LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ

ಡಾ.ನಾ.ಮೊಗಸಾಲೆ

ಸೇವೆ ಬದುಕಿನ ಅತಿದೊಡ್ಡ ಮೌಲ್ಯ. ಸೇವೆಗೆ ನಾನಾ ರೂಪ, ಹತ್ತಾರು ಸ್ವರೂಪ. ಜೀವನ ಪಾವನಕ್ಕೆ ಸೇವೆಯೇ ಹೊನ್ನಸಾಧನ, ಸಾರ್ವಜನಿಕ ಸೇವೆ, ಜನಾರ್ಧನ ಸೇವೆಗೆ ಸಮ. ಆ ಕೈಂಕರ್ಯಕ್ಕಾಗಿ ಬದುಕು ಮುಡಿಪಿಟ್ಟವರು ಸರ್ವಕಾಲಕ್ಕೂ ಮಾದರಿಯೇ. ಅಂತಹ ಮಾದರಿ ಪರಂಪರೆಗೆ ನೀರೆರೆದು ಪೋಷಿಸಿದವರಲ್ಲಿ ಡಾ. ನಾ. ಮೊಗಸಾಲೆ ಪ್ರಮುಖರು. ವೈದ್ಯಕೀಯ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವಾನಿರತರು. ಕನ್ನಡ ಕಟ್ಟುವ ಕಾಯಕ ನಿಷ್ಟ ಕಟ್ಟಾಳು.
ನಾ. ಮೊಗಸಾಲೆ ಗಡಿನಾಡಿನ ಗಟ್ಟಿ ಪ್ರತಿಭೆ. ಕಾಸರಗೋಡಿನ ಹೆಮ್ಮೆಯ ಕನ್ನಡಿಗ. ವೈದ್ಯ, ಸಾಹಿತಿ ಮತ್ತು ಸಂಘಟಕರಾಗಿ ಅವರದ್ದು ಅವಿರತ ಶ್ರಮ. ಬಹುಶ್ರುತ ಸಾಧನೆ, ಕಾಸರಗೋಡಿನ ಮಂಜೇಶ್ವರ ಸಮೀಪದ ಮೊಗಸಾಲೆ ಹುಟ್ಟೂರು. ವಿಠಲಭಟ್ಟರು ಹಾಗೂ ಸರಸ್ವತಿ ದಂಪತಿಯ ಸುಪುತ್ರರು. ಕೋಳ್ಯೂರಿನಲ್ಲಿ ಅಕ್ಷರಾಭ್ಯಾಸಕ್ಕೆ ಮುನ್ನುಡಿ. ಕನ್ಯಾನದಲ್ಲಿ ಪ್ರೌಢಶಿಕ್ಷಣ. ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಡಿ.ಎಸ್.ಎ.ಸಿ. ಪದವಿ. ಕಾರ್ಕಳ ತಾಲ್ಲೂಕು ಬೋರ್ಡ್ ಆಡಳಿತಕ್ಕೊಳಪಟ್ಟಿದ್ದ ‘ರೂರಲ್ ಡಿಸ್ಟೆನ್ಸರಿ’ಯಲ್ಲಿ ಅರೆಕಾಲಿಕ ವೈದ್ಯರಾಗಿ ವೃತ್ತಿ ಬದುಕಿಗೆ ಅಡಿ. ಕರ್ನಾಟಕ ಕ್ಲಿನಿಕ್ ರೋಗಿಗಳ ಸೇವೆಗೆಂದೇ ತೆರೆದ ಖಾಸಗಿ ಚಿಕಿತ್ಸಾಲಯ. ಕಾಸರಗೋಡಿನ ಪರಿಸರ, ಮನೆಯಲ್ಲಿನ ಸುಸಂಸ್ಕೃತ ವಾತಾವರಣವೇ ಸಾಹಿತ್ಯಾಸಕ್ತಿಗೆ ಪ್ರೇರಣೆ. ಪುಸ್ತಕ ಪ್ರೀತಿ ಹುಟ್ಟುಗುಣ. ಓದುವ ಸಂಸ್ಕೃತಿ ಜನ್ಮಕ್ಕಂಟಿದ ವರ. ಭಾವದ ತುಡಿತ, ಅಕ್ಷರದ ಸಂಗಾತ ಹೆಚ್ಚಾದಾಗ ಬರಹದೆಡೆಗೆ ಹರಿದ ಚಿತ್ತ. ಪ್ರೌಢಶಾಲೆಯಲ್ಲಿರುವಾಗಲೇ ಸಾಹಿತ್ಯ ಕೃಷಿಗೆ ನಾಂದಿ. ಕಥೆ ಮತ್ತು ಕಾವ್ಯ ನೆಚ್ಚಿನ ಸಾಹಿತ್ಯಕ ಪ್ರಕಾರಗಳು. ಪ್ರೌಢಾವಸ್ಥೆಯಲ್ಲಿ ಬರೆದ ಕಥೆ, ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟ. ಬರವಣಿಗೆ ಭಾವದೊಡಲಾದ ಮೇಲೆ ನಿರಂತರ ಸಾಹಿತ್ಯ ಕೃಷಿ.
ವೈದ್ಯ ಸೇವೆ, ಸಾಹಿತ್ಯ ಕೃಷಿಯ ಜೊತೆಜೊತೆಗೆ ಸಂಘಟನೆಯತ್ತಲೂ ಚಿಗುರೊಡೆದ ಆಸಕ್ತಿ. 1966ರಲ್ಲಿ ಕಾಂತಾವರದಲ್ಲಿ ರೈತ ಯುವಕ ಸಂಘ ಸ್ಥಾಪನೆಯೊಂದಿಗೆ ಸಾರ್ವಜನಿಕ ಸೇವಾಕ್ಷೇತ್ರಕ್ಕೆ ಪಾದಾರ್ಪಣೆ ಆನಂತರವದು ನಿತ್ಯದ ಕಾಯಕ, ಜೀವನದ ಉಸಿರಾಗಿದ್ದು ವಿಶೇಷ. ಬೇಲಾಡಿಯಲ್ಲಿನ ಕಾಂತಾವರ ಕನ್ನಡ ಸಂಘ, ಮೂಡಬಿದಿರೆಯಲ್ಲಿನ ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪನೆ ಮುಂತಾದವು ಸೇವಾಹಾದಿಯಲ್ಲಿನ ಹೆಜ್ಜೆಗುರುತುಗಳು, ಕಾಂತಾವರ ಕನ್ನಡ ಸಂಘದ ಮುದ್ದಣ ಪ್ರಶಸ್ತಿ ಯೋಜನೆಯಡಿ ಕೈಗೊಂಡ ಸಾಹಿತ್ಯೋತ್ಸವ, ವಿಚಾರಸಂಕಿರಣ, ಪುಸ್ತಕಪ್ರಕಟಣೆಗಳು, ವರ್ಧಮಾನ ಸಂಘಟನೆ, ಬರವಣಿಗೆ ಮತ್ತು ರೋಗಿಗಳ ಶುಶ್ರೂಷೆ, ಜೀವ-ಭಾವದ ಮಗ್ಗುಲುಗಳು. ಮಣ್ಣಿನ ಮಕ್ಕಳು, ಅನಂತ, ಕನಸಿನಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದ್ದು, ಪ್ರಕೃತಿ ಮುಂತಾದ ಹದಿನೆಂಟು ಕಾದಂಬರಿಗಳ ರಚನೆ. ವರ್ತಮಾನದ ಮುಖಗಳು, ಪಲ್ಲವಿ, ಸ್ವಂತಕ್ಕೆ ಸ್ವಂತಾವತಾರ ಪ್ರಮುಖ ಕವನಸಂಕಲನಗಳು. ಆನೇಕ ಕೃತಿಗಳ ಸಂಪಾದನೆ. “ಬಯಲಬೆಟ್ಟ’ ಬದುಕಿನ ಆಂತರ್ಯವನ್ನು ತೆರೆದಿಟ್ಟ ಆತ್ಮಚರಿತ್ರೆ. ಗಡಿನಾಡಿನಲ್ಲಿ ಕನ್ನಡ ಕಟ್ಟುವ, ಸಾಹಿತ್ಯದ ಘಮಲು ಪಸರಿಸುವ ಕಾರ್ಯದಲ್ಲಿನ ಅನನ್ಯ ಸೇವೆಗೆ ಸಂದ ಪ್ರಶಸ್ತಿಗಳು ಹತ್ತಾರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ ಮುಂತಾದವು ಸತ್ಕಾಯಕ್ಕೆ ಸಂದ ಸತ್ಫಲ.

ಮುಂದಿನ ಲೇಖನ

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *