LOADING

ಹುಡುಕಲು ಟೈಪ್ ಮಾಡಿ

ಖ್ಯಾತ ರಂಗಭೂಮಿ ಕಲಾವಿದರು ಹಾಗೂ ಕವಿಗಳು ನಾಟಕ ಮನೆಯಂಗಳದಲ್ಲಿ ಮಾತುಕತೆ

ಮಾಲತಿ ಸುಧೀರ್

ಕನ್ನಡನಾಡು ಕಲಾವಿದರ ಬೀಡು. ಸರ್ವ ಕಲಾಪ್ರಕಾರಗಳು ಪ್ರತಿಭಾನ್ವಿತ ಕಲಾವಿದರಿಂದ ಸಂಪದ್ಭರಿತ. ಕಲೆ ಭಾವದ ಅಭಿವ್ಯಕ್ತಿಯೂ ಹೌದು, ಬದುಕಿನ ಬುತ್ತಿಯೂ ಸಹ. ಬಣ್ಣವೇ ಕಲಾವಿದರ ಬಾಳಿನ ಬೆಳಕು. ಆ ಬೆಳಕಿನಡಿಯಲ್ಲಿ ಬೆಳಗಿದ ಕಲಾಚೇತನಗಳ ಪರಂಪರೆಯ ಸಾರ್ಥಕ ಕೊಂಡಿ ಕಲಾವಿದೆ ಮಾಲತಿ ಸುಧೀರ್. ವೃತ್ತಿರಂಗಭೂಮಿಯ ದಿಟ್ಟ ಪ್ರತಿಭೆ. ಬಣ್ಣದ ಬದುಕಿಂದ ಚಿನ್ನದ ಬಾಳಿಗೆ ಮನ್ನಣೆ ಪಡೆದ ರಂಗನಾಯಕಿ.
ವೃತ್ತಿ ನಾಟಕ ಕಂಪನಿಯ ಒಡತಿ, ಸಂಘಟಕಿ, ಕಲಾವಿದರ ಅನ್ನದಾತೆ. ಸಾಮಾಜಿಕ ಸೇವಾ ಕಾರ್ಯಕರ್ತೆ. ಮಾಲತಿ ಸುಧೀರ್ ಹುಬ್ಬಳ್ಳಿಯ ಪ್ರತಿಭೆ. ಪದ್ಮರಾಜ್ -ಸುಬ್ಬಮ್ಮ ದಂಪತಿಯ ಸುಪುತ್ರಿ. ಬಡತನದ ಬಾಳಿಗೆ, ಅಕ್ಷರವೇ ಆಸರೆ. ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ. ಬಾಲ್ಯದಿಂದಲೂ ಕಲಾಭಿಮಾನಿ. ಹಾಡು, ನೃತ್ಯ, ನಾಟಕವೆಂದರೆ ಪಂಚಪ್ರಾಣ. ಮನ ಸದಾ ಕಲಾರ್ಪಣ. ಅವಕಾಶಕ್ಕಾಗಿ ಕಾತರಿಸುವಿಕೆ. ಆಗಷ್ಟೇ ಕಾಲೇಜಿಗೆ ಅಡಿಯಿಡಬೇಕಿದ್ದ ಸಂದರ್ಭ. ಹುಬ್ಬಳ್ಳಿಯಲ್ಲಿ ಕ್ಯಾಂಪ್ ಮಾಡಿದ್ದ ಅಭಿಜಾತ ಕಲಾವಿದೆ ಕಲ್ಪನಾರ ಮಿನುಗುತಾರೆ ಮಿತ್ರ ಮಂಡಳಿಯಿಂದ ನಾಟ್ಯ ಬಲ್ಲ ಹುಡುಗಿಗಾಗಿ ಹುಡುಕಾಟ. ಪರಿಚಿತರಿಂದ ಶಿಫಾರಸ್ಸು, ಕಲ್ಪನಾರಿಂದ ಮಾಲತಿ ನೃತ್ಯ ಪ್ರದರ್ಶನಕ್ಕೆ ಶಹಭಾಸ್ಗಿರಿ, ನಾಟಕದಲ್ಲಿ ನೃತ್ಯಾವಕಾಶ. ರಂಗಪ್ರವೇಶದಲ್ಲೇ ಆಕರ್ಷಿಸಿದ ಪ್ರತಿಭಾವಂತೆ. ಮನದೊಳಗಿನ ಕಲೆಗೆ ಇಂಬು, ಮರುವರ್ಷ 1976ರಲ್ಲಿ ‘ಮನೆಮಗಳು’ ನಾಟಕದ ರಾಜೇಶ್ವರಿಯಾಗಿ ರಂಗಪ್ರವೇಶ. ಮುಂದಿನದು ಶುದ್ಧ ಕಲಾನಡೆ. ರಂಗಶಿಸ್ತು-ವಿನ್ಯಾಸ-ನಟನಾಶೈಲಿಗಳೆಲ್ಲವೂ ಕರಗತ. ರಂಗಸಖ್ಯದ ಜೊತೆಗೆ ಸಖನಾದ ನಟ ಸುಧೀರ್. ಸುಳ್ಯದ ಸಂಗಮೇಶ್ವರ ನಾಟ್ಯಕಲಾಸಂಘದ ‘ಗೌಡ್ರು ಗದ್ದಲ’ದ ನಾಯಕಿಯಾಗಿ ಜನಮನ್ನಣೆ. ಸಾಮಾನ್ಯ ಹೆಣ್ಣುಮಗಳೊಬ್ಬಳು ದಿಢೀರ್ ‘ರಂಗನಾಯಕಿ’ಯಾದ ಕಲಾಚಮತ್ಕಾರ.
80ರ ದಶಕದಲ್ಲಿ ಪತಿ ಸುಧೀರ್ ಸಂಗಡ ಬೆಂಗಳೂರಿಗೆ ವಲಸೆ. ಕಲಾಮೋಹದ ಜತೆಗೆ ಅಕ್ಷರಪ್ರೀತಿ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯು-ಪದವಿ ವ್ಯಾಸಂಗ. ಆಗಾಗ ಪತಿಯೊಡನೆ ಕಂಪನಿ ನಾಟಕಗಳಲ್ಲಿ ನಟನಾಯಾನ. ಬದುಕು ಸುಂದರ ಎನಿಸುವ ಹೊತ್ತಿಗೆ ಪತಿಯ ಅನಿರೀಕ್ಷಿತ ನಿರ್ಗಮನ. ಬರಸಿಡಿಲಿನ ಅನುಭವ. ಆ ಕಡುಮಬ್ಬಿನ ದಿನಗಳಲ್ಲಿ ಮಾಲತಿ ಸುಧೀರ್ರ ಕೈಹಿಡಿದು ನಡೆಸಿದ್ದು ಬಣ್ಣವೇ. ಸುಧೀರ್ ಸ್ಥಾಪಿಸಿದ್ದ ಕರ್ನಾಟಕ ಕಲಾವೈಭವ ಸಂಸ್ಥೆಯ ಒಡೆತನ, ಬಡತನವ ತೊಡೆದು ಬದುಕಿಸಿದ ಕಲಾಜೀವನ. ಎರಡು ದಶಕಗಳಿಂದ ಸಂಸ್ಥೆ ಮುನ್ನಡೆಸಿದ ಹಿರಿಮೆ. ನಲವತ್ತು ಕಲಾಕುಟುಂಬಗಳ ಅನ್ನಕ್ಕೆ ದಾರಿಯಾದ ಸಂತೃಪ್ತಿ. ನಾಲ್ಕು ದಶಕಕ್ಕೂ ಮೀರಿದ ಕಲಾಸೇವೆಯಲ್ಲಿ ನೂರಕ್ಕೂ ಹೆಚ್ಚು ನಾಟಕ, 15 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಿಗೆ ಬಣ್ಣ ಹಚ್ಚಿದ ಸಾಧನೆ.
ವೀರಸಿಂಧೂರಲಕ್ಷ್ಮಣ, ತಪ್ಪು ನನ್ನದಲ್ಲ, ಧರ್ಮಾಧಿಕಾರಿ, ಚೆನ್ನಪ್ಪ ಚನ್ನೇಗೌಡ, ಕಿವುಡ ಮಾಡಿದ ಕಿತಾಪತಿ, ಎಚ್ಚರ ತಂಗಿ ಎಚ್ಚರ, ವರ ನೋಡಿ ಹೆಣ್ಣು ಕೊಡು ಜನಪ್ರಿಯ ನಾಟಕಗಳು. ‘ಪುಟ್ಟರಾಜ ಗವಾಯಿಗಳು’ ನಾಟಕದಲ್ಲಿ ವೃದ್ಧ ಪುಟ್ಟರಾಜ ಗವಾಯಿಗಳ ಪಾತ್ರ ನಿರ್ವಹಿಸಿದ ಏಕೈಕ ಕಲಾವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಇಲಾಖೆಗಳಲ್ಲೂ ದುಡಿತ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ, ಅಧ್ಯಕ್ಷೆಯಾಗಿಯೂ ಸಾರ್ಥಕ ಕಾರ್ಯ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳಿಗೆ ಭಾಜನರಾಗಿರುವ ಮಾಲತಿ ಸುಧೀರ್ ವೃತ್ತಿರಂಗಭೂಮಿ ಕಂಡ ಅಪೂರ್ವ ಕಲಾಕುಸುಮ. ಛಲದಿಂದ ಬದುಕನ್ನೇ ಗೆದ್ದ ಮಾದರಿ ಕಲಾವಿದೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *