಈರಮ್ಮನವರ ಕಲಾಸೇವೆಗೆ ಸಂದಿರುವ ಗೌರವ ಪ್ರಶಸ್ತಿಗಳು ಹಲವು, ಕರ್ನಾಟಕ ಸರ್ಕಾರ ಕೊಡಮಾಡುವ ರಾಜ್ಯಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಳೆ ಬಳ್ಳಾರಿ ಇವರಿಂದ ಶ್ರೀಮತಿ ಈರಮ್ಮ ಅವರಿಗೆ ಪ್ರಶಸ್ತಿ, ಗೌರವಗಳು ಸಂದಾಯವಾಗಿವೆ. ಅಲ್ಲದೆ ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಶ್ರೀಮತಿ ದರೋಜಿ ಈರಮ್ಮ ಅವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾನಪದ ಕಲಾವಿದೆ ಶ್ರೀಮತಿ ದರೋಜಿ ಈರಮ್ಮ ಅವರು ನಾಲ್ಕು ದಶಕಗಳಿಂದ ಬುರ್ರಕಥಾ ಕಾವ್ಯ ಕಲಾ ಪ್ರದರ್ಶನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಮನ ಸೂರೆಗೊಂಡು ಜಾನಪದ ಕಲಾ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *