Loading Events

೭-೧೧-೧೯೧೦ ೬-೧೧-೧೯೯೧ ವಿದ್ವಾಂಸರು, ಸಂಶೋಧಕರು, ಸಾಹಿತಿಗಳು ಆದ ಭೂಸನೂರಮಠರವರು ಹುಟ್ಟಿದ್ದು ರೋಣ ತಾಲ್ಲೂಕಿನ ನಿಡಗುಂದಿಯಲ್ಲಿ. ತಂದೆ ಶಿವಮೂರ್ತಯ್ಯ, ತಾಯಿ ರಾಚಮ್ಮ. ಪ್ರಾರಂಭಿಕ ಶಿಕ್ಷಣ ನಿಡಗುಂದಿ, ಗದಗ, ಹುಬ್ಬಳ್ಳಿಗಳಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಆನರ್ಸ್), ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಬೋಧನಾ ವೃತ್ತಿಗೆ. ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ವೀರಶೈವ ಸಾಹಿತ್ಯ ಮತ್ತು ಧರ್ಮಪೀಠದ ಪ್ರಾಧ್ಯಾಪಕರಾಗಿ ನಿವೃತ್ತಿ. ನಿವೃತ್ತಿಯ ನಂತರವೂ ಧನಸಹಾಯ ಆಯೋಗದ ವಿಶ್ರಾಂತ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ. ಇದಲ್ಲದೆ ಕರ್ನಾಟಕ, ಮುಂಬಯಿ, ಪೂನ, ಮೈಸೂರು, ಬೆಂಗಳೂರು, ಕೇರಳ ವಿಶ್ವವಿದ್ಯಾಲಯಗಳ ವಿವಿಧ ಅಧ್ಯಯನ ಮಂಡಲಿಗಳಲ್ಲಿ ಸದಸ್ಯರಾಗಿ ನಿರ್ವಹಿಸಿದ ಕಾರ‍್ಯ. ಕೆಲಕಾಲ ಕರ್ನಾಟಕ ವಿಶ್ವವಿದ್ಯಾಲಯದ ಕಲಾವಿಭಾಗದ ಡೀನ್ ಆಗಿ, ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕ ಮಂಡಲಿಯಲ್ಲಿಯೂ ಸಲ್ಲಿಸಿದ ಸೇವೆ. ಪರಿಷ್ಕರಿಸಿ ಪ್ರಕಟಿಸಿದ ಹಲವಾರು ಗ್ರಂಥಗಳು. ಘನಮಠದ ಶಿವಯೋಗಿಗಳ ಭಕ್ತಿ ಸುಧಾಸಾರ-೧೯೪೫, ಸಿದ್ಧ ನಂಜೇಶನ ಗುರುರಾಜ ಚಾರಿತ್ರ-೧೯೫೦ ; ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯಮ್ಮನವರ ವಚನಗಳು-೧೯೫೦ ; ಗೌರವಾಂಕನ ಮೋಳಿಗೆಯ್ಯನ ಪುರಾಣ. ಅದೃಶ್ಯಕವಿಯ ಪ್ರೌಢರಾಯನ ಕಾವ್ಯ, ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆ. ಮಹಾಲಿಂಗ ದೇವನ ಏಕೋತ್ತರ ಶತಸ್ಥಲ, ಕಲ್ಲುಮಠದ ಪ್ರಭುದೇವರ ಲಿಂಗಲೀಲಾ ವಿಲಾಸ ಚಾರಿತ್ರ, ವಚನ ಸಾಹಿತ್ಯ ಸಂಗ್ರಹ (ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ), ಶೂನ್ಯ ಸಂಪಾದನೆಯ ಪರಾಮರ್ಶೆಯು ಇವರಿಗೆ ಅಪಾರ ಕೀರ್ತಿ ತಂದುಕೊಟ್ಟ ಮೌಲಿಕ ಗ್ರಂಥ. ೧೯೭೪ರಲ್ಲಿ ಈ ಪರಾಮರ್ಶೆಯ ವಿಮರ್ಶೆಯೂ ಪ್ರಕಟ. ಸಂಪಾದಿಸಿದ ಮತ್ತೊಂದು ಕೃತಿ ಕಾಶ್ಮೀರದಿಂದ ಕಲ್ಯಾಣಕ್ಕೆ. ಸಮಸ್ತ ಮನುಕುಲದ ವಿಶ್ವತತ್ತ್ವಗಳೂ ಅಡಕಗೊಂಡು ಆರುಭಾಗಗಳಲ್ಲಿ, ಮಹಾದೇವಿಯಕ್ಕನನ್ನು ಕುರಿತ ಕಾವ್ಯ-ಮಹಾಕಾವ್ಯ ‘ಭವ್ಯಮಾನವ.’ ಇವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ೧೯೬೯ರಲ್ಲಿ, ಕೇಂದ್ರ ಸಾಹಿತ್ಯ ಅಕಾಡಮಿ ೧೯೭೧ರಲ್ಲಿ ಶೂನ್ಯ ಸಂಪಾದನೆಯ ಪರಾಮರ್ಶೆ ಗ್ರಂಥಕ್ಕೆ ಪ್ರಶಸ್ತಿ ಮತ್ತು ರಾಜ್ಯದ ಬಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದುವುಗಳು ಸಂದಿವೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಿ.ಶಿ. ಬಸವನಾಳ – ೧೮೯೩-೨೨.೧೨.೧೯೫೧ ವಸಂತ ಮಧ್ವರಾಜ್ – ೧೯೨೪