LOADING

ಹುಡುಕಲು ಟೈಪ್ ಮಾಡಿ

ಜಾನಪದ ಮನೆಯಂಗಳದಲ್ಲಿ ಮಾತುಕತೆ

ಶ್ರೀಮತಿ ಸುಕ್ರಿ ಬೊಮ್ಮಗೌಡ

ಬುಡಕಟ್ಟು ಸಂಸ್ಕೃತಿಯ ಹಾಲಕ್ಕಿ ಜನಾಂಗದ ಹಿರಿಯ ಜಾನಪದ ಕಲಾವಿದೆ ಶ್ರೀಮತಿ ಸುಕ್ರಿ ಬೊಮ್ಮಗೌಡ. ಬುಡಕಟ್ಟು ಸಂಸ್ಕೃತಿಯ ಕಾವ್ಯಗಳನ್ನು ಅವುಗಳ ಮೂಲಸ್ವರೂಪದಲ್ಲೆ ಹಾಡುವ ಮೂಲಕ ಬುಡಕಟ್ಟು ಸಂಸ್ಕೃತಿಯ ಜಾನಪದ ಸಂಪತ್ತನ್ನು ತೆರೆದು ತೋರುವ ಅಪೂರ್ವ ಕಲಾವಿದೆ.
ಜಾನಪದ ಹಾಡುಗಳ ಕಣಜ ಶ್ರೀಮತಿ ಸುಕ್ರಿ ಬೊಮ್ಮಗೌಡ. ಸಾಮಾಜಿಕ ಎಚ್ಚರವನ್ನು ಮೈಗೂಡಿಸಿಕೊಂಡು ಸಾರಾಯಿ ವಿರುದ್ಧ ಸಮರ ಸಾರಿದ ಆದರ್ಶ ಮಹಿಳೆ. ಬುಡಕಟ್ಟಿನ ಬಗೆಗೆ ಆಳವಾದ ಚಿಂತನೆ ಮತ್ತು ಒಳನೊಟಗಳುಳ್ಳ ಇವರು ಪರಂಪರೆಯಿಂದ ಬಂದಿರುವ ನಾಟೀ ವೈದ್ಯ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವರು.
ಪರಂಪರಾಗತ ಜ್ಞಾನ ಹಾಗೂ ಪ್ರತಿಭಾಶಕ್ತಿಯಿಂದ ಜಾನಪದ ಕ್ಷೇತ್ರದಲ್ಲಿ ಅರಳಿದ ಕಾನನದ ಕುಸುಮ. ತಂಡಕಟ್ಟಿ ತನ್ನ ಸಂಗಡಿಗರಿಗೆ ಪ್ರಾಚೀನ ಕುಣಿತ ತಾರ್ತೆ, ಬಿದರಂಡೆ ಕಲೆಗಳನ್ನು ಕಲಿಸುತ್ತಾ, ಬೆಳೆಸುತ್ತಾ ಬಂದಿರುವ ಮಹಾನ್ ಕಲಾವಿದೆ; ಹಾಡಿದಷ್ಟೂ ಬತ್ತದ ಚಿಲುಮೆ. ಜಾನಪದ ಕಾವ್ಯಗಳಿಗೆ ತನ್ನ ಹಾಡುಗಾರಿಕೆಯಿಂದ ಜೀವತುಂಬುತ್ತಿರುವ ಕಲಾವಿದೆ ಶ್ರೀಮತಿ ಸುಕ್ರಿ ಬೊಮ್ಮಗೌಡ ಅವರಿಗೆ ಸರ್ಕಾರವು ೧೯೯೯ನೇ ಸಾಲಿನ ಜಾನಪದಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರಕಳಿ ಗ್ರಾಮದ ಹಾಲಕ್ಕಿ ಒಕ್ಕಲಿಗ ರೈತ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಸುಕ್ರಿ ನಾಡಿನಾದ್ಯಂತ ಸಭೆ, ಸಮಾರಂಭಗಳಲ್ಲಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದ ಪ್ರತಿಭಾನ್ವಿತೆ. ಇವರಿಗೆ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *