Loading Events
  • This event has passed.

೮-೨-೧೯೧೪ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿನಲ್ಲಿ ಎಸ್.ವಿ. ಪರಮೇಶ್ವರ ಭಟ್ಟರ ಜನನ. ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಮ್ಮ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದುದು ತೂದೂರು ಕಟ್ಟೆ ಎಂಬ ಹಳ್ಳಿಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ತೀರ್ಥಹಳ್ಳಿ. ಕಮಗೋಡು ನರಸಿಂಹ ಶಾಸ್ತ್ರಿಗಳು ಇವರ ಗುರುಗಳು. ಇಂಟರ್ ಮೀಡಿಯೆಟ್ ಕಾಲೇಜು ಓದಿದ್ದು ಬೆಂಗಳೂರು. ನಂತರ ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ. ಪದವಿ. ಎಂ.ಎ. ಪರೀಕ್ಷೆಯಲ್ಲಿ  ಕೇಣಿ ಸಿದ್ದಪ್ಪ  ಸುವರ್ಣ ಪದಕವನ್ನು ಗಳಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ. ಶಿವಮೊಗ್ಗ, ತುಮಕೂರು ಕಾಲೇಜುಗಳಲ್ಲಿ ದುಡಿದು ಮತ್ತೆ ಮೈಸೂರಿಗೆ. ನಂತರ ಮಂಗಳೂರಿಗೆ ವರ್ಗಾವಣೆ. ೧೯೬೯ರಲ್ಲಿ ಮಂಗಳ ಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆ  ನಿರ್ದೇಶಕತ್ವ. ಬೆಂಗಳೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿದ್ದಾಗಲೇ ಕವನ ಬರೆಯುವ ಹುಚ್ಚು. ಅಂದಿನ ಸುಬೋಧ, ಕಲಾ, ಸರಸ್ವತಿ, ವಿಶ್ವವಾಣಿ ಪತ್ರಿಕೆಗಳಲ್ಲಿ  ಪ್ರಕಟ. ೧೯೪೦ರಲ್ಲಿ ಬೆಳಕು ಕಂಡ ೨೭ ಗೀತೆಗಳ ಸಂಕಲನ ‘ರಾಗಿಣಿ’ ಮೊಟ್ಟಮೊದಲ ಕಾವ್ಯಕೃತಿ. ನಂತರ ಪ್ರಕಟಿಸಿದ್ದು ೧೧ ಕವನಸಂಕಲನಗಳು. ೨ ವಚನ ಕೃತಿಗಳು ; ಗಾದೆ ಮತ್ತು ಒಗಟುಗಳ ಪುಸ್ತಕ-೩ ; ಸೀಳುನೋಟ, ಅಕ್ಕಮಹಾದೇವಿ, ಭಾವಗೀತೆ ಮುಂತಾದ ೭ ವಿಮರ್ಶಾ ಗ್ರಂಥಗಳು. ಹಾಸ್ಯ ಮುಕ್ತಕಗಳ ಮೂಲಕ ಕಾವ್ಯದಲ್ಲಿ ಹಾಸ್ಯದ ಹೊನಲು ಹರಿಸಿದರು. ಸುಮಾರು ೩೦ಕ್ಕೂ  ಮಿಕ್ಕು ಕೃತಿಯನ್ನು ಅನುವಾದಿಸಿದ್ದಾರೆ. ಅದರಲ್ಲಿ ಸಂಸ್ಕೃತದಿಂದ ಅನುವಾದಿಸಿದ್ದೇ ಹೆಚ್ಚು. ಕಾಳಿದಾಸನ ಸಮಗ್ರ ಕೃತಿಗಳನ್ನು ‘ಕಾಳಿದಾಸ ಮಹಾಸಂಪುಟ’ದಲ್ಲಿ ಅನುವಾದಿಸಿ ಕೊಟ್ಟಿದ್ದಾರೆ. ಕನ್ನಡ ಮತ್ತು ನಾನು, ಅರವತ್ತರ ಅರಳು ಮುಂತಾದ ೫ ಇತರ ಕೃತಿ ರಚಿಸಿದ್ದಾರೆ. ಮತ್ತೊಂದು ಮಹತ್ಕಾರ‍್ಯವೆಂದರೆ ಇವರ ಗುರುಗಳಾದ ಕಮಗೋಡು ನರಸಿಂಹ ಶಾಸ್ತ್ರಿಗಳು ಮುದ್ದಣನ ರಾಮಾಶ್ವಮೇಧವನ್ನು ಸಂಪಾದಿಸಿದರೆ, ಅದ್ಭುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕವನ್ನು ಇವರು ಸಂಪಾದಿಸಿ ವಿಸ್ತೃತ ಪೀಠಿಕೆ ಬರೆದಿದ್ದಾರೆ. ಹೆಂಡತಿಯ ಅನಾರೋಗ್ಯ, ಮಕ್ಕಳನ್ನು ಸಲಹುವ ಜವಾಬ್ದಾರಿ, ಮೇಜಿನ ಮೇಲೆ ಕೊನೆ ಮಗುವನ್ನು ಕೂಡಿಸಿ ಕಾಲೇಜಿನಲ್ಲಿ ಪಾಠ, ಮನೆಗೆ ಬಂದರೆ ಅಡುಗೆ ಭಟ್ಟರ ಕೆಲಸ. ಆದರೂ ಸಾಸಿದ್ದು ಅಸಾಧ್ಯ ಸಾಹಿತ್ಯ ಕೃಷಿ. ಬಂದ ಪ್ರಶಸ್ತಿಗಳು ಹಲವಾರು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕ.ಸಾ.ಪ.ದ. ಚಾವುಂಡರಾಯ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಮುಂತಾದುವು. ನಿಧನರಾದದ್ದು ೨೭-೧೦-೨೦೦೦.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಬಿ. ನೇಗಿನ ಹಾಳ – ೧೯೪೦ ಉಪ್ಪಂಗಳ ರಾಮಭಟ್ಟ – ೧೯೪೦ ಉದ್ಯಾವರ ಸುರೇಂದ್ರ ಆಚಾರ‍್ಯ – ೧೯೪೨ ಎಚ್.ಆರ್. ಲೀಲಾವತಿ – ೧೯೩೪ ಫರೀದಾ ಖಾಟೂನ್ – ೧೯೫೪