Loading Events

೧೭.೦೬.೧೯೧೮ ಮೃದಂಗ, ಖಂಜರ, ಕೊನಗೋಲು ಮುಂತಾದ ವಾದನಗಳಲ್ಲಿ ಪ್ರಖ್ಯಾತರಾಗಿದ್ದ ರಂಗನಾಥನ್‌ರವರು ಹುಟ್ಟಿದ್ದು ಬೆಂಗಳುರು. ತಂದೆ ಭಾರತಿ ವೀಣಾ ವಿಶ್ವನಾಥ ಶಾಸ್ತ್ರಿಗಳು, ತಾಯಿ ಕಲ್ಯಾಣಮ್ಮ. ಬಾಲ್ಯದಿಂದಲೇ ಹರಿಕಥೆ, ಮೃದಂಗ ವಾದನದತ್ತ ಹರಿದ  ಮನಸ್ಸು. ಪ್ರಾರಂಭಿಕ ಶಿಕ್ಷಣ ಪಾಲಘಾಟ್ ಅಯ್ಯಾಮಣಿ ಅಯ್ಯರ್‌ರವರಲ್ಲಿ ಮತ್ತು ತಿರುವಯ್ಯಾರ್‌ ಶಂಕರನಾರಾಯಣ ಭಾಗವತರಲ್ಲಿ. ನಂತರ ಪಾಲಘಾಟ್ ಸೋಮೇಶ್ವರ ಭಾಗವತರ, ಪಂದಮಂಗಳಂ ಕೃಷ್ಣಸ್ವಾಮಿ ಅಯ್ಯರ್‌, ಟೈಗರ್‌ ವರದಾಚಾರ್‌, ವಿದ್ವಾನ್ ಡಿ. ಸುಬ್ಬಯ್ಯ, ವಿ. ಶ್ರೀನಿವಾಸರಾವ್ ಮುಂತಾದವರಲ್ಲಿ ತಾಳ, ಲಯ, ಪಲ್ಲವಿಯಲ್ಲಿ ವಿಶೇಷ ಜ್ಞಾನಾರ್ಜನೆ. ಆಕಾಶವಾಣಿಯ ನಿಲಯದ ಕಲಾವಿದರಾಗಿ, ಕರ್ನಾಟಕ ಗಾನ ಕಲಾ ಪರಿಷತ್ತಿನ ಸದಸ್ಯರಾಗಿ ಸಲ್ಲಿಸಿದ ಸೇವೆ. ಬೆಂಗಳೂರಿನ ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತಸಭಾ, ಮುಂತಾದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ನೀಡಿದ ಮೃದಂಗ, ಖಂಜರಿ, ಕೊನಗೋಲು ಕಾರ್ಯಕ್ರಮ. ಹಿರಿಯ ಸಂಗೀತ ವಿದ್ವಾಂಸರಾದ ಟಿ. ಚೌಡಯ್ಯ, ಟಿ.ಆರ್‌. ಮಹಾಲಿಂಗಂ, ಚೆಂಬೈ ವೈದ್ಯನಾಥ ಭಾಗವತರ್‌, ಅರಿಯಾಕುಡಿ ರಾಮಾನುಜ ಅಯ್ಯಂಗಾರ್‌, ಬಾಲಮುರಳಿಕೃಷ್ಣ, ಆಲತ್ತೂರು ಸಹೋದರರು ಇವರುಗಳಿಗೆ ನೀಡಿದ ಮೃದಂಗದ ಸಾಥಿ. ಹೊರರಾಜ್ಯದ ಅನೇಕ ಸಂಗೀತ ಕಲಾವಿದರಿಗೂ ನೀಡಿದ ಪಕ್ಕ ವಾದ್ಯದ ಸಹಕಾರ. ಸಂದ ಪ್ರಶಸ್ತಿ ಗೌರವಗಳು ಹಲವಾರು. ತ್ಯಾಗರಾಜ ಸಭಾದಿಂದ ಲಯ ವಾದ್ಯದುರಂಧರ. ಬಿ. ದೇವೇಂದ್ರಪ್ಪ ಸಂಗೀತೋತ್ಸವ ಸಮಿತಿಯಿಂದ ತಾಳ ವಾದ್ಯಕಳಾನಿಧಿ, ತ್ಯಾಗರಾಜ ಭವನ ಸಭಾದವರಿಂದ ಕಲಾಜ್ಯೋತಿ, ಪರ್‌ಕಸಿವ್ ಆರ್ಟ್ ಸೆಂಟರಿನಿಂದ ಲಯ ಕಲಾ ನಿಪುಣ ಮತ್ತು ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾ ತಿಲಕ, ಪುರಂದರ ಆರಾಧನಾ ಮಹೋತ್ಸವ- ಮುಳಬಾಗಿಲು, ಅಯ್ಯನಾರ್‌ ಕಾಲೇಜು – ಬೆಂಗಳೂರು ಮುಂತಾದುವುಗಳಿಂದ ದೊರೆತ ಪ್ರಶಸ್ತಿ ಗೌರವಗಳು.

* * *