Loading Events
  • This event has passed.

೮-೬-೧೯೦೨ ೮-೬-೧೯೯೬ ಸಂಶೋಧಕ, ಛಂದಸ್ಸು, ನಿಘಂಟು ಕ್ಷೇತ್ರದ ವಿದ್ವಾಂಸರಾದ ಕೃಷ್ಣಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸೇಡಿಯಾಪು. ತಂದೆ ರಾಮಭಟ್ಟ, ತಾಯಿ ಮೂಕಾಂಬಿಕೆ. ಪುತ್ತೂರಿನ ಸೆಕೆಂಡರಿ ಶಾಲೆ, ಮಂಗಳೂರಿನ ಎಲೋಷಿಯಸ್ ಹೈಸ್ಕೂಲು, ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ. ತಂದೆ ಪ್ರೀತಿಯಿಂದ ವಂಚಿತರಾದ ಕೃಷ್ಣಭಟ್ಟರು ಶಾಲಾ ವಿದ್ಯಾಭ್ಯಾಸವನ್ನು ಕೊನೆಗಾಣಿಸಿ, ಮಜಿ (ವೀರಕಂಬ) ಶಾಲೆಯಲ್ಲಿ ಅಧ್ಯಾಪನ ವೃತ್ತಿ ಪ್ರಾರಂಭ. ಸಾಹಿತ್ಯದ ಸಂಶೋಧನೆ ಎಂದರೆ ಸೇಡಿಯಾಪುರವರಿಗೆ ಅಚ್ಚುಮೆಚ್ಚು ‘ಕನ್ನಡ ವರ್ಣಗಳು’ ಭಾಷಾ ವಿಜ್ಞಾನದ ಕೃತಿಯಾದರೆ, ‘ಕೆಲವು ದೇಶ ನಾಮಗಳು’ ದೇಶಿಯ ನಾಮಗಳನ್ನು ಕುರಿತ ಸಂಶೋಧನಾ ಕೃತಿ. “ಚಂದ್ರ ಖಂಡ ಮತ್ತು ಕೆಲವು ಸಣ್ಣ ಕಾವ್ಯಗಳು” ಕಾವ್ಯ ಸಂಕಲನ ವಿಶಿಷ್ಟವಾದ ವಸ್ತು ವಿನ್ಯಾಸದಿಂದ ಕೂಡಿದ ಮಾರ್ಗ ಮತ್ತು ದೇಸಿ ಯುಕ್ತ ಮಿಶ್ರಣದ ಸುಂದರ ಕೃತಿಗಳು. ಕಥೆಗಾರನ ಆಳವಾದ ಜೀವನಾನುಭವದ ಮತ್ತು ಸಮಕಾಲೀನ ಪರಿಸರ ಪ್ರಜ್ಞೆಯ ಕಥಾ ಸಂಕಲನ ‘ಪಳಮೆಗಳು.’ ಛಂದಶ್ಶಾಸ್ತ್ರವನ್ನು ಕುರಿತು ಬರೆದ ಕೃತಿಗಳು ‘ಕನ್ನಡ ಗೀತಿಕೆಯ ಲಕ್ಷಣ ಮತ್ತು ಧಾಟಿ’ ಛಂದೋಗತಿ ಮತ್ತು ಕನ್ನಡ ಛಂದಸ್ಸು. ಇವು ಮೂರೂ ಛಂದಶ್ಶಾಸ್ತ್ರದ ಅತ್ಯಂತ ಮಹತ್ವದ ಕೃತಿಗಳು. ಶ್ರೀ ಮಚ್ಚಿಮಲೆ ಶಂಕರನಾರಾಯಣರಾವ್ ಮತ್ತು ಆರ್.ಎಸ್. ನಾವೂಕರ್‌ರೊಡನೆ ಸೇರಿ ರಚಿಸಿದ ನಿಘಂಟು “ಕನ್ನಡ ನಿಘಂಟು”, ಕನ್ನಡ ಭಾಷೆಗೊಂದು ದೊಡ್ಡ ಕೊಡುಗೆ. ಪಳಮೆಗಳು ಮತ್ತು ಕನ್ನಡ ವರ್ಣಗಳು ಕೃತಿಗೆ ಮದರಾಸು ಸರಕಾರದ ಪುರಸ್ಕಾರ. ಚಂದ್ರಖಂಡ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಕೆಲವು ದೇಶ ನಾಮಗಳು ಕೃತಿಗೆ ಮೈಸೂರು ವಿ.ವಿ.ದ ಸ್ವರ್ಣಮಹೋತ್ಸವ ಬಹುಮಾನ, ‘ಛಂದೋಗತಿ’ಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಚಾರ ಪ್ರಪಂಚ ಸಂಶೋಧನಾ ಕೃತಿಗೆ ಮರಣೋತ್ತರವಾಗಿ ಪಂಪ ಪ್ರಶಸ್ತಿ ಲಭಿಸಿದೆ. ಇವರ ಕೃತಿಗಳಷ್ಟೇ ಗೌರವ ಗ್ರಂಥಗಳೂ ಪ್ರಕಟಗೊಂಡಿವೆ. ಒಸಗೆ, ಸೇಡಿಯಾಪು ಕೃಷ್ಣಭಟ್ಟ, ಸೇಡಿಯಾಪು ವಾಙ್ಮಯ, ಅಚ್ಛೋದ, ಸೇಡಿಯಾಪು ನೆನಪುಗಳು, ಸೇಡಿಯಾಪು, ನಂದಾದೀವಿಗೆ, ಪಂಡಿತವರೇಣ್ಯ, ಶತಾಂಜಲಿ ಗ್ರಂಥಗಳಿಂದ ಸೇಡಿಯಾಪುರವರ ವಿದ್ವತ್ ಅರಿವಾದೀತು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕಯ್ಯಾರೆ ಕಿಞ್ಞಣ್ಣರೈ – ೧೯೧೫ ದಯಾನಂದ ತೊರ್ಕೆ – ೧೯೩೮ ವಿಷ್ಣುಮೂರ್ತಿ – ೧೯೪೩ ರವೀಂದ್ರ ಕರ್ಜಗಿ – ೧೯೪೬