LOADING

ಹುಡುಕಲು ಟೈಪ್ ಮಾಡಿ

ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಸಮಾಜ ಸೇವಕಿ ಮನೆಯಂಗಳದಲ್ಲಿ ಮಾತುಕತೆ

ಶ್ರೀಮತಿ ಮಾಲತಿ ಹೊಳ್ಳ

ವಿಕಲತೆ ಶಾಪವಲ್ಲ, ಅಸಮರ್ಥತೆ ದುರಾದೃಷ್ಟವಲ್ಲ, ಮನಸ್ಸಿದ್ದರೆ ಮಾರ್ಗ, ಛಲವಿದ್ದರೆ ಬಲ. ಆತ್ಮವಿಶ್ವಾಸವೇ ಬದುಕಿನ ಅಂತರ್ಜಲ, ಗುರಿಯೇ ಸಾಧನೆಗೆ ಮೂಲ ಎಂಬುದನ್ನು ಸಾಕ್ಷೀಕರಿಸಿದ ಸಾಧಕರ ಸಾಲಿನಲ್ಲಿ ಅಗ್ರಪಂಕ್ತಿಗೆ ಸೇರುವ ಚೇತನ ಮಾಲತಿ ಹೊಳ್ಳ. ಗಾಲಿಕುರ್ಚಿಯ ಕ್ರೀಡಾಪಟು, ಸಮಾಜಸೇವಕಿ, ಬ್ಯಾಂಕ್ ಉದ್ಯೋಗಿ, ಬದುಕನ್ನು ಗೆದ್ದ ಅಂಕವಿಕಲೆಯಾಗಿ ಅವರದ್ದು ಅದ್ವಿತೀಯ ಸಾಧನೆ, ಆದರ್ಶಮಯ ಜೀವನ.
ಮಾಲತಿ ಹೊಳ್ಳ ಮೂಲತಃ ದಕ್ಷಿಣ ಕನ್ನಡದವರು. ಉಡುಪಿ ಜಿಲ್ಲೆಯ ಕೋಟಾ ಹುಟ್ಟೂರು. ಕೃಷ್ಣಮೂರ್ತಿ ಹೊಳ್ಳ-ಪದ್ಮಾವತಿ ಹೊಳ್ಳ ದಂಪತಿಯ ಸುಪುತ್ರಿ. ಕಡುಬಡತನದ ಕುಟುಂಬದ ಕೂಸು. ಬಾಲ್ಯದಲ್ಲಿ ಎಲ್ಲರಂತೆ ಮಾಲತಿ ಬಲು ಚೂಟಿ. ಕಣ್ತುಂಬ ಕನಸುಗಳು, ಮನ ಕುತೂಹಲದ ಗೂಡು. ಆದರೆ, ವಿಧಿಯಾಟವೇ ಬೇರೆಯಾಗಿದ್ದು ದುರಂತ. ಹದಿನಾಲ್ಕು ತಿಂಗಳ ಮಗುವಿಗೆ ಕಾಡಿದ ಪೊಲಿಯೋ ಮಹಾಮಾರಿಯಿಂದ ದೇಹ ಸಂಪೂರ್ಣ ನಿಶ್ಚಲ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸತತ ೨ ವರ್ಷ ವಿದ್ಯುತ್ ಶಾಕ್ ಟ್ರೀಟ್ಮೆಂಟ್ ಬಳಿಕ ದೇಹದ ಮೇಲ್ಭಾಗ ಸ್ಪಂದನಶೀಲ. ಆದರೆ, ಕೆಳಭಾಗದ್ದು ಯಥಾಸ್ಥಿತಿ. ಪರಿಣಾಮ ಮಾಲತಿಯವರ ಭವಿಷ್ಯದ ಚಕ್ರ ಗಾಲಿಕುರ್ಚಿಯ ಚಕ್ರಗಳ ಮೇಲೆಯೇ ಅವಲಂಬಿತ. ಹದಿನೈದು ವರ್ಷಗಳ ನಿರಂತರ ಹೋರಾಟದಲ್ಲಿ ೩೨ ಶಸ್ತ್ರಚಿಕಿತ್ಸೆಗಳು. ಬದುಕೇ ‘ನಿಂತಂತಹ’ ಅನುಭವದ ದಿನಗಳಲ್ಲೇ ಚಿಮ್ಮಿದ್ದು ಏನಾದರೂ ಸಾಧಿಸುವ ಕನಸು. ತನ್ನೆಲ್ಲಾ ನೋವಿಗೆ ಕ್ರೀಡೆಯೇ ಔಷಧಿಯೆಂಬ ಅರಿವು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಓದುವಾಗಲೇ ಕ್ರೀಡೆಯತ್ತ ಒಲವು. ವ್ಯಾಪಕ ತರಬೇತಿ. ಆರಂಭದಲ್ಲಿ ಕಷ್ಟವೆನಿಸಿದರೂ ಧೃತಿಗೆಡದೆ ಮುನ್ನುಗಿದ ಛಲದಂಕಮಲ್ಲೆ.
ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಲೇ ರಾಷ್ಟ್ರೀಯ ಕ್ರೀಡಾಂಗಳಕ್ಕೆ. ಶಾಟ್ಪುಟ್, ಡಿಸ್ಕಸ್ ಥ್ರೋ, ಜಾವಲಿನ್, ವ್ಹೀಲ್ಚೇರ್ ರೇಸ್ ಸ್ಪರ್ಧೆಗಳಲ್ಲಿ ನಿರಂತರ ಪದಕಗಳ ಬೇಟೆ. ಪ್ರತಿ ಪದಕವೂ ಸಾಧನೆಗೆ ಚಿಮ್ಮಲಗೆ. ಸಿಂಡಿಕೇಟ್ ಬ್ಯಾಂಕ್ನ ಕ್ಲರ್ಕ್ ಆಗಿ ವೃತ್ತಿಜೀವನ, ಅದಮ್ಯ ಚೇತನವೆಂಬುದನ್ನು ನಿರೂಪಿಸಿದ ಕ್ರೀಡಾಜೀವನ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟು. ೪ ಬಾರಿ ಪ್ಯಾರಾಒಲಂಪಿಕ್ಸ್ನ ಸ್ಪರ್ಧಾಳು, ಚಿನ್ನದ ಪದಕದ ವಿಜೇತೆ. ೫೦೦ ಪದಕಗಳ ಗೆದ್ದ ಅನನ್ಯ ಕ್ರೀಡಾಚೇತನ. ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿ ಮಾತ್ರ ಫೌಂಡೇಷನ್ ಮೂಲಕ ಗ್ರಾಮೀಣ ಭಾಗದ ವಿಕಲಚೇತನ ಮಕ್ಕಳಿಗೆ ಆಸರೆ. ನೂರಾರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ ತಾಯಿ!. ಸಿಂಡಿಕೇಟ್ ಬ್ಯಾಂಕ್ನ ವ್ಯವಸ್ಥಾಪಕರಾಗಿ ನಿವೃತ್ತರಾಗಿರುವ ಮಾಲತಿ ಹೊಳ್ಳ ಅವರದ್ದು ದೇಶವೇ ಮೆಚ್ಚಿದ ಸಾಧನೆ, ಅಶಕ್ತ-ಅಂಗವಿಕಲ ಪೀಳಿಗೆಗೆ ಸದಾ ಸ್ಫೂರ್ತಿಯ ಚಿಲುಮೆ. ನೊಂದ ಬದುಕನ್ನು ‘ಗೆದ್ದ’ ಬಾಳ್ವೆಯಾಗಿಸಿದ, ಸವಾಲಿಗೆ ಸವಾಲೆಸೆದ ಈ ದಿಟ್ಟೆಯ ಸಾಧನೆಗೆ ಸಂದ ಪದ್ಮಶ್ರೀ, ಅರ್ಜುನ, ರಾಜ್ಯೋತ್ಸವ, ಏಕಲವ್ಯ, ದಸರಾ ಇನ್ನಿತರ ಪ್ರಶಸ್ತಿಗಳೆಲ್ಲದರ ಗೌರವವೂ ನೂರ್ಮಡಿಗೊಂಡಿರುವುದು ಮಾಲತಿ ಹೊಳ್ಳ ಅವರ ಚೈತನ್ಯಕ್ಕೊಂದು ದಿವ್ಯಸಾಕ್ಷಿ.

ಟ್ಯಾಗ್‌ಗಳು:
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *