LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಾಜಕಾರಣಿ

ಶ್ರೀ ಹೆಚ್.ಡಿ.ದೇವೇಗೌಡ

ರಾಜಕಾರಣ ಅವಕಾಶವಾದಿಗಳ ಅಂಗಳವಲ್ಲ, ಬದ್ಧತೆ, ಪರಿಶ್ರಮ, ಜನಪರತೆಯೇ ಗೆಲುವಿನ ತೋರಣ ಎಂಬ ಲೋಕನುಡಿಗೆ ಸಾಕ್ಷೀಭೂತರಾಗಿರುವವರು, ಭಾಷೆ, ಗಡಿ ಮೀರಿ ಬೆಳೆದ ರಾಜಕೀಯ ಮತ್ಸದ್ಧಿ.

          1933ರ ಮೇ. 18ರಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ದೇವೇಗೌಡರು ಸಿವಿಲ್‌ ಇಂಜಿನಿಯರಿಂಗ್‌ ಡಿಪ್ಲೋಮಾ ಪೂರೈಸಿದರೂ ಜನಸೇವೆಯತ್ತ ವಾಲಿದರು. 1953ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ಸೇರುವುದರೊಂದಿಗೆ ರಾಜಕೀಯ ಜೀವನಕ್ಕೆ ಅಡಿ. 1962ರಲ್ಲಿ ಕಾಂಗ್ರೆಸ್‌ ಪಕ್ಷ ತೊರೆದು ಸ್ವತಂತ್ರ‍್ಯ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆ. ಮುಂದಿನದ್ದು ಜಯದ ಚೈತ್ರಯಾತ್ರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸತತ ಆರು ಬಾರಿ ಗೆಲುವು. ಈ ಮಧ್ಯೆ ವಿಭಜಿತ ಸಂಸ್ಥಾ ಕಾಂಗ್ರೆಸ್‌ ಪಕ್ಷಕ್ಕೆ ಸೇರಿ 1972ರಿಂದ ಐದು ವರ್ಷಗಳ ಕಾಲ ವಿಧಾನಸಭೆಯ ವಿಪಕ್ಷ ನಾಯಕರಾಗಿ ಮುಂಚೂಣಿಗೆ, ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ.

          80ರ ದಶಕದಲ್ಲಿ ಜನತಾಪಕ್ಷಕ್ಕೆ ಸೇರ್ಪಡೆ. ರಾಮಕೃಷ್ಣ ಹೆಗಡೆ ನೇತೃತ್ವದ ಸಂಪುಟದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯ ಸಚಿವರಾಗಿ ಸೇವೆ. ನೀರಾವರಿ ಇಲಾಖೆಗೆ ಸಮರ್ಪಕ ಅನುದಾನ ನೀಡಿಲ್ಲದಿರುವುದನ್ನು ವಿರೋಧಿಸಿ ಸಚಿವ ಸ್ಥಾನ ತೊರೆದ ರೈತನಾಯಕ. 1994ರಲ್ಲಿ ಜನತಾದಳದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ, ಚುನಾವಣೆಯಲ್ಲಿ ಅಭೂತಪೂರ್ವ ಜಯ. ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪದಗ್ರಹಣ. ಜನತಾದರ್ಶನ, ನೀರಾವರಿ ಯೋಜನೆಗಳ ಜಾರಿ ಮತ್ತಿತರ ಜನಪರ ನಡೆಯಿಂದ ಜನಪ್ರಿಯ.

          1996ರಲ್ಲಿ ರಾಷ್ಟ್ರ ರಾಜಕಾರಣದಲ್ಲಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಸಂಯುಕ್ತರಂಗ ಸರ್ಕಾರ ಮುನ್ನಡೆಸುವ ಅಪೂರ್ವ ಅವಕಾಶ! ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಎಂಬ ಹೆಮ್ಮೆಯ ಗರಿ. 11 ತಿಂಗಳ ಸೀಮಿತ ಅಧಿಕಾರಾವಧಿಯಲ್ಲಿ ಮೂಡಿಸಿದ ಹೆಜ್ಜೆಗುರುತುಗಳು ಅಪಾರ. ಕಾಶ್ಮೀರದಲ್ಲಿ ಚುನಾವಣೆ, ರಸಗೊಬ್ಬರಕ್ಕೆ ಸಬ್ಸಿಡಿ, ಈಶಾನ್ಯ ಭಾರತದಲ್ಲಿ ಶಾಂತಿ ಮರು ಸ್ಥಾಪನೆ, ಕೃಷ್ಣ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಹಣ ಮಂಜೂರು, ನಮ್ಮ ಮೆಟ್ರೋ ಯೋಜನೆಗೆ ಅಸ್ತು ಮುಂತಾದ ಸಾರ್ಥಕ ಕೆಲಸಗಳ ಗರಿ. 1997ರಿಂದ ಸತತವಾಗಿ ಲೋಕಸಭೆಗೆ ಆಯ್ಕೆ. ಸಂಸದರಾಗಿ ಇದೀಗ ಆರನೇ ಅವಧಿ. ಜನಪರ ನಿಲುವು, ರೈತಪರ ಕಾಳಜಿ, ನೆಲ-ಜಲ ರಕ್ಷಣೆಗಾಗಿ ಸದಾ ಹೋರಾಟ, ಯೋಗ, ಧ್ಯಾನ, ದೈವಾರಾಧನೆ, ರಾಜಕೀಯ ಜಾಣ್ಮೆ ಗೌಡರ ಶಕ್ತಿ. ಆರೂವರೆ ದಶಕಗಳ ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳು. ಜಾತ್ಯತೀತ ನಿಲುವು-ರಾಜಕೀಯ ಮುತ್ಸದ್ಧಿತನ-ಸಚ್ಚಾರಿತ್ರ್ಯ-ಹೋರಾಟದ ಮನೋಭಾವದಿಂದಾಗಿ ರಾಜಕಾರಣದಲ್ಲಿ ದೇವೇಗೌಡರದ್ದು ಅಚ್ಚಳಿಯದ ಹೆಸರು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *