LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸ್ವಾತಂತ್ರ್ಯ ಹೋರಾಟಗಾರರು

ಶ್ರೀ ಜಿ.ನಾರಾಯಣ

ಸ್ವಾತಂತ್ರ್ಯ ಹೋರಾಟಗಾರರೂ ಅಪ್ಪಟ ಗಾಂಧೀವಾದಿಗಳೂ ಸಮಾಜ ಸುಧಾರಕರೂ ಆದ ಶ್ರೀ ಜಿ.ನಾರಾಯಣ ಅವರು ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಅವಿಶ್ರಾಂತವಾಗಿ ದುಡಿಯುತ್ತಿರುವ ಬಹು ಅಪರೂಪದ ಸರಳ ಸಜ್ಜನಿಕೆಯ ಮಹಾನ್ ಕನ್ನಡದ ಕಟ್ಟಾಳು.
೧೯೨೩ರ ಸೆಪ್ಟೆಂಬರ್ ೨ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯಲ್ಲಿ ರೈತ ಕುಟುಂಬವೊಂದರಲ್ಲಿ ಜನಿಸಿದ ಶ್ರೀಯುತರು ದೇಶಹಳ್ಳಿ, ಮದ್ದೂರು ಹಾಗೂ ಚನ್ನಪಟ್ಟಣಗಳಲ್ಲಿ ವಿದ್ಯಾಭ್ಯಾಸವನ್ನು ನಡೆಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟು ಪ್ರೌಢಶಾಲಾ ಶಿಕ್ಷಣಕ್ಕೆ ವಿದಾಯ ಹೇಳಿ ೧೯೪೦ರಲ್ಲಿ ಸ್ವತಂತ್ರ್ಯ ಚಳುವಳಿಗೆ ದುಮುಕಿದರು.೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಬೆಳಗಾಂ ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರು.೧೯೪೩ರಲ್ಲಿ ಹುಟ್ಟೂರಿಗೆ ಮರಳಿ ಬಂದ ಶ್ರೀ ಜಿ.ನಾರಾಯಣ ಅವರು ವಯಸ್ಕರ ಶಿಕ್ಷಣ ತರಗತಿ ಆರಂಭಿಸಿದರು.೧೯೪೪ರಲ್ಲಿ ಮುಂಬಯಿ ಬಿರ್ಲಾ ಭವನದಲ್ಲಿ ಮಹಾತ್ಮ ಗಾಂಧೀಜಿಯವರ ದರ್ಶನ ಪಡೆದರು.ಅದೇ ಸಮಯದಲ್ಲಿ ಅವರಿಗೆ ನಾಡಿನ ಪ್ರಮುಖ ಮುಖಂಡರ ಪರಿಚಯವೂ ಆಯಿತು.೧೯೪೬ರಲ್ಲಿ ಮೈಸೂರು ಪ್ರದೇಶ ಕಾಂಗ್ರೇಸ್ ಕಾರ್ಯಾಲಯಕ್ಕೆ ಪ್ರವೇಶ ಪಡೆದರು.ಅಲ್ಲಿ ನಾಡಿನ ಅನೇಕ ರಾಜಕೀಯ ಗಣ್ಯರ ಸಂಸರ್ಗ ಲಭಿಸಿತು. ೧೯೪೭ರಲ್ಲಿ ವಾರ್ತಾ ಪತ್ರಿಕೆ ಮತ್ತು ಮುದ್ರಣಾಲಯ ವ್ಯವಸ್ಥಾಪಕರ ಹುದ್ದೆ, ೧೯೪೯ರಲ್ಲಿ ‘ಚಿತ್ರಗುಪ್ತ’ ಪತ್ರಿಕೆಯ ವ್ಯವಸ್ಥಾಪಕ ಹುದ್ದೆಯನ್ನು ನಿರ್ವಹಿಸಿದ ಇವರು ೧೯೫೦ರಲ್ಲಿ ತಾವೇ ‘ಸ್ವತಂತ್ರ ಮುದ್ರಣಾಲಯ’ವನ್ನು ಪ್ರಾರಂಭಿಸಿದರು. ಆ ಮೂಲಕ ಅವರು ನಾಡಿನ ಅಪರೂಪದ ಜನಪ್ರಿಯ ‘ವಿನೋದ’ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಅಂದಿನಿಂದ ಇಂದಿಗೂ ಎಲ್ಲರ ಅಪಾರ ಪ್ರೀತಿ ಗಳಿಸಿಕೊಂಡು ಇದೀಗ ದಿನಾಂಕ:೧೫.೦೮.೨೦೦೨ಕ್ಕೆ ಸುವರ್ಣ ಮಹೋತ್ಸವ ಸಂಭ್ರಮ ಕಂಡಿದೆ.
ಶ್ರೀ ಜಿ.ನಾರಾಯಣ ಅವರು ನಿರಂತರವಾಗಿ ತಮ್ಮ ಜೀವನಕುದ್ದಕ್ಕೂ ಗಾಂಧೀ ತತ್ವಗಳನ್ನು ಕಾಯ-ವಾಚ-ಮನಸಾ ಪಾಲಿಸಿಕೊಂಡು ಬಂದವರು.ಬದುಕಿನಲ್ಲಿ ನಿಸ್ಪೃಹತೆ, ಪ್ರಾಮಾಣಿಕತೆ, ಸರಳ ಸಜ್ಜನಿಕೆಗಳನ್ನು ಮೆರೆದವರು.೧೯೫೭ರಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರ ಸಭೆಯ ಸದಸ್ಯರಾಗಿ ಚಾಮರಾಜಪೇಟೆ ಕ್ಷೇತ್ರದಿಂದ ಆಯ್ಕೆಯಾದ ಇವರು ೧೯೬೪ರಲ್ಲಿ ಬೆಂಗಳೂರು ನಗರ ಸಭೆಯ ಮೇಯರ್ ಸ್ಥಾನದ ಗೌರವಕ್ಕೆ ಪಾತ್ರರಾದರು.ಇವರು ನಗರದ ಸರ್ವತೋಮುಖ ಬೆಳವಣಿಗೆಗಾಗಿ ತಮ್ಮನ್ನು ನಿರಂತರವಾಗಿ ಅರ್ಪಿಸಿಕೊಂಡವರು. ಇವರ ಕಾಲದಲ್ಲಿಯೇ ಬೆಂಗಳೂರು ನಗರ ನಿರ್ಮಾಪಕ ಕೆಂಪೇಗೌಡ ಪ್ರತಿಮೆ ಸ್ಥಾಪನೆ, ಕಾವೇರಿ ನೀರು ಸರಬರಾಜು, ಅನೇಕ ಪ್ರಮುಖ ರಸ್ತೆಗಳ ನಿರ್ಮಾಣ ಹಾಗೂ ಬಡಾವಣೆಗಳ ನಿರ್ಮಾಣ ರೂಪ ತಳೆದಿವೆ ಎಂಬುದು ಗಮನಾರ್ಹ. ೧೯೬೫ರಲ್ಲಿ ಶಾರದಾ ವಿದ್ಯಾಪೀಠದ ಸ್ಥಾಪಕರಾದ ಇವರು ತಮ್ಮನ್ನು ಅನೇಕ ಕನ್ನಡಪರ, ಶಿಕ್ಷಣಪರ ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡು ದುಡಿದವರಾಗಿದ್ದಾರೆ. ೧೯೬೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂದರ್ಭದಲ್ಲಿ ಇವರು ಪರಿಷತ್ತಿನಲ್ಲಿ ಯೋಜಿಸಿದ ಅನೇಕ ಪ್ರಗತಿಪರ ಕಾರ್ಯಯೋಜನೆಗಳು ಎಲ್ಲಾ ಕನ್ನಡಿಗರ ಜನಪ್ರೀತಿ ಗಳಿಸಿ ಇಂದಿಗೂ ಆದರ್ಶಪ್ರಾಯವಾಗಿವೆ.ಕರ್ನಾಟಕ ಪತ್ರಿಕಾ ಅಕಾಡೆಮಿಯ ಅಧ್ಯಕ್ಷರಾಗಿಯೂ ಇವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ೧೯೯೨ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕರದ ಅಧ್ಯಕ್ಷರಾದ ಇವರು ಹಮ್ಮಿಕೊಂಡ ಕ್ರಿಯಾತ್ಮಕ ಕಾರ್ಯಕ್ರಮಗಳು ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಕನ್ನಡವನ್ನು ಅನುಷ್ಠಾನಗೊಳ್ಳುವಲ್ಲಿ, ಕನ್ನಡಿಗರ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬೆಂಗಳೂರು ನಗರ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾದ ಶ್ರೀಯುತರಿಗೆ ೧೯೯೨ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ೧೯೯೫ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಜಾನಪದತಜ್ಞ’ ಪ್ರಶಸ್ತಿಗಳು ಲಭಿಸಿವೆ.
ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ಗಮಕ ಸಮ್ಮೇಳನ, ಗಡಿನಾಡು ಸಮ್ಮೇಳನ ಹಾಗೂ ಕನ್ನಡ ಪುಸ್ತಕ ಆಂದೋಲನ ಮೊದಲಾಗಿ ಹಲವು ಕ್ರಿಯಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಜನಮನ್ನಣೆ, ಪ್ರೀತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *