LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ವೈದ್ಯರು

ಡಾ|| ಸಿ.ಎನ್. ಮಂಜುನಾಥ್‌

ಹಾಸನ ಜಿಲ್ಲೆಯಲ್ಲಿ 1957ರಲ್ಲಿ ಜನಿಸಿದ ಡಾ|| ಸಿ.ಎನ್. ಮಂಜುನಾಥ್ ಅವರು ಈ ನಾಡಿನ ಹೆಮ್ಮೆಯ ಹೃದಯ ರೋಗ ತಜ್ಞರು. “ಚಿಕಿತ್ಸೆ ಮೊದಲು – ಹಣ ಪಾವತಿ ನಂತರ” ಎನ್ನುವುದು ಇವರ ಧ್ಯೇಯವಾಕ್ಯ. ದಾನಿಗಳಿಂದ ಹಣ ಸಂಗ್ರಹಿಸಿ 25 ಕೋಟಿ ರೂಗಳ ದತ್ತಿ ನಿಧಿ ಸ್ಥಾಪಿಸಿ ಅದರ ಬಡ್ಡಿ ಹಣದಿಂದಲೇ ಬಡಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಇವರ ಹೆಗ್ಗಳಿಕೆ.

ಡಾ. ಮಂಜುನಾಥ್ ಅವರು 2006ರಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ನಂತರ ಈ ಸಂಸ್ಥೆಯ ಖ್ಯಾತಿ ವಿಶ್ವದಾದ್ಯಂತ ಪಸರಿಸಿದೆ. ಕಳೆದ 10 ವರ್ಷಗಳಲ್ಲಿ ಇವರ ನೇತೃತ್ವದಲ್ಲಿ 40 ಲಕ್ಷ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 2 ಲಕ್ಷ ಹೃದಯ ಸಂಬಂಧಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳು ನಡೆದಿವೆ. ರಾಜ್ಯದ ಇತರೆಡೆಯೂ ಹೃದ್ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆ ದೊರೆಯಬೇಕೆಂದು ಮೈಸೂರು ಮತ್ತು ಕಲಬುರಗಿಯಲ್ಲಿಯೂ ಇವರು ಜಯದೇವ ಆಸ್ಪತ್ರೆಯ ಶಾಖೆ ತೆರೆದಿದ್ದಾರೆ. ಇವರ ವಿಶೇಷ ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ಸ್‍ಗಳಲ್ಲಿ ಪ್ರಕಟವಾಗಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಹಲವಾರು ವೈದ್ಯಕೀಯ ಸಮಾವೇಶಗಳನ್ನು ಆಯೋಜಿಸಿದ ಖ್ಯಾತಿಯೂ ಇವರಿಗಿದೆ. ಬಲೂನ್ ವಿಧಾನದಲ್ಲಿ ಶೇಕಡಾ 40ರಷ್ಟು ಕಡಿಮೆ ವೆಚ್ಚದಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ನೀಡುವ ತಂತ್ರಜ್ಞಾನವನ್ನು ಇವರು ಕಂಡುಹಿಡಿದಿದ್ದಾರೆ. ಈಗ ಇದು ‘ಮಂಜುನಾಥ್ ಚಿಕಿತ್ಸಾ ತಂತ್ರಜ್ಞಾನ’ ಎಂದೇ ವಿಶ್ವಾದ್ಯಂತ ಹೆಸರಾಗಿದೆ. ಅಮೇರಿಕಾ, ಇಂಗ್ಲೆಂಡ್, ಚೀನಾ ಮತ್ತು ಫ್ರಾನ್ಸ್‍ನ ವೈದ್ಯರುಗಳು ಈ ಚಿಕಿತ್ಸಾ ವಿಧಾನದ ತರಬೇತಿಯನ್ನು ಇವರಿಂದಲೇ ಪಡೆದಿದ್ದಾರೆ.

ಡಾ. ಮಂಜುನಾಥ್‍ರವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಹೃದ್ರೋಗ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸ್ಕಾಟ್ಲೆಂಡ್‍ನ ರಾಯಲ್ ಕಾಲೇಜ್ ಫಿಜಿಷಿಯನ್ಸ್‍ನ ಫೆಲೋಶಿಪ್‍ಗೆ (ಎಫ್‍ಆರ್‍ಸಿಪಿ) ಇವರು ಭಾಜನರಾಗಿದ್ದಾರೆ. ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರ ಅಪ್ರತಿಮ ಸೇವೆಗೆ ಪ್ರತಿಷ್ಠಿತ ಪದ್ಮಶ್ರೀ ಗೌರವ ಸಂದಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಷಿಯಾ ಫೆಸಿಫಿಕ್ ವ್ಯಾಸ್ಕ್ಯೂಲರ್ ಸಮಾವೇಶದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ದೊರೆತಿದೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *