LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತ್ಯ

ಡಾ|| ಜಿ.ಎಸ್. ಶಿವರುದ್ರಪ್ಪ

ಕವಿಯಾಗಿ, ಸಾಹಿತ್ಯ ಮೀಮಾಂಸಕರಾಗಿ, ಸಾಹಿತ್ಯ ಬೋಧಕರಾಗಿ ಪ್ರಸಿದ್ಧರಾದ, ಕನ್ನಡ ಸಾಹಿತ್ಯಲೋಕದ ಅಪರೂಪದ ಸೃಜನಶೀಲ ಹಿರಿಯ ಲೇಖಕರು ಡಾ|| ಜಿ.ಎಸ್.ಶಿವರುದ್ರಪ್ಪನವರು.
ಕರ್ನಾಟಕ ಪ್ರಕೃತಿಯ ಮಡಿಲಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೧೯೨೬ರಲ್ಲಿ ಜನಿಸಿದ ಡಾ|| ಜಿ.ಎಸ್.ಶಿವರುದ್ರಪ್ಪನವರು ಹೊನ್ನಾಳಿ, ರಾಮಗಿರಿ, ದಾವಣಗೆರೆ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದರು.ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕುವೆಂಪು ಅವರ ಶಿಷ್ಯರಾಗಿ ಕನ್ನಡದಲ್ಲಿ ಬಿ.ಎ. ಆನರ್ಸ್, ಎಂ.ಎ. ಪದವಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹೆಗ್ಗಳಿಕೆ ಇವರದು.ಕುವೆಂಪುರವರ ಮಾರ್ಗದರ್ಶನದಲ್ಲಿ ‘ಸೌಂದರ್ಯ ಸಮೀಕ್ಷೆ’ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದರು. ದಾವಣಗೆರೆ, ಶಿವಮೊಗ್ಗ, ಮೈಸೂರುಗಳಲ್ಲಿ ಅಧ್ಯಾಪಕರಾಗಿ, ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಇವರು ಸಲ್ಲಿಸಿದ ಸೇವೆ ಅಪಾರ. ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಒಂದು ನಿರ್ದಿಷ್ಟ ಮಾರ್ಗದರ್ಶನ ನೀಡಿದ ಹಿರಿಮೆ ಡಾ|| ಜಿ.ಎಸ್.ಎಸ್ ಅವರದು. ನಿವೃತ್ತಿಯ ನಂತರವೂ ಕೂಡ ಯುಜಿಸಿಯ ರಾಷ್ಟ್ರೀಯ ಉಪನ್ಯಾಸಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಪೀಠದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಅವಿರತ ಸಾಹಿತ್ಯ ಸೇವೆಯ ಫಲವಾಗಿ ರೂಪು ತಳೆದ ಕೃತಿಗಳು ಹಲವು. ಅವುಗಳಲ್ಲಿ ಪ್ರಮುಖವಾದ ಕಾವ್ಯ ಕೃತಿಗಳು – ಸಾಮಗಾನ, ಚೆಲುವು ಒಲವು, ದೇವಶಿಲ್ಪ, ಕಾರ್ತೀಕ, ದೀಪದ ಹೆಜ್ಜೆ, ತೆರೆದ ದಾರಿ, ಗೋಡೆ; ಗದ್ಯ ಕೃತಿಗಳು – ಕರ್ಮಯೋಗಿ, ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ, ಗಂಗೆಯ ಶಿಖರಗಳಲ್ಲಿ, ವಿಮರ್ಶೆಯ ಪೂರ್ವ-ಪಶ್ಚಿಮ, ಪರಿಶೀಲನ, ಗತಿಬಿಂಬ, ಪ್ರತಿಕ್ರಿಯೆ ನವೋದಯ, ಕನ್ನಡ ಸಾಹಿತ್ಯ ಸಮೀಕ್ಷೆ, ಅನುರಣನ, ಸೌಂದರ್ಯ ಸಮೀಕ್ಷೆ, ಮಹಾಕಾವ್ಯ ಸ್ವರೂಪ, ಕಾವ್ಯಾರ್ಥ ಚಿಂತನ, ಶಿವಯೋಗಿ ಸಿದ್ಧರಾಮ, ಸರ್ಪಭೂಷಣ ಶಿವಯೋಗಿ, ಇಂಗ್ಲೆಂಡಿನಲ್ಲಿ ಚತುರ್ಮಾಸ; ಸಂಪಾದಿತ: ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಆರು ಸಂಪುಟಗಳಲ್ಲಿ), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ( ಹತ್ತು ಸಂಪುಟಗಳಲ್ಲಿ).
ಇವರ ಸಾಹಿತ್ಯ ಸೇವೆಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಲ್ಲದೆ ಕನ್ನಡ ಸಾಹಿತ್ಯದ ಶ್ರೇಷ್ಠ ಪ್ರಶಸ್ತಿಯಾದ ಪಂಪ ಪ್ರಶಸ್ತಿಯ ಗೌರವಗಳು ಸಂದಿವೆ. ಇದಲ್ಲದೆ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಇವರದಾಗಿದೆ.
ಪೂರ್ವ ಪಶ್ಚಿಮ ಚಿಂತನೆಗಳ ಗುಣಗ್ರಾಹಿಯಾಗಿ, ವಿಸ್ಮಯ ಮತ್ತು ಸಹೃದಯತೆಯನ್ನು ಒಳಗೊಂಡ ಕಾವ್ಯಕ್ಕೆ ಸಿದ್ದಾಂತಗಳ ಬೇಲಿಯನ್ನು ಹಾಕಿಕೊಳ್ಳದ, ಕನ್ನಡ ಸಾಹಿತ್ಯಲೋಕದ ಅಪರೂಪದ ಚೇತನ ಡಾ|| ಜಿ.ಎಸ್.ಶಿವರುದ್ರಪ್ಪನವರು.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *