Loading Events
  • This event has passed.

೧೦.೧೦.೧೯೩೬ ಸಾಹಿತಿಗಳಾಗಿ, ಸಾಹಿತ್ಯ ಸಂಘಟಕರಾಗಿ ಕಲಬುರ್ಗಿಯ ಸಾಹಿತ್ಯ ಪ್ರಿಯರಿಗೆ ಸಾಹಿತ್ಯಿಕ, ಶೈಕ್ಷಣಿಕ ವಿಷಯಗಳನ್ನು ತಮ್ಮ ಚಟುವಟಿಕೆಗಳ ಮುಖಾಂತರ ಪರಿಚಯಿಸುತ್ತಿರುವ ವಸಂತ ಕುಷ್ಟಗಿಯವರು ಹುಟ್ಟಿದ್ದು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಲ್ಲಿ (ಬಾಗಲಕೋಟೆ ಜಿಲ್ಲೆ) ೧೯೩೬ ರ ಅಕ್ಟೋಬರ್ ೧೦ ರಂದು. ತಂದೆ ರಾಘವೇಂದ್ರ ಕುಷ್ಟಗಿಯವರು ನಿಜಾಂ ಆಡಳಿತದ ಜಿರಾಯತ್‌ (ವ್ಯವಸಾಯ) ಖಾತೆಯಲ್ಲಿ ಮದದ್‌ಗಾರರಾಗಿ (ಸಹಾಯಕರಾಗಿ) ಕೆಲಸ ಮಾಡಿದವರು, ತಾಯಿ ಸುಂದರಾಬಾಯಿ. ಯಾದಗಿರಿಯಲ್ಲಿ ಪ್ರಾರಂಭಿಕ ಶಿಕ್ಷಣ. ಉಪಾಧ್ಯಾಯರಾಗಿ ದೊರೆತ ಶಂಕರರಾವ್‌ ಕುಲಕರ್ಣಿಯವರ ಮೇಲ್ವಿಚಾರಣೆಯಲ್ಲಿ ಕಲಿತ ಉರ್ದುಭಾಷೆ. ‘ಮಕ್ಕಳ ಸ್ಕೂಲು ಮನೇಲಲ್ವೆ’ ಎನ್ನುವಂತೆ ತಾಯಿ ಸುಂದರಾಬಾಯಿಯವರಿಂದ ಕಲಿತ ಕನ್ನಡಭಾಷೆ. ತಂದೆಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಮಾಧ್ಯಮಿಕ ಶಾಲಾಭ್ಯಾಸ ಶಹಾಪೂರದಲ್ಲಿ. ಗುಲಬರ್ಗಾದ ನೂತನ ವಿದ್ಯಾಲಯದಲ್ಲಿ ಕಲಿತದ್ದು ಪ್ರೌಢಶಾಲೆಯವರೆಗೆ. ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಓದಿದ ನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಪಡೆದ ಎಂ.ಎ. ಪದವಿ. ಉಪನ್ಯಾಸಕರಾಗಿ ಸೇರಿದ್ದು ಬೀದರಿನ ಎಚ್‌.ಕೆ.ಇ. ಸೊಸೈಟಿಯ ಟಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ. ನಂತರ ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ ಕಲಬುರ್ಗಿಯ ಎಂ.ಎಸ್‌.ಐ. ಕಾಲೇಜು, ಮತ್ತು ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಲ್ಲದೆ ನಿವೃತ್ತಿಯ ನಂತರವೂ ಸ್ವಾಮಿ ರಾಮಾನಂದ ತೀರ್ಥ ಸಂಶೋಧನ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ. ಸ್ಥಾಪನೆಯಾದಾಗ (೧೯೮೦ – ೮೨) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ತಾಯಿ ಸುಂದರಾಬಾಯಿಯವರು ಅಕ್ಷರಾಭ್ಯಾಸ ಮಾಡಿಸಿದರೆ ತಂದೆ ರಾಘವೇಂದ್ರ ಕುಷ್ಟಗಿಯವರು ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ತಂದೆಯು ವರ್ಗವಾಗಿ ಹೋದೆಡೆಯಲ್ಲೆಲ್ಲಾ ಸಾಹಿತಿಗಳ ಸ್ನೇಹ ಸಂಪಾದಿಸಿ ನಡೆಸುತ್ತಿದ್ದ ಸಾಹಿತ್ಯಕೂಟದಲ್ಲಿ ಬೇಂದ್ರೆ, ಆಲೂರು ವೆಂಕಟರಾಯರು, ಗೋಕಾಕ್‌, ಸಿಂಪಿಲಿಂಗಣ್ಣ, ಮುಗಳಿ ಮುಂತಾದವರೆಲ್ಲರೂ ಹಾಜರಿರುತ್ತಿದ್ದರು, ಹಲವಾರು ನಾಟಕಗಳನ್ನು ಬರೆದುದಲ್ಲದೆ ರಂಗನಟರಾಗಿಯೂ ಪಾಲ್ಗೊಳ್ಳುತ್ತಿದ್ದರು – ಹೀಗೆ ಸಾಹಿತ್ಯದ ವಾತಾವರಣದಲ್ಲೇ ಬೆಳೆದ ವಸಂತ ಕುಷ್ಟಗಿಯವರು ‘ನನ್ನ ಮನೆ ಹಾಲಕೆನೆ’ ಎಂಬ ಕವಿತೆಯನ್ನು ಐದನೆಯ ತರಗತಿಯಲ್ಲಿದ್ದಾಗಲೇ ಬರೆದಿದ್ದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿದ್ದಾಗ ಕಾಲೇಜಿನ ಪತ್ರಿಕೆಗೂ ಬರೆಯ ತೊಡಗಿದ್ದರು. ಗಳಗನಾಥರಂತಹವರು ತಮ್ಮ ಪುಸ್ತಕಗಳನ್ನು ಗೋಣಿ ಚೀಲದಲ್ಲಿ ಹೊತ್ತು, ಮಾರಾಟಮಾಡಲು ಬರುತ್ತಿದ್ದುದನ್ನು ಕಂಡ ಕುಷ್ಟಗಿಯವರು ಈ ರೀತಿ ನನ್ನ ಪುಸ್ತಕವೂ ಮಾರಾಟವಾಗುವುದು ಯಾವಾಗ ಎಂದು ಯೋಚಿಸುತ್ತಿದ್ದವರು, ಪತ್ರಿಕೆಗಳಿಗೆ ಕವನಗಳನ್ನು ಬರೆಯತೊಡಗಿದ್ದು ಮೊದಲ ಕವನ ಸಂಕಲನ ‘ಭಾವದೀಪ್ತಿ’ ಪ್ರಕಟವಾದದ್ದು ೧೯೭೦ರಲ್ಲಿ. ನಂತರ ಬಂದ ಕವನ ಸಂಕಲನಗಳು ಹೊಸಹೆಜ್ಜೆ, ಗಾಂಧಾರಿಯ ಕರುಣೆ, ದಿಬ್ಬಣದ ಹಾಡು, ಬೆತ್ತಲೆಯ ಬಾನು, ಹಾರಯಿಕೆ ಮುಂತಾದ ೯ ಕವನ ಸಂಕಲನಗಳು. ನಂತರ ಗದ್ಯಸಾಹಿತ್ಯದಲ್ಲಿಯೂ ಹಲವಾರು ಕೃತಿ ರಚಿಸಿರುವ ವಸಂತ ಕುಷ್ಟಗಿಯವರು ಬರೆದ ಮೊದಲ ಕೃತಿ ಭಕ್ತಿಗೋಪುರ. ಮುಂಡರಗಿ ಭೀಮರಾಯ, ಮದನಮೋಹನ ಮಾಳವೀಯ, ಕಲಬುರಗಿಯ ಶ್ರೀ ಮಹಾದೇವಪ್ಪ ರಾಂಪುರೆ ಮುಂತಾದ ವ್ಯಕ್ತಿ ಚಿತ್ರ ಕೃತಿಗಳು; ಜಗನ್ನಾಥ ದಾಸರ ಹಿರಿಮೆ, ದಾಸ ಸಾಹಿತ್ಯದ ಹಾದಿಯಲ್ಲಿ, ವಿಜಯನಗರ ಸಾಮ್ರಾಜ್ಯದ ಪತನಾ ನಂತರದ ಹರಿದಾಸ ಸಾಹಿತ್ಯ ಮುಂತಾದ ದಾಸ ಸಾಹಿತ್ಯದ ಕೃತಿಗಳು; ಹೊತ್ತಿಗೆಗಳ ಸೊಗಡು, ಓದಿ ಪುಸ್ತಕ ಓದು, ಅಸಂಗತ ಸ್ವಗತ ಮೊದಲಾದ ಸಾಹಿತ್ಯ ಪರಿಚಯಾತ್ಮಕ ಕೃತಿಗಳೂ ಸೇರಿ ಸುಮಾರು ೨೦ ಕ್ಕೂ ಹೆಚ್ಚೂ ಕೃತಿಗಳನ್ನು ರಚಿಸಿದ್ದಾರೆ. ಕೃತಿ ಸಂಪಾದನೆಯ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಕುಷ್ಟಗಿಯವರು ಕಾವ್ಯಶ್ರೀ, ತೊದಲು, ಅಜ್ಜಿಹೇಳಿದ್ದು ಮೊಮ್ಮಕ್ಕಳು ಬರೆದದ್ದು ಶ್ರೀರಾಘವೇಂದ್ರ ಮಹಿಮೆ, ಕಂದಗಲ್‌ ಕೃತ ಶ್ರೀ ಚಂದ್ರಲಾ ಪರಮೇಶ್ವರಿ ನಾಟಕ ಮುಂತಾದ ವಿವಿಧ ಪ್ರಕಾರಗಳ ಸುಮಾರು ೧೫ ಕೃತಿಗಳ ಜೊತೆಗೆ ಇತರರೊಡನೆ ಸೇರಿ ಸುಮಾರು ೨೦ ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ. ತಮ್ಮದೇ ಬತೇರೇಶ ಪ್ರಕಾಶನದಡಿಯಲ್ಲಿ ತಮ್ಮದಲ್ಲದೆ, ಇತರ ಸಾಹಿತಿಗಳ ಕೃತಿಗಳೂ ಸೇರಿ ಸುಮಾರು ೨೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ, ಇತಿಹಾಸ ಅಕಾಡಮಿ, ಹೈದರಾಬಾದಿನ ಶಿಕ್ಷಣ ಸಂಸ್ಥೆ, ಕರ್ನಾಟಕ ವಿ.ವಿ.ದ ಸೆನೆಟ್‌, ಗುಲಬರ್ಗಾ ವಿ.ವಿ.ದ ಸೆನೆಟ್‌, ಕೋಲ್ಕತ್ತಾದ ಏಷಿಯಾಟಿಕ್‌ ಸೊಸೈಟಿ ಆಫ್‌ ಇಂಡಿಯಾ ಮುಂತಾದ ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ದುಡಿಯುತ್ತಿರುವ ಕುಷ್ಟಗಿಯವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ – ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳಲ್ಲದೆ ಬಾದಾಮಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಮೇದಕ್ಕಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷತೆ, ಕಲಬುರ್ಗಿ ಜಿಲ್ಲಾ ೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ಗೌರವ ಡಾಕ್ಟರೇಟ್‌ ಮುಂತಾದ ಗೌರವಗಳು ದೊರೆತಿವೆ. ಇವರ ಸಾಹಿತ್ಯ ಮತ್ತು ವ್ಯಕ್ತಿ ಪರಿಚಯದ ‘ಹಾರಯಿಕೆಯ ಕವಿ ಪ್ರೊ. ವಸಂತ ಕುಷ್ಟಗಿ’ ಕೃತಿಯು ೨೦೧೦ರಲ್ಲಿ ಪ್ರಕಟಗೊಂಡಿದೆ. ಪ್ರೊ. ವಸಂತ ಕುಷ್ಟಗಿಯವರ ಜೀವನ ಮತ್ತು ಕಾವ್ಯ: ಒಂದು ಅಧ್ಯಯನ ಸಂಪ್ರಬಂಧಕ್ಕೆ ಶ್ರೀಮತಿ ರೂತಾ ಎಸ್‌. ಪ್ರಭುಶಂಕರ ರವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್‌. ಪದವಿ ದೊರೆತಿದೆ.