LOADING

ಹುಡುಕಲು ಟೈಪ್ ಮಾಡಿ

ಜಾನಪದ ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ಶ್ರೀ ಎಂ. ನಾಗೇಂದ್ರ

ಜಾನಪದ ಸರ್ವ ಕಲೆಗಳ ತಾಯಿಬೇರು. ಈ ಬೇರನ್ನೇ ಬದುಕಿನ ಜೀವದ್ರವ್ಯವಾಗಿಸಿಕೊಂಡು ಸಾಧನೆಗೈದ ಕಲಾಚೇತನಗಳು ಅಸಂಖ್ಯ. ಕನ್ನಡದ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಿಚಾರಿಕೆಯ ಅನರ್ಘ್ಯ ಸೇವೆ ಸಲ್ಲಿಸಿದವರು ನಾಡಿನ ಅನನ್ಯ ಆಸ್ತಿ. ಸಾಧಕರಿಗೆ ಸದಾ ಪ್ರೇರಕ ಶಕ್ತಿ. ಜನಪದದ ಬೆಳಕಿನ ಪ್ರಖರತೆಯಲ್ಲಿ ಬೆಳಗಿ ಹಳ್ಳಿಹಾಡಿನ ಬಡಬದುಕನ್ನು ಬಂಗಾರದ ಬಾಳಾಗಿಸಿಕೊಂಡವರು ಎಂ.ನಾಗೇಂದ್ರ ಮಳವಳ್ಳಿ. ಜಾನಪದ ಕಲಾವಲಯದಲ್ಲಿ ಚಿರಪರಿಚಿತ ಹೆಸರು. ಜನಪದ ಕಲಾವಿದರ ಹಾಡುಗಳ ಸೃಷ್ಟಿಕರ್ತರು.
ನಾಗೇಂದ್ರ ಅವರು ದಕ್ಷಿಣ ಕರ್ನಾಟಕದ ದೈತ್ಯ ಪ್ರತಿಭೆ. ಸಾಂಸ್ಕೃತಿಕ ಲೋಕಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ. ಬಡತನದ ಬೆಂಕಿಯಲ್ಲಿ ಅರಳಿದ ಸೌಗಂಧಿಕ ಪುಷ್ಪ. ಮಳವಳ್ಳಿ ತಾಲ್ಲೂಕಿನ ಕೃಷ್ಣಾಪುರ (ಮಲ್ಲಿಗೆಹಳ್ಳಿ) ನಾಗೇಂದ್ರರ ಹುಟ್ಟೂರು. ಮಾದಯ್ಯ-ಮಂಚಮ್ಮ ದಂಪತಿಯ ಮೂರನೇ ಸುಪುತ್ರರು. ಅಪ್ಪ ನಾದಸ್ವರ ಕಲಾವಿದ, ಅವ್ವ ಸೋಬಾನೆ ಹಾಡುಗಾರ್ತಿ. ಸಂಗೀತವೇ ಮನೆಯ ದೇವರು. ಸ್ವರಧ್ಯಾನ-ಗಾನ ಹುಟ್ಟಿನಿಂದ ಬಂದ ಬಳುವಳಿ. ಹೊಟ್ಟೆಪಾಡಿಗೆ ಭಿಕ್ಷಾಟನೆ ಮಾಡುತ್ತಲೇ ಅಕ್ಷರದ ಅಂಗಳಕ್ಕೆ ಜಿಗಿತ. ಹಾಡು ಭಾವಚೈತನ್ಯವಾದರೆ, ಅಕ್ಷರ ಅರಿವಿನಾಸರೆ. ಕಡುಕಷ್ಟದಲ್ಲೇ ಬಿ.ಎ. ವರೆಗೂ ವಿದ್ಯಾಭ್ಯಾಸ. ಬಾಲ್ಯದಲ್ಲಿ ಕಂಡುಂಡ ನೋವು, ಯಾತನೆ, ಅನುಭವಿಸಿದ ಅಪಮಾನ, ದೌರ್ಜನ್ಯಗಳೇ ಬರವಣಿಗೆಗೆ ಪ್ರೇರಣೆ. ೮೦ರ ದಶಕದಲ್ಲಿ ಪೂರಿಗಾಲಿಯ ಬೊಮ್ಮೆಗೌಡರು, ಹುಳ್ಳಂಬಳ್ಳಿ ಮಹದೇವಪ್ಪರಿಂದ ಕಂಸಾಳೆ ತಂಬೂರಿ ಶೈಲಿಯ ಕಥೆಯ ಕಲಿಕೆ. ಮಲೆಮಾದಪ್ಪ, ಮಂಟೇಸ್ವಾಮಿ ಕಾವ್ಯ, ಸಿದ್ದಪ್ಪಾಜಿ ಗೀತೆಗಳ ದಟ್ಟ ಪ್ರಭಾವ. ಸದಾ ಮನದಲ್ಲಿ ಜನಪದ ಹಾಡಿನದ್ದೇ ಗುಂಗು, ಗಾಯನವೇ ಭಾವಪ್ರಧಾನ. ಸಾಹಿತ್ಯ ರಚನೆಗೆ ಪ್ರೇರಣೆ.
ಪದವಿ ಮುಗಿಸಿ ಬದುಕು ಅರಸಿ ಬೆಂಗಳೂರಿಗೆ ಗುಳೆ. ಜನಪದ ಸಾಹಿತ್ಯ ಪ್ರಸಾರಕ್ಕೆ ಸ್ವಂತ ಮಹೇಶ್ವರಿ ಆಡಿಯೋ ಕಂಪನಿ ಸ್ಥಾಪನೆ. ಕಂಸಾಳೆ ತಂಬೂರಿ ಶೈಲಿ ಕಥಾರೂಪಕಗಳ ಧ್ವನಿಸುರಳಿಗಳ ಬಿಡುಗಡೆಯೊಂದಿಗೆ ಕಲಾಲೋಕಕ್ಕೆ ಪಾದಾರ್ಪಣೆ. ಮುಂದಿನದ್ದು ಅಭೂತಪೂರ್ವ ಜಾನಪದಕಲಾಯಾನ. ಅನುದಿನ ಅನುಕ್ಷಣ ಜಾನಪದದ ಪರಿಚಾರಿಕೆ. ತವರಿನ ಋಣ, ತವರಿನ ತಾಯಿ, ತವರಿನ ಕುಡಿ, ಮೈಸೂರು ಮಾವ, ಬೆಂಗಳೂರು ಮಾವ, ಸಿದ್ದಪ್ಪಾಜಿ ಸಾಕಾರ, ಮಾದೇವ್ನ ಸಾಕಾರ, ಮಾದೇವ್ನ ಆಶೀರ್ವಾದ, ಮಳವಳ್ಳಿ ಗಂಡು ಮುಂತಾದ ಸಾಲಂಕೃತ ಧ್ವನಿಸುರಳಿಗಳ ಮುಖೇನ ನಾಡಿನ ಜನಪದೀಯರ ಮನೆಮಾತು. ಸಾಹಿತ್ಯರಚನೆ, ಗಾಯನ ಮತ್ತು ರಾಗಸಂಯೋಜನೆಗೆ ಬದುಕು ಮುಡಿಪು. ಕ್ರಾಂತಿಗೀತೆ, ಪರಿವರ್ತನಾ ಗೀತೆ, ಹಾಸ್ಯ ಗೀತೆ, ಬುದ್ಧ ಗೀತೆ ಹಾಗೂ ಬಾಬಾ ಸಾಹೇಬರ ಕುರಿತ ಹಾಡುಗಳನ್ನು ಹಾಡುವುದರಲ್ಲಿ ಎತ್ತಿದ ಕೈ. ದೇಶಾದ್ಯಂತ ಪಸರಿಸುವಿಕೆ. ಸಿಂಗಾಪೂರದಲ್ಲೂ ಕನ್ನಡದ ಜನಪದಸಿರಿ ಬೆಳಗಿದ ಹಿರಿಮೆ. ನಾಗೇಂದ್ರ ಅವರು ರಚಿಸಿರುವ ಹೇಗೆ ಮರೆಯಲಿ ಅಪ್ಪಾಜಿ ನಿಮ್ಮ, ಕುರುಡನ ಹಾಡು ಮುಂತಾದ ಗೀತೆಗಳು ಅತ್ಯಂತ ಜನಪ್ರಿಯ. ನೂರಾರು ಧ್ವನಿಸುರಳಿಗಳ ಸಾಹಿತ್ಯಸೆಲೆ, ನೂರಾರು ಕಲಾವಿದರ ಹಾಡುಗಾರಿಕೆಗೆ ನಾಗೇಂದ್ರರ ಗೀತೆಗಳೇ ಬದುಕಿನ ಬುತ್ತಿ. ಗಣರಾಜ್ಯೋತ್ಸವ ಪೆರೇಡ್ನಲ್ಲಿನ ಗಾಯನಕ್ಕೆ ಪ್ರಧಾನಿ-ರಾಷ್ಟ್ರಪತಿಗಳಾದಿಯಾಗಿ ಎಲ್ಲರಿಂದಲೂ ಅಪಾರ ಮೆಚ್ಚುಗೆ ಪಡೆದ ಗರಿಮೆಯ ಎಂ.ನಾಗೇಂದ್ರ ಅವರದ್ದು ನಾಲ್ಕು ದಶಕಗಳ ಸಾರ್ಥಕ ಸೇವೆ. ಪ್ರಶಸ್ತಿ-ಗೌರವಗಳೆಡೆಗೆ ಮನಚಾಚದೇ ಕೇಳುಗರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದ ಹಳ್ಳಿಹಾಡುಹಕ್ಕಿ. ಕನ್ನಡ ಜನಪದ ಸಂಪತ್ತಿನ ಮುಕುಟಮಣಿಗಳಲ್ಲೊಬ್ಬರಾದ ನಾಗೇಂದ್ರರ ಬದುಕು-ಸಾಧನೆ-ಹೋರಾಟ ಕಲಾವಿದರ ಪಾಲಿಗೆ ಸಾರ್ವಕಾಲಿಕ ಅನುಕರಣೀಯ ಮಾದರಿ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *