Loading Events
  • This event has passed.

೦೧.೦೬.೧೯೩೫ ೧೭.೦೮.೨೦೦೭ ಕವಿ ಹೃದಯದ ಚಿಂತಕ, ಪ್ರಬಂಧಕಾರ, ರಾಜಿಗೊಪ್ಪದ ನಿಷ್ಠುರವಾದಿ, ತನ್ನದೇ ಸಿದ್ಧಾಂತಕ್ಕಾಗಿ ಬದುಕಿದ ಹಠವಾದಿ ಸಣ್ಣಗುಡ್ಡಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಹೊಸಹಳ್ಳಿ ಎಂಬ ಗ್ರಾಮದಲ್ಲಿ ೧೯೩೫ರ ಜೂನ್ ೧ರಂದು ಅನಕ್ಷರಸ್ಥ ಕುಟುಂಬದಲ್ಲಿ. ತಂದೆ ಗೋವಿಂದಪ್ಪ, ತಾಯಿ ತಿಮ್ಮಕ್ಕ. ಕೂಲಿಮಠದಲ್ಲಿ ಅಕ್ಷರಾಭ್ಯಾಸ. ಬುಕ್ಕಾಪಟ್ಟಣದಲ್ಲಿ ಮಾಧ್ಯಮಿಕ ಶಾಲೆ. ಪ್ರೌಢಶಾಲೆಯ ನಂತರ ಇಂಟರ್‌ಮಿಡಿಯೇಟ್‌ವರೆಗೆ ತುಮಕೂರಿನಲ್ಲಿ. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಮೈಸೂರು ವಿಶ್ವವಿದ್ಯಾಲಯದಿಂದ. ತೀ.ನಂ.ಶ್ರೀ, ಡಿ.ಎಲ್.ಎನ್., ತ.ಸು.ಶಾ., ಎಸ್.ವಿ.ಪಿ., ಮುಂತಾದವರುಗಳ ಮಾರ್ಗದರ್ಶನ. ಬಾಲ್ಯದಿಂದಲೂ ಕಡುಬಡತನದ ಬದುಕು. ಕೂಲಿಕಾರರ ಕಠಿಣ ಜೀವನವನ್ನು ಹತ್ತಿರದಿಂದ ಕಂಡವರು. ವಿದ್ಯಾರ್ಥಿದೆಸೆಯಲ್ಲಿಯೇ ಸಮಾಜವಾದಿ ರಾಷ್ಟ್ರಗಳ ಪ್ರಗತಿಪರ ಲೇಖಕರ ಗ್ರಂಥಗಳನ್ನು ಓದಿ ಮಾಕ್ಸ್‌ವಾದದಿಂದ ಪ್ರಭಾವಿತರಾದವರು. ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭಿಸಿದ್ದು ತುಮಕೂರಿನ ಸರಕಾರಿ ಮೊದಲ ದರ್ಜೆ ಕಾಲೇಜಿನಲ್ಲಿ. ನಂತರ ರೀಡರಾಗಿ, ಪ್ರಾಧ್ಯಾಪಕರಾಗಿ ಬಡ್ತಿಹೊಂದಿದ ನಂತರ ಶಿವಮೊಗ್ಗ, ಕೋಲಾರ ಕಾಲೇಜುಗಳಲ್ಲಿಯೂ ಸೇವೆ ಸಲ್ಲಿಸಿ ಮತ್ತೆ ತುಮಕೂರು ಕಾಲೇಜಿನಲ್ಲಿದ್ದಾಗಲೇ ನಿವೃತ್ತಿ. ಅಪಾರ ಶಿಷ್ಯವರ್ಗವನ್ನು ಹೊಂದಿದ್ದ ಪ್ರೀತಿಯ ಮೇಸ್ಟ್ರು. ಪ್ರಕಟವಾದ ಮೊದಲ ಕವನ ಸಂಕಲನ ಅಭೀಪ್ಸೆ. ನಂತರ ವಸಂತಪದ – ಕನಸುಗಳು, ಭಿನ್ನ ಮೊದಲಾದ ಕವನ ಸಂಕಲನಗಳ ಪ್ರಕಟಣೆ. ಕವಿಯಾಗಿ ಸಾಹಿತ್ಯ ಕೃಷಿ ಪ್ರಾರಂಭಿಸಿದರೂ ಹೆಸರು ತಂದುಕೊಟ್ಟದ್ದು ‘ಏಕಾಂತ ಮತ್ತು ಇತರ ಪ್ರಬಂಧಗಳು’ ಮತ್ತು ‘ಹದ್ದು ಮತ್ತು ಇತರ ಪ್ರಬಂಧಗಳು’ ಪ್ರಬಂಧ ಸಂಕಲನಗಳಿಂದ ಪ್ರಬಂಧಕಾರರಾಗಿ. ಎ.ಎನ್. ಮೂರ್ತಿರಾವ್, ತೀ.ನಂ.ಶ್ರೀ., ದ.ಬಾ. ಕುಲರ್ಣಿ, ರಾ.ಕು., ಪಾ.ವೆಂ. ಆಚಾರ್ಯ ಮುಂತಾದವರ ಪರಂಪರೆಯನ್ನು ಮುಂದುವರೆಸುವಂತಹ ಪ್ರಬಂಧಗಳ ರಚನೆ. ೧೯೯೫-೯೬ನೆಯ ಸಾಲಿನ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಬಿ.ಎ., ಬಿ.ಎಸ್ಸಿ., ಬಿ.ಕಾಂ. ತರಗತಿಗಳಿಗೆ ‘ಏಕಾಂತ ಮತ್ತು ಇತರ ಪ್ರಬಂಧಗಳು’ ಪಠ್ಯವಾಗಿ ಆಯ್ಕೆ. ಇವರ ಇತರ ಕೃತಿಗಳೆಂದರೆ ಭಾಸಮಹಾಕವಿಯ ನಾಟಕದ ರೂಪಾಂತರವಾದ ‘ಪ್ರತಿಮಾ’, ಸಂಪಾದಿತ ಪ್ರೇಮಗೀತೆಗಳ ಸಂಕಲನ ‘ಪಾರಿಜಾತ’, ತಮ್ಮ ನೆಚ್ಚಿನ ಗುರುಗಳ ಕುರಿತು ಜೀವನ, ವ್ಯಕ್ತಿತ್ವ ಮತ್ತು ಕೃತಿ ಸಮೀಕ್ಷೆ ನಡೆಸಿರುವ ‘ತೀ.ನಂ. ಶ್ರೀಕಂಠಯ್ಯ’, ಸಂಪಾದಿತ ವೈಚಾರಿಕ ಲೇಖನಗಳ ಸಂಗ್ರಹ ‘ವಿಚಾರ ಸಾಹಿತ್ಯ’ ಮತ್ತು ಅನುವಾದಿತ ಕೃತಿ ‘ರಾಜ್ಯಶಾಸ್ತ್ರ’. ಸಂಪಾದಿತ ಕವನ ಸಂಗ್ರಹ ‘ಕಾವ್ಯಾಂಜಲಿ’. ಬರೆದದ್ದು ಕಡಿಮೆ ಎನಿಸಿದರೂ ಸತ್ವಪೂರ್ಣ ಕೃತಿಗಳಾದುದರಿಂದಲೇ ‘ಅಭೀಪ್ಸೆ’ ಕವನ ಸಂಕಲನ ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ (೧೯೬೨), ‘ಏಕಾಂತ ಮತ್ತು ಇತರ ಪ್ರಬಂಧಗಳು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೩), ‘ಹದ್ದು ಮತ್ತು ಇತರ ಪ್ರಬಂಧಗಳು’ ಕೃತಿಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೮) ಮತ್ತು ೨೦೦೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಜೊತೆಗೆ ಪಾವಗಡ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವ. ಕವನ ಸಂಕಲನಗಳು ಹಾಗೂ ಪ್ರಬಂಧ ಸಂಕಲನಗಳು ಮರುಮುದ್ರಣಗೊಂಡಿವೆ. ಓಲೈಸುವ, ರಾಜಿಗೊಪ್ಪದ ಗುಣಗಳಿದ್ದುದರಿಂದಲೇ ಹಲವಾರು ಪ್ರಶಸ್ತಿಗಳಿಂದ ವಂಚಿತರಾಗಿದಷ್ಟೇ ಅಲ್ಲದೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಯಿಂದಲೂ ವಂಚಿತರಾಗಿದ್ದರು. ತಮ್ಮ ಬದುಕನ್ನು ಆದರ್ಶದ ನೆಲೆಯಲ್ಲಿ ಕಂಡಿದ್ದ ಸಣ್ಣಗುಡ್ಡಯ್ಯನವರು ಮಾರ್ಕ್ಸ್‌ವಾದದ ಮೇಲಿನ ನಿಷ್ಠೆಯಿಂದ ಮಗಳಿಗೆ ‘ಸಮತಾ’ ಎಂದು, ನಾಮಕರಣ ಮಾಡಿದ್ದರೆ ಗುರುಭಕ್ತಿಯ ದ್ಯೋತಕವಾಗಿ ಮಗನಿಗೆ ಇಟ್ಟ ಹೆಸರು ‘ಶ್ರೀತೀರ್ಥ’. ಆದರ್ಶಪ್ರಾಯರಾಗಿದ್ದು ತುಮಕೂರಿನ ಸಮುದಾಯ, ವಿಜ್ಞಾನಕೇಂದ್ರ, ಬಂಡಾಯ ಸಾಹಿತ್ಯ ಸಂಘಟನೆ ಮೊದಲಾದ ಸಾಂಸ್ಕೃತಿಕ ಸಂಘಟನೆಗಳ ಕೇಂದ್ರವ್ಯಕ್ತಿಯಾಗಿ ಶ್ರಮಿಸುತ್ತಿದ್ದ ಸಣ್ಣಗುಡ್ಡಯ್ಯನವರು ಸಾಂಸ್ಕೃತಿಕ ವಲಯದಿಂದ ದೂರವಾದದ್ದು ೨೦೦೭ರ ಸೆಪ್ಟೆಂಬರ್ ೧೭ರಂದು.