LOADING

ಹುಡುಕಲು ಟೈಪ್ ಮಾಡಿ

ಜಾನಪದ ಮನೆಯಂಗಳದಲ್ಲಿ ಮಾತುಕತೆ

ಶ್ರೀ ಮುದೇನೂರ ಸಂಗಣ್ಣ

ವಿಸ್ತಾರವಾದ ಜ್ಞಾನ, ಚುರುಕಾದ ವಿಮರ್ಶಾಪ್ರಜ್ಞೆ, ರಂಗಭೂಮಿಯಲ್ಲಿ ಆಸಕ್ತಿಯುಳ್ಳ ಹಿರಿಯ ಜಾನಪದ ತಜ್ಞ ಶ್ರೀ ಮುದೇನೂರ ಸಂಗಣ್ಣ ಅವರು. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಟೇರಿ ಗ್ರಾಮದಲ್ಲಿ ಜನನ. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ; ಪ್ರೌಢಶಾಲೆಯ ವಿದ್ಯಾಭ್ಯಾಸ ಹರಪನಹಳ್ಳಿಯಲ್ಲಿ, ವಿದ್ಯಾರ್ಥಿದೆಸೆಯಲ್ಲಿಯೆ ಸಾಹಿತ್ಯದಲ್ಲಿ ಆಸಕ್ತಿ ತಳೆದು, ಕಾರಂತ, ಗೋಕಾಕ, ಬೇಂದ್ರೆಯಂಥ ಸಾಹಿತ್ಯ ದಿಗ್ಗಜರ ಪ್ರಭಾವಕ್ಕೆ ಒಳಗಾಗಿ ಕತೆ, ಕವಿತೆಗಳ ರಚನೆಗೆ ತೊಡಗಿದರು. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ವಿಫುಲ ಗ್ರಂಥರಾಶಿ ಹೊಂದಿರುವ ಶ್ರೀಯುತರ ಮನೆ ವಿದ್ಯಾಪೀಠವೆನಿಸಿದೆ.
ಇಂಟರ್ಮೀಡಿಯೆಟ್ವರೆಗೆ ವಿದ್ಯಾಭ್ಯಾಸ ಮಾಡಿದ ಶ್ರೀಯುತರು ಪದವಿ ಪಡೆಯಲಾಗದಿದ್ದರೂ ಸತತ ಅಧ್ಯಯನದಿಂದ, ನಾಡಿನ ಪ್ರಸಿದ್ಧ ಸಾಹಿತಿಗಳ ಒಡನಾಟದಿಂದ ಜ್ಞಾನಸಂಪತ್ತನ್ನು ಗಳಿಸಿದರು. ತೆಲುಗು, ಹಿಂದಿ, ಮರಾಠಿ, ಬಂಗಾಲಿ ಕಲಿತ ಶ್ರೀಯುತರು ಪ್ರಗತಿಪರ ವಿಚಾರಧಾರೆಯುಳ್ಳವರು. ಚೌತಿ ಚಂದ್ರಮ, ಚಿತ್ರಪಟ ರಾಮಾಯಣ, ಲಕ್ಷಾಪತಿ ರಾಜ ನಾಟಕಗಳು ಪ್ರಸಿದ್ಧವಾದವು. ಘಾಸಿರಾಮ್ ಕೊತ್ವಾಲ್, ಭಾವೂ ಮುರಾರಿರಾವ್ ಅನುವಾದಿತ ನಾಟಕಗಳು ಗಮನಾರ್ಹವಾದವು. ‘ಆ ಅಜ್ಜ ಈ ಮೊಮ್ಮಗ’ ಕವನ ಸಂಕಲನ. ಜನಪದ ಸಾಹಿತ್ಯದಲ್ಲಿ ಅನನ್ಯ ಸಾಧನೆ ಮಾಡಿರುವ ಶ್ರೀಯುತರು ನವಿಲು ಕುಣಿದಾವೆ, ಹಳ್ಳಿಯ ಪದಗಳು, ಗೊಂದಲಿಗರ ದೇವೆಂದ್ರಪ್ಪನವರ ಆಟಗಳು, ಗೊಂಬಿಗೌಡರ ಸೂತ್ರದ ಗೊಂಬೆಗಳು ಮುಂತಾದ ಜನಪದ ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಹಾಗೂ ಜನಪದ ಕ್ಷೇತ್ರಕ್ಕೆ ಶ್ರೀಯುತರು ಸಲ್ಲಿಸಿರುವ ಅಪೂರ್ವ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕವಿತೆ, ಕಥೆ, ನಾಟಕ, ಜೀವನ ಚರಿತ್ರೆ, ಜನಪದ ಸಾಹಿತ್ಯ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ಜಾನಪದ ಕ್ಷೇತ್ರದಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ಜಾನಪದ ಕಣಜ ಶ್ರೀ ಮುದೇನೂರ ಸಂಗಣ್ಣ ಅವರು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *