LOADING

ಹುಡುಕಲು ಟೈಪ್ ಮಾಡಿ

ನಾಟಕ ಮನೆಯಂಗಳದಲ್ಲಿ ಮಾತುಕತೆ

ಶ್ರೀಮತಿ ಆರ್. ನಾಗರತ್ನಮ್ಮ

ವಿಶ್ವ ರಂಗಭೂಮಿ ಇತಿಹಾಸದಲ್ಲಿ ಅನನ್ಯ ಎನ್ನುವಂತಹ ಸ್ತ್ರೀ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ, ಆ ಮೂಲಕ ಕನ್ನಡ ರಂಗಭೂಮಿಯ ಕೀರ್ತಿಯನ್ನು ಹೆಚ್ಚಿಸಿದ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ನಾಟಕ ಕಲಾವಿದೆ ಶ್ರೀಮತಿ ಆರ್. ನಾಗರತ್ನಮ್ಮ ಅವರು.
೧೯೨೬ರಲ್ಲಿ ಜನಿಸಿ, ತಮ್ಮ ಅತ್ಯಂತ ಎಳೆಯ ವಯಸ್ಸಿನಲ್ಲಿಯೇ ನಾಟಕ ಕಂಪನಿ ಸೇರಿ ವೃತ್ತಿಯನ್ನು ಆರಂಭಿಸಿದ ಶ್ರೀಮತಿ ನಾಗರತ್ನಮ್ಮ ಅವರು ಶ್ರೀ ಹೆಚ್. ಎಲ್.ಎನ್. ಸಿಂಹ ಅವರ ‘ಸಿಂಹಾಸ್ ಸೆಲೆಕ್ಟೆಡ್ ಆರ್ಟಿಸ್ಟ್ಸ್’ ತಂಡದಲ್ಲಿ ರಂಗಭೂಮಿಯ. ನಟನೆಯ ಎಲ್ಲಾ ಸೂಕ್ಷ್ಮಗಳನ್ನು ಕಲಿತರು. ನಂತರ ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರ ಮಂಡಳಿ, ಸುಬ್ಬಯ್ಯನಾಯ್ಡು ಅವರ ಕಂಪನಿ – ಹೀಗೆ ತಿರುಗಾಟದಲ್ಲಿ ತಮ್ಮ ಅಭಿನಯವನ್ನು ರೂಪಿಸಿಕೊಳ್ಳುತ್ತಾ, ರೂಢಿಸಿಕೊಳ್ಳುತ್ತಾ ಸಾಗಿದರು ಶ್ರೀಮತಿ ನಾಗರತ್ನಮ್ಮ. ಕೆಲಕಾಲ ಚಲನಚಿತ್ರರಂಗದಲ್ಲಿಯೂ ಅವರು ತಮ್ಮ ಛಾಪನ್ನು ಮೂಡಿಸಿದರು.
ಸ್ತ್ರೀ ನಾಟಕ ಮಂಡಳಿ ಎಂಬ ಹೊಸ ಪರಿಕಲ್ಪನೆಯೊಂದಿಗೆ ಶ್ರೀಮತಿ ನಾಗರತ್ನಮ್ಮ ಅವರು ಸಂಪೂರ್ಣ ಮಹಿಳೆಯರೇ ನಿರ್ವಹಿಸುವ, ಅಭಿನಯಿಸುವ ನಾಟಕ ತಂಡವನ್ನು ಕಟ್ಟಿ ಆ ಮೂಲಕ ಕರ್ನಾಟಕ ರಂಗಭೂಮಿಯಲ್ಲಿ ಒಂದು ದಾಖಲೆಯನ್ನು ಸ್ಥಾಪಿಸಿದರು. ಕೃಷ್ಣಗಾರುಡಿ ನಾಟಕದಲ್ಲಿ ಭೀಮ ಮತ್ತು ಕಂಸನ ಪಾತ್ರಗಳು, ರಾಮಾಯಣದಲ್ಲಿ ದಶರಥ ಮತ್ತು ರಾವಣನ ಪಾತ್ರಗಳು, ದಾನಶೂರ ಕರ್ಣದಲ್ಲಿ ದುರ್ಯೋಧನ, ಬೇಡರ ಕಣ್ಣಪ್ಪದಲ್ಲಿ ಕಣ್ಣಪ್ಪ, ಸದಾರಮೆ ನಾಟಕದಲ್ಲಿ ಕಳ್ಳನ ಪಾತ್ರ, ಸಂಸಾರ ನೌಕೆ ನಾಟಕದಲ್ಲಿ ಸುಂದರನ ಪಾತ್ರದಲ್ಲಿ ಶ್ರೀಮತಿ ನಾಗರತ್ನಮ್ಮ ಅವರ ಅಭಿನಯ ಕನ್ನಡ ಜನಮನದಲ್ಲಿ ಇಂದಿಗೂ ನೆಲೆನಿಂತಿದೆ; ಅವರಿಗೆ ಕೀರ್ತಿಯನ್ನು ತಂದುಕೊಟ್ಟಿದೆ.
ಶ್ರೀಮತಿ ನಾಗರತ್ನಮ್ಮನವರನ್ನು ಅರಸಿಬಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ. ಗುಬ್ಬಿವೀರಣ್ಣ ಪ್ರಶಸ್ತಿ ಅವರಿಗೆ ಸಂದಿರುವ ಪ್ರಮುಖ ಪ್ರಶಸ್ತಿಗಳು.
ಕನ್ನಡ ವೃತ್ತಿ ರಂಗಭೂಮಿಯಲ್ಲಿ ಒಂದು ವಿಶೇಷ ಅಧ್ಯಾಯವನ್ನು ಆರಂಭಿಸಿ, ಪುರುಷ ಪಾತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಮೆರೆದು, ಕಲಾಸಕ್ತ ಸ್ತ್ರೀಯರಿಗೆ ರಂಗಭೂಮಿಯಲ್ಲಿ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿದ ಶ್ರೀಮತಿ ಆರ್. ನಾಗರತ್ನಮ್ಮನವರು ರಂಗಭೂಮಿಯ ಒಂದು ಅನರ್ಘ್ಯ ರತ್ನ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *