Loading Events
  • This event has passed.

೩೧-೭-೧೯೦೩ ೧೫-೮-೧೯೫೩ ಕನ್ನಡ ಸಾಹಿತ್ಯದಲ್ಲಿ ಮಧುರಚೆನ್ನರೆಂದೇ ಪ್ರಖ್ಯಾತರಾಗಿದ್ದ ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಯವರು ಹುಟ್ಟಿದ್ದು  ವಿಜಾಪುರ ಜಿಲ್ಲೆಯ ಹಲಸಂಗಿ ಬಳಿಯಿರುವ ಹೀರೆಲೋಣಿಯಲ್ಲಿ. ತಂದೆ ಸಿದ್ಧಲಿಂಗಪ್ಪ ತಾಯಿ ಅಂಬವ್ವ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆ. ಹುಟ್ಟಿದೂರಿನಲ್ಲೇ ವ್ಯಾಸಂಗ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮಸ್ಥಾನ. ಮುಂದಿನ ವ್ಯಾಸಂಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ತತ್ತ್ವ ಜಿಜ್ಞಾಸೆಯತ್ತ ಹರಿದ ಮನಸ್ಸು. ಕ್ರಮಬದ್ಧ ಶಾಲಾ ಶಿಕ್ಷಣಕ್ಕೆ ಮಂಗಳ. ಓದಿನ ವಿಪರೀತ ಗೀಳು. ಸ್ವತಂತ್ರವಾಗಿ ಕಲಿತದ್ದು ಇಂಗ್ಲಿಷ್ ಮತ್ತು ಬಂಗಾಳಿ ಭಾಷೆ. ವಚನ ವಾಙ್ಞಯದ ವಿಸ್ತಾರವಾದ ಅಧ್ಯಯನ. ಜನಪದ ತತ್ತ್ವಗಳ ಸೌಂದರ‍್ಯ ಅರಿತು ಅದರಿಂದ ಆದ ಪ್ರಭಾವ. ಜನಪದ ಗೀತೆಗಳನ್ನು ತಮ್ಮ ಮಧುರ ಕಂಠದಿಂದ ಹಾಡಿ ಸ್ನೇಹಿತರಿಗೆ ಕೊಡುತ್ತಿದ್ದ ಸಂತೋಷ. ಶ್ರೀರಾಮಕೃಷ್ಣ, ಅರವಿಂದ, ಸ್ವಾಮಿ ವಿವೇಕಾನಂದ, ರವೀಂದ್ರರ ಕೃತಿಗಳ ಅಧ್ಯಯನ. ಅರವಿಂದರತ್ತ ಒಲಿದ ಮನಸ್ಸು. ಪಾಂಡಿಚೆರಿಯ ಅರವಿಂದಾಶ್ರಮಕ್ಕೆ ಪ್ರತಿವರ್ಷ ಭೇಟಿ. ಹಲಸಂಗಿಯಲ್ಲಿ ಗೆಳೆಯರನ್ನು ಕೂಡಿಸಿ ಸ್ಥಾಪಿಸಿದ್ದು ಶ್ರೀ ಅರವಿಂದ ಮಂಡಳ ಮತ್ತು ಗೆಳೆಯರ ಗುಂಪು. ಅರವಿಂದರ ತತ್ತ್ವ ಪ್ರಚಾರ, ಸಾಹಿತ್ಯ ಚಟುವಟಿಕೆ, ಪ್ರಕಟಣಾ ಕಾರ‍್ಯದ ಕಾರ‍್ಯಭಾರ. ತತ್ತ್ವಶಾಸ್ತ್ರ, ಇತಿಹಾಸ, ಸಾಹಿತ್ಯ, ಭಾಷಾಶಾಸ್ತ್ರ, ಜಾನಪದ ಮುಂತಾದ ವಿಷಯಗಳನ್ನು ಕುರಿತು ಬರೆದ ಲೇಖನಗಳು. ಪ್ರಕಟಿಸಿದ ಪುಸ್ತಕಗಳು-ಶಬ್ದ ಸಾಮ್ರಾಜ್ಯದಲ್ಲಿಯ ಮಂತ್ರಶಕ್ತಿಯ ಪುನರುಜ್ಜೀವನ, ಸತ್ಯ, ಹಲಸಂಗಿಯ ಲಾವಣೀಕಾರ ಖಾಜಾಬಾಯಿ, ಇತಿಹಾಸದ ಕವಿಗಳು, ಬಸವಣ್ಣನವರ ಭೋಜನ ಶಾಲೆ ಮುಖ್ಯಲೇಖನಮಾಲೆ. ‘ನನ್ನ ನಲ್ಲ’ ಇವರ ಕವಿತಾ ಸಂಕಲನ. ಮಧುರ ಗೀತ-ಇದೊಂದು ಸ್ನೇಹಸೂಕ್ತ. ಗದ್ಯ ಕೃತಿಗಳಲ್ಲಿ ಪೂರ್ವರಂಗ, ಕಾಳರಾತ್ರಿ, ಬೆಳಗು ಈ ಕೃತಿಗಳಲ್ಲಿ ಅವರ ಆತ್ಮ ಕಥನವಿದೆ. ‘ಆತ್ಮ ಸಂಶೋಧನೆ’-ಅಧ್ಯಾತ್ಮಿಕ ಅನುಭವದ ಕೃತಿ ; ಪೂರ್ವಯೋಗದ ಪಥದಲ್ಲಿ ಅರವಿಂದರ ತತ್ತ್ವವಿಚಾರ ಗ್ರಂಥ ; ನಾಟಕ-ಸಿರಿಯಾಳ ಸತ್ವಪರೀಕ್ಷೆ. ಜೀವನ ಚರಿತ್ರೆ-ಶ್ರೀ ವಿದ್ಯಾರಣ್ಯರು (ಸಿಂಪಿಲಿಂಗಣ್ಣನವರೊಡನೆ ಸಂಪಾದಿತ ಕೃತಿ). ಅನುವಾದ-ಮಾತೃವಾಣೀ, ಧರ್ಮಕ್ಷೇತ್ರೆ ಕುರುಕ್ಷೇತ್ರೇ, ಪೂರ್ವಯೋಗ, ರಾಕ್ಷಸಿ ಮಹಾತ್ವಾಕಾಂಕ್ಷೆ, ವಿಸರ್ಜನ. ‘ಬಾಳಿನಲ್ಲಿ ಬೆಳಕು’- ಟಾಲ್‌ಸ್ಟಾಯ್‌ರವರ ಆತ್ಮಕಥೆಯ ಅನುವಾದ. ಜನಪದ ಗೀತೆಗಳ ಪ್ರಸಿದ್ಧ ಗಾಯಕರು, ಸಂಗ್ರಾಹಕರು. ಬಿಜಾಪುರದಲ್ಲಿ ನಡೆದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬೀಸುವ ಕಲ್ಲಿನ ಹಾಡುಗಳು’ ಪ್ರಬಂಧ ಮಂಡಿಸಿ ವಿದ್ವತ್ ಜನರಿಂದ ಪ್ರಶಂಸೆ. ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವ ಪಡೆದ ಮಧುರಚೆನ್ನರು ತೀರಿಕೊಂಡದ್ದು ೧೯೫೩ರ ಸ್ವಾತಂತ್ರ್ಯೋತ್ಸವ ದಿನದಂದು.   ಇದೇ ದಿನ ಹುಟ್ಟಿದ ಸಾಹಿತಿ : ಶಾರದಾ ಗೋಕಾಕ್ – ೧೯೧೬