LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತ್ಯ

ಪ್ರೊ|| ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್

‘ಎಚ್ಚೆಸ್ಕೆ’ ಈ ಮೂರಕ್ಷರಗಳಿಂದ ಕನ್ನಡಿಗರ ಗಮನ ಸೆಳೆದ ವಿಚಾರಶೀಲ ಸಾಹಿತಿ.ಬೇರೆಯವರು ಅನುಕರಿಸಲು ಸಾಧ್ಯವಾಗದ ವಿಶಿಷ್ಟ ಶೈಲಿಯ ಬರಹಗಾರರು.ಪ್ರಜಾವಾಣಿ-ಸುಧಾ ಪತ್ರಿಕೆಗಳಲ್ಲಿ ನಿಯಮಿತ ಅಂಕಣಕಾರರಾಗಿ ನಾಡಿನ ಉದ್ದಗಲಕ್ಕೂ ಸುಪರಿಚಿತ ಲೇಖಕರು.
೧೯೨೦ರ ಆಗಸ್ಟ್ ೨೬ರಂದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಹಳಯಾರು ಗ್ರಾಮದಲ್ಲಿ ಜನನ.೧೯೩೮-೪೦ರಿಂದ ಪತ್ರಿಕಾ ಪ್ರತಿನಿಧಿಯಾಗಿ ಬರವಣಿಗೆ ಪ್ರಾರಂಭ. ೧೯೪೩ರಲ್ಲಿ ಸೆಂಟ್ರಲ್ ಕಾಲೇಜಿನಿಂದ ಎಲ್.ಕಾಂ.ಪರೀಕ್ಷೆಯಲ್ಲಿ ತೇರ್ಗಡೆ. ರೇಷ್ಮೆ ಫಿಲೇಚರ್ ವಿಸ್ತರಣ ಯೋಜನೆಯಲ್ಲಿ ವೃತ್ತಿಜೀವನ ಪ್ರಾರಂಭ. ೧೯೪೫ರಲ್ಲಿ ಮೈಸೂರು ಛೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ‘ಮೈಸೂರು ಕಾಮರ್ಸ್’ ಪತ್ರಿಕೆಯ ಕನ್ನಡ ವಿಭಾಗದಲ್ಲಿ ಭಾಷಾಂತರಕಾರರಾಗಿ ಸೇವೆ ಸಲ್ಲಿಕೆ. ಮುಂದೆ ಮೂರು ವರ್ಷಗಳ ಕಾಲ ವಿವಿಧ ಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸ.ಅಧ್ಯಾಪನ ಕೆಲಸ ಜತೆಯಲ್ಲಿ ದೇಶಬಂಧು.ವಿಶ್ವಕರ್ನಾಟಕ, ಛಾಯ ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ವ್ಯವಸಾಯ-ಪತ್ರಿಕೋದ್ಯಮಿಯಾಗಿಯೂ ದುಡಿದರು.೧೯೪೯ರಲ್ಲಿ ಬಿ.ಕಾಂ ಪದವಿ.೧೯೪೯ರಲ್ಲಿ ಮೈಸೂರಿನ ಡಿ.ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ, ಪ್ರಾಧ್ಯಾಪಕರಾಗಿ ತದನಂತರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.೧೯೫೧ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.
೧೯೬೯ ರಿಂದ ೧೯೮೦ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ವಿಶ್ವಕೋಶದ ಮಾನವಿಕ ಸಂಪಾದಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಮಾನವಿಕಗಳ ಬೆಳವಣಿಗೆ ರೋಮಾಂಚನವಾಗುವಂತೆ ಸಾಗುತ್ತಿರುವಾಗ ಆ ಜ್ಞಾನಭಂಡಾರಕ್ಕೆ ಕನ್ನಡಿಗರೂ ಒಳಹೋಗುವಂತೆ ದಾರಿ ನಿರ್ಮಿಸಿದ್ದಾರೆ, ನಿರ್ಮಿಸುತ್ತಿದ್ದಾರೆ ಎಚ್ಚೆಸ್ಕೆ ಅವರು. ‘ನಮ್ಮ ಅಭಿವೃದ್ಧಿ ಯೋಜನೆಗಳು’, ‘ಮಾನವನ ಐಹಿಕಾಭ್ಯುದಯ’, ‘ವಾಣಿಜ್ಯಶಾಸ್ತ್ರ ಪರಿಚಯ’ ಮುಂತಾದ ಗ್ರಂಥಗಳು ಈ ದಿಸೆಯಲ್ಲಿ ಕಣ್ಣು ಸೆಳೆಯುವ ಪ್ರಯತ್ನಗಳು.‘ವ್ಯವಹಾರಿಕ ಕನ್ನಡ’ದಂತಹ ಕೃತಿಗಳಿಂದ ಮತ್ತು ತಮ್ಮ ಬರಹಗಳಿಂದ ಕನ್ನಡವು ಆಧುನಿಕ ಜಗತ್ತಿನ ಎಲ್ಲಾ ಅಗತ್ಯಗಳನ್ನು ಪೂರೈಸುವ ಸಿದ್ಧತೆಯಲ್ಲಿ ಗಣನೀಯ ಪಾತ್ರ ವಹಿಸಿದ್ದಾರೆ.ಹಲವು ಸಾಹಿತ್ಯ ಪ್ರಕರಗಳಲ್ಲಿ ಎಚ್ಚೆಸ್ಕೆ ಒಳ್ಳೆಯ ಕೃತಿಗಳನ್ನು ರಚಿಸಿದ್ದಾರೆ, ಜೀವನಚರಿತ್ರೆಗಳನ್ನು, ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ. ಪ್ರಬಂಧ ಸಾಹಿತ್ಯದಲ್ಲಿ ಹೊಸ ದಿಕ್ಕಿನ ಬರವಣಿಗೆಯ ಫಲವಾಗಿ ‘ಕಳ್ಳ ಹೊಕ್ಕ ಮನೆ’, ‘ಜೇಡರ ಬಲೆ’, ‘ಸುರಹೊನ್ನೆ’, ‘ಚಂದ್ರಕಾಂತ’, ಕೃತಿಗಳು ಹೊರಬಂದಿವೆ.
ಸತತ ಚಿಂತನ ಅಧ್ಯಯನ ಅಧ್ಯಾಪನಗಳಿಂದ ವಿಫುಲ ಹಾಗೂ ಸತ್ವಯುತವಾದ ಬರವಣಿಗೆಯಿಂದ ಜನಪ್ರಿಯ ಲೇಖಕರಾಗಿದ್ದಾರೆ ಎಚ್ಚೆಸ್ಕೆ.ಇಂದಿಗೂ ಅವರ ಬರವಣಿಗೆ ಸಮನೆಲದಲ್ಲಿ ಹರಿವ ಗಂಗೆಯಂತೆ, ಗಂಭೀರವಾಗಿ ಪ್ರವಹಿಸುತ್ತಲೇ ಇದೆ. ಮನುಷ್ಯ ಸ್ವಭಾವದ ಅನಂತ ಮುಖಗಳನ್ನು, ಅನಂತ ಸಾಧನೆಗಳನ್ನು ವಿಶಿಷ್ಟ ಶೈಲಿಯಲ್ಲಿ ಕನ್ನಡಿಗರಿಗೆ ಪರಿಚಯ ಮಾಡಿಸಿಕೊಟ್ಟ, ಜೊತೆಗೇ ಚಿಂತನಶೀಲ ಜನತೆಯ ಬೆಳವಣಿಗೆಗೆ ಅಗತ್ಯವಾದ ಆಧಾರ ಸಾಮಗ್ರಿಯನ್ನೂ ವಿಚಾರಧಾರೆಯನ್ನೂ ಅವಿರತವಾಗಿ ಲಭ್ಯಮಾಡಿಕೊಡುತ್ತಿರುವ ಸಾಹಿತಿ, ವಿಚಾರವಂತರು ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *