LOADING

ಹುಡುಕಲು ಟೈಪ್ ಮಾಡಿ

ಪ್ರಗತಿಪರ ಚಿಂತಕರು ಮನೆಯಂಗಳದಲ್ಲಿ ಮಾತುಕತೆ

ಡಾ. ಸಿ.ಎಸ್.ದ್ವಾರಕಾನಾಥ್

ಸಮುದಾಯದ ಸೇವೆಯೇ ಬದುಕಿನ ‘ಧ್ಯಾನ’, ಸಾಮಾಜಿಕ ನ್ಯಾಯಾನುಷ್ಠಾನಕ್ಕೆ ಹೋರಾಡುವುದೇ ಜೀವನ ದಾರಿಯಾಗಿಸಿಕೊಂಡ ವಿರಳರಲ್ಲಿ ವಿರಳರು ಡಾ.ಸಿ.ಎಸ್.ದ್ವಾರಕಾನಾಥ್. ನಿಸ್ವಾರ್ಥ, ನಿಷ್ಕಲ್ಮಷ ನಡೆ, ಪ್ರಖರ ವಿಚಾರಧಾರೆಗಳಿಂದ ಹೆಸರುವಾಸಿಯಾದವರು. ಹೆಸರಾಂತ ನ್ಯಾಯವಾದಿ, ಅಪ್ಪಟ ಅಂಬೇಡ್ಕರ್ವಾದಿ, ಪ್ರಗತಿಪರ ಚಿಂತಕ, ಲೇಖಕ, ಹವ್ಯಾಸಿ ಪತ್ರಕರ್ತ, ಚರ್ಚಾಪಟು ಆಗಿ ಸಾಮಾಜಿಕ ರಂಗದಲ್ಲಿ ಅವರದ್ದು ಬಹುಮುಖ ಸಾಧನೆ.
ಚಿನ್ನದ ಗಣಿಯ ಬೀಡು ಕೋಲಾರದ ಅಪೂರ್ವ ಕೊಡುಗೆ ದ್ವಾರಕಾನಾಥ್. ಹಿಂದುಳಿದ ರೈತ ಕುಟುಂಬದ ಕುಡಿ. ಬಡತನದ ಬದುಕಿಗೆ ಅಕ್ಷರವೇ ಅಮೃತ! ಕಲಿಕೆಯೇ ಮೆಟ್ಟಿಲು. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ. ಓದಿನ ದಾಹಕ್ಕೆ ದಕ್ಕಿದ್ದು ಬಿ.ಎಸ್ಸಿ, ಎಲ್ಎಲ್ಬಿ. ಸಾಹಿತ್ಯದಲ್ಲಿ ಡಾಕ್ಟರೇಟ್ (ಡಿ.ಲಿಟ್) ಹಾಗೂ ಪತ್ರಿಕೋದ್ಯಮ ಕೋರ್ಸ್.
ಬಾಲ್ಯದಿಂದಲೂ ಬದುಕಿನ ನಾನಾ ಬಗೆಗಳ ಬಗ್ಗೆ ತೀವ್ರ ಕುತೂಹಲ. ಸಾಮಾಜಿಕ ತಾರತಮ್ಯ-ಅನಿಷ್ಟ ಪಿಡುಗುಗಳ ಕುರಿತು ಆಕ್ರೋಶ. ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತ. ಕುದಿವ ಮನಕ್ಕೆ ಬಂಡಾಯದ ಗುರಿ. ಹೋರಾಟವೇ ಮನೋಧರ್ಮ. ನ್ಯಾಯವಾದಿಯಾಗುವುದೇ ಸೂಕ್ತವೆಂಬ ನಿಶ್ಚಿತ ನಿಲುವು. ವಕೀಲ ವೃತ್ತಿಯಲ್ಲಿ ಮೂರೂವರೆ ದಶಕಗಳ ಅನನ್ಯ ಸೇವೆ. ದಮನಿತರು, ಅಸಹಾಯಕರಿಗೆ ನ್ಯಾಯ ದೊರಕಿಸಿದ ಸಂತೃಪ್ತಿ. ನ್ಯಾಯಾಲಯದಾಚೆಗಿನ ಹೋರಾಟದಲ್ಲೂ ಸಕ್ರಿಯ. ದಲಿತ, ಕನ್ನಡಪರ ಚಳವಳಿ, ಬಂಡಾಯ ಸಾಹಿತ್ಯ ಸಂಘಟನೆ, ಹಿಂದುಳಿದ ವರ್ಗಗಳ ಪರವಾದ ಚಳವಳಿಗಳಲ್ಲಿ ಗುರುತರ ಪಾತ್ರ. ಸಾಮಾಜಿಕ ಅನುಭವಗಳಿಗೆ ಅಕ್ಷರದ ರೂಪ. ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ‘ಲಂಕೇಶ್ ಪತ್ರಿಕೆ’ಯಲ್ಲಿ ನಿರಂತರ ಬರಹ. ಅಂಬೇಡ್ಕರ್ ವಿಚಾರಧಾರೆ, ಭಾರತೀಯ ಸಂವಿಧಾನ ಮತ್ತು ಮಾನವ ಹಕ್ಕುಗಳ ಹೋರಾಟ ಕುರಿತು ದೇಶ-ವಿದೇಶಗಳಲ್ಲಿ ಉಪನ್ಯಾಸ. ವಾಗ್ಮಿಯೆಂಬ ಹೆಗ್ಗಳಿಕೆ. ದೃಶ್ಯಮಾಧ್ಯಮಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕಾರಣ ಮತ್ತು ಕಾನೂನಾತ್ಮಕ ಚರ್ಚೆಗಳಲ್ಲಿ ವಿಚಾರಲಹರಿ ಹರಿಸಿದ ವಾಗ್ಪಟು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ವಿಳಾಸವೇ ಇಲ್ಲದ ಅಸ್ಪೃಶ್ಯ. ಅಲೆಮಾರಿ, ಆದಿವಾಸಿ, ಹಿಂದುಳಿದವರಿಗೆ ಅಸ್ಮಿತೆ ದೊರಕಿಸಿಕೊಟ್ಟವರು. ಚೊಚ್ಚಲಬಾರಿಗೆ ಲೈಂಗಿಕ ಅಲ್ಪಸಂಖ್ಯಾತರ ಗುರುತಿಸಿ ದೇವದಾಸಿ, ವೇಶ್ಯೆ, ಎಚ್.ಐ.ವಿ.ಪೀಡಿತರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಮಹತ್ವದ ಸಾಧನೆ. ಸಾಹಿತ್ಯ ಕ್ಷೇತ್ರದಲ್ಲೂ ವಿಶಿಷ್ಟ ಛಾಪು. ಯೋಗಿ ವೇಮನ, ಮಣ್ಣ ಬಳೆ ನಾದ, ಗಾಂಧಿ ಮೆಟ್ಟಿದ ನಾಡಿನಲ್ಲಿ, ಅಮೆರಿಕ ಆಮುಖ, ಸಂಕುಲ ಇತ್ಯಾದಿ ಪ್ರಕಟಿತ ಕೃತಿಗಳು. ರಾಮಮನೋಹರ ಲೋಹಿಯಾ ಬರಹಗಳನ್ನು ಕನ್ನಡಕ್ಕೆ ತಂದ ಅನುವಾದಕ. ಹಲವು ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರೂ ಆಗಿರುವ ಡಾ.ಸಿ.ಎಸ್.ದ್ವಾರಕಾನಾಥ್ ಸಾಹಿತ್ಯ ಅಕಾಡೆಮಿ, ಬುದ್ಧಪ್ರಶಸ್ತಿ, ಕೊಡವರತ್ನ, ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳಿಂದ ಭೂಷಿತರು ಹಾಗೂ ನಾಡಿನ ಪ್ರಮುಖ ಚಿಂತಕರು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *