Loading Events
  • This event has passed.

೨೭-೫-೧೮೯೭ ೨೫-೧-೧೯೮೪ ಸಾಹಿತ್ಯ, ಕನ್ನಡ ರಂಗಭೂಮಿ ಎರಡರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ ಪುಟ್ಟಸ್ವಾಮಯ್ಯನವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಸಪ್ಪ, ತಾಯಿ ಮಲ್ಲಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ. ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿದರೂ ತಂದೆಯ ಸಾವಿನಿಂದ ಸಂಸಾರದ ಜವಾಬ್ದಾರಿ ಹೊರುವುದು ಅನಿವಾರ‍್ಯವಾಗಿ ಓದಿಗೆ ಶರಣು ಹೊಡೆಯಬೇಕಾಯಿತು. ಜೀವನ ನಿರ್ವಹಣೆಗೆ ಆಯ್ದುಕೊಂಡದ್ದು ಪತ್ರಿಕೋದ್ಯಮ. ನ್ಯೂ ಮೈಸೂರ್, ಮೈಸೂರ್ ಸ್ಟಾರ್ ಪತ್ರಿಕೆಗೆ ಸುದ್ದಿ ಸಂಪಾದಕರಾಗಿ ವೃತ್ತಿ ಆರಂಭ. ಒಕ್ಕಲಿಗರ ಪತ್ರಿಕೆ, ಪ್ರಜಾಮತ, ಜನವಾಣಿ ಮಾತೃಭೂಮಿ ಪತ್ರಿಕೆಗಳ ಮತ್ತು ಪ್ರಜಾವಾಣಿ ಪತ್ರಿಕೆಯ ಮೊದಲ ಸಂಪಾದಕರಾಗಿಯೂ ದುಡಿದರು. ರಂಗಭೂಮಿ ಇವರ ಆಸಕ್ತಿ ಕ್ಷೇತ್ರ. ಆಗ ಚಿಕ್ಕಲಾಲ್ ಬಾಗ್‌ನ ತುಳಸೀ ತೋಟದ ಹಿಂದೆ ರಂಗ ನಾಟಕಗಳು ಪ್ರದರ್ಶನ ನಡೆಯುತ್ತಿದ್ದ ಕಾಲ. ನಾಟಕ ರಚನೆಯ ಪ್ರಯತ್ನ. ಷಹಜಹಾನ್ ಇವರ ಮೊದಲ ನಾಟಕ (ಅನುವಾದ), ಗೌತಮಬುದ್ಧ  (ಲೈಟ್ ಆಫ್ ಏಷ್ಯಾದಿಂದ) ಎರಡು ನಾಟಕಗಳು ರಂಗದ ಮೇಲೆ ಯಶಸ್ವಿ. ನಂತರ ಕುರುಕ್ಷೇತ್ರ, ಯಾಜ್ಞಸೇನಿ, ಅಕ್ಕಮಹಾದೇವಿ, ಸಂಪೂರ್ಣ ರಾಮಾಯಣ, ದಶಾವತಾರ ಯಶಸ್ವಿ ಪಡೆದ ನಾಟಕಗಳು. ಪ್ರಚಂಡ ಚಾಣಕ್ಯ, ಬಿಡುಗಡೆಯ ಬಿಚ್ಚುಗತ್ತಿ ಮುಂತಾದ ನಾಟಕಗಳ ಸೃಷ್ಟಿ . ಹಲವಾರು ಕಾದಂಬರಿಗಳ ರಚನೆ. ‘ರೂಪಲೇಖಾ’ ಮೊದಲ ಕಾದಂಬರಿ. ಮಲ್ಲಮ್ಮನ ಪವಾಡ ಜನಪ್ರಿಯ ಕಾದಂಬರಿ. ಬಸವಣ್ಣನವರ ಜೀವಿತ ಕಾಲವನ್ನಾಧರಿಸಿದ ಉದಯರವಿ, ರಾಜ್ಯಪಾಲ, ಕಲ್ಯಾಣೇಶ್ವರ, ನಾಗಬಂಧ, ಮುಗಿಯದ ಕನಸು, ಕ್ರಾಂತಿ ಕಲ್ಯಾಣ ಕಾದಂಬರಿಗಳು. ಧ್ರುವ ಸ್ವಾಮಿನಿ, ಇತಿಹಾಸದ ಪುಟಗಳಿಂದ, ನಾಟ್ಯಮೋಹಿನಿ ಕಥಾಸಂಕಲನ. ಶ್ರೀದುರ್ಗ, ಚಂಗಲೆಯ ಬಲಿದಾನ-ಮಕ್ಕಳ ನಾಟಕ. ಜೀವನ ಚರಿತ್ರೆ-ಸಿದ್ದವನಹಳ್ಳಿ ನಿಜಲಿಂಗಪ್ಪ. ಪ್ರಬಂಧ ಸಂಕಲನ-ನಾಟ್ಯರಂಗ-ಚಿತ್ರರಂಗ. ಬಂಗಾಳಿ ಕಾದಂಬರಿ ಅನುವಾದ ‘ಇವನಲ್ಲ.’ ಕವಿತಾ ಸಂಕಲನ-ಮಾರ್ದನಿ. ಶ್ರೀ ದುರ್ಗಾಸಪ್ತಶತೀ, ಲಲಿತಾ ಸಹಸ್ರ ಸಾಹಿತ್ಯ, ಶ್ರೀ ರುದ್ರ ತ್ರಿಶತಿ ಸಾಂಗತ್ಯದಲ್ಲಿ ರಚನೆ. ಕ್ರಾಂತಿ ಕಲ್ಯಾಣ ಕಾದಂಬರಿ ಮಾಲೆ ಹಿಂದಿಗೆ ಅನುವಾದ. ಚಲನಚಿತ್ರೋದ್ಯಮದಲ್ಲೂ ಅನುಭವ. ‘ಮಲ್ಲಮ್ಮನ ಪವಾಡ’ ಚಲನಚಿತ್ರವಾದುದು. ದೊರೆತ ಪ್ರಶಸ್ತಿ ಗೌರವ-ಕುರುಕ್ಷೇತ್ರ ನಾಟಕಕ್ಕೆ ಮೈಸೂರು ಸರ್ಕಾರದ ಪ್ರಶಸ್ತಿ, ರಾಜ್ಯಪ್ರಶಸ್ತಿ, ಕರ್ನಾಟಕ ಪತ್ರಕರ್ತರ ಸಂಘದಿಂದ ಸಂಚಿಕೆ ಅರ್ಪಣೆ, ಕ್ರಾಂತಿ ಕಲ್ಯಾಣ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ಭಾರತೀಯ ಧರ್ಮ ಸಮ್ಮೇಳನದ ಮೂರನೆಯ ಅವೇಶನದಲ್ಲಿ ಪತ್ರಿಕೋದ್ಯಮ ರತ್ನ ಪ್ರಶಸ್ತಿ. ಬಿ. ಪುಟ್ಟಸ್ವಾಮಯ್ಯನವರು ನಿಧನರಾದದ್ದು ೧೯೮೪ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸುಶೀಲ ಪಿ. ಉಪಾಧ್ಯಾಯ – ೧೯೩೭ ಪರಮೇಶ್ವರಿ ಲೋಕೇಶ್ವರ್ – ೧೯೩೮