LOADING

ಹುಡುಕಲು ಟೈಪ್ ಮಾಡಿ

ನಾಟಕ ಮನೆಯಂಗಳದಲ್ಲಿ ಮಾತುಕತೆ

ಡಾ|| ಚಂದ್ರಶೇಖರ ಕಂಬಾರ

ಕನ್ನಡ ಕಾವ್ಯ, ನಾಟಕ ಮತ್ತು ಕಾದಂಬರಿ ಪ್ರಕಾರಗಳಲ್ಲಿ ಅನನ್ಯತೆಯನ್ನು ಮೆರೆದ, ಜಾನಪದ ಸೊಗಡನ್ನು ತುಂಬಿದ, ಅಪರೂಪದ ಹಿರಿಯ ಸಾಹಿತಿಗಳು ಡಾ|| ಚಂದ್ರಶೇಖರ ಕಂಬಾರ ಅವರು.
೧೯೩೭ರ ಜನವರಿ ೨ರಂದು ಬೆಳಗಾಂ ಜಿಲ್ಲೆಯ ಘೋಡಗೇರಿ ಗ್ರಾಮದಲ್ಲಿ ಜನಿಸಿದ ಡಾ|| ಚಂದ್ರಶೇಖರ ಕಂಬಾರರು, ಗೋಕಾಕ, ಬೆಳಗಾವಿ ಮತ್ತು ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದು, ೧೯೬೮ರಿಂದ ೧೯೬೯ರ ವರೆಗೆ ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ, ೧೯೭೧ರಿಂದ ೧೯೯೧ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಕುಲಪತಿಗಳಾಗಿ ೧೯೯೨ ರಿಂದ ೧೯೯೮ರ ವರೆಗೆ ಸೇವೆ ಸಲ್ಲಿಸಿದ್ದಾರೆ.
ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಬಂದ ಕಂಬಾರರು ನವ್ಯ ಸಾಹಿತ್ಯದ ಆರಂಭ ಕಾಲದಲ್ಲಿಯೇ ಕೃತಿ ರಚನೆ ಮಾಡಲು ಆರಂಭಿಸಿದವರು.ವಸಾಹತುಶಾಹಿ ಹಾಗೂ ಊಳಿಗಮಾನ್ಯ ಪದ್ಧತಿ ಸಮಸ್ಯೆಯನ್ನು ತಮ್ಮ ಕೃತಿಗಳಲ್ಲಿ ಪ್ರತಿಬಿಂಬಿಸಿರುವ ಕಂಬಾರರು ಜಾನಪದ ಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡರು.ಜನಪದ ಹಾಗು ಪುರಾಣಗಳನ್ನು ಮತ್ತೆ ಮತ್ತೆ ಶೋಧನೆಗೆ ಒಳಪಡಿಸುತ್ತಾ ಅವುಗಳನ್ನು ಸಮಕಾಲೀನತೆಯನ್ನು ಅಭಿವ್ಯಕ್ತಿಸಲು ಬಳಸಿಕೊಂಡಿದ್ದಾರೆ.ಜೋಕುಮಾರಸ್ವಾಮಿ, ಜೈಸಿದನಾಯಕ, ಕಾಡುಕುದುರೆ, ನಾಯಿ ಕಥೆ, ಹರಕೆಯ ಕುರಿ, ಸಿರಿಸಂಪಿಗೆ ಕಂಬಾರರ ಪ್ರಮುಖ ನಾಟಕಗಳು.ಮುಗುಳು, ಹೇಳತೇನ ಕೇಳ, ಸಾವಿರದ ನೆರಳು, ಅಕ್ಕಕ್ಕು ಹಾಡುಗಳೇ – ಪ್ರಮುಖ ಕವನ ಸಂಕಲನಗಳು.ಚಕೋರಿ- ಮಹಾಕಾವ್ಯ, ಕರಿಮಾಯಿ, ಜಿ.ಕೆ.ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರವ್ವ ಮತ್ತು ಅರಮನೆ ಡಾ|| ಕಂಬಾರರ ಕಾದಂಬರಿಗಳು.
ಡಾ|| ಚಂದ್ರಶೇಖರ ಕಂಬಾರರ ೫ ಕೃತಿಗಳಿಗೆ ಕರ್ನಾಟಕ ಅಕಾಡೆಮಿಯ ಬಹುಮಾನ ಲಭಿಸಿದೆ.ಜೋಕುಮಾರಸ್ವಾಮಿ ೧೯೭೫ರ ಭಾರತದ ಅತ್ಯುತ್ತಮ ನಾಟಕವೆಂದು ಕಮಾಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿಯನ್ನು ಗಳಿಸಿದೆ.‘’ಸಾವಿರದ ನೆರಳು’ ಕವನ ಸಂಕಲನವು ೧೯೮೨ರಲ್ಲಿ ಕೇರಳದ ಪ್ರತಿಷ್ಠಿತ ಆಶಾನ್ ಪ್ರಶಸ್ತಿಯನ್ನು ಗಳಿಸಿದೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಕಂಬಾರರಿಗೆ ಬಂದಿರುವ ಕೆಲವು ಪ್ರಶಸ್ತಿ – ಪುರಸ್ಕಾರಗಳು.
ಕನ್ನಡ ಚಲನಚಿತ್ರರಂಗದಲ್ಲಿಯೂ ಕಂಬಾರರು ಅಪೂರ್ವ ಸಾಧನೆ ಮಾಡಿದ್ದಾರೆ.ಕಂಬಾರರ ಕಾಡುಕುದುರೆ ಮತ್ತು ಸಂಗೀತಾ ಚಲನಚಿತ್ರಗಳು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
ಬದುಕಿನ ವೈವಿಧ್ಯ, ವೈರುಧ್ಯಗಳ ನಡುವಿನ ದ್ವಂದ್ವವನ್ನು ಸದಾ ಎದುರಿಸುವ, ಮೂಲ ಜನಪದ ಸತ್ವವನ್ನು ತಮ್ಮ ಕೃತಿಗಳ ಜೀವಸೆಲೆಯಾಗಿ ಬಳಸಿಕೊಮಡಿರುವ ಜೀವನೋತ್ಸಾಹದ ಹಿರಿಯ ಕವಿ ಡಾ|| ಚಂದ್ರಶೇಖರ ಕಂಬಾರರು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *