Loading Events
  • This event has passed.

೨೧-೭-೧೯೩೭ ಸಾಹಿತ್ಯ ವಿಮರ್ಶಕ, ಕಲಾಪ್ರೇಮಿ, ಸಂಗೀತ ಪ್ರಿಯರಾದ ಕೃಷ್ಣಯ್ಯನವರು ಹುಟ್ಟಿದ್ದು ಮೈಸೂರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ವಿದ್ಯಾಭ್ಯಾಸ ಮೈಸೂರಿನಲ್ಲೇ. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್) ಮತ್ತು ಎಂ.ಎ. (ಕನ್ನಡ) ಪದವಿ. ಪದವಿ ಗಳಿಸಿದ ನಂತರ ಉದ್ಯೋಗಕ್ಕೆ ಸೇರಿದ್ದು ಅಧ್ಯಾಪಕರಾಗಿ. ಬೆಂಗಳೂರು, ಕೋಲಾರ, ಮಂಗಳೂರು, ತುಮಕೂರು, ಮಂಡ್ಯ ಮುಂತಾದೆಡೆ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ ಬೋಧನಾ ಕಾರ‍್ಯ ನಿರ್ವಹಣೆ. ಚನ್ನಪಟ್ಟಣದ ಕುವೆಂಪು ಕಾಲೇಜಿನ ಪ್ರಿನ್ಸಿಪಾಲರಾಗಿ, ಮಾಗಡಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಕೆಲಕಾಲ ಸಲ್ಲಿಸಿದ ಸೇವೆ. ಬೆಂಗಳೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರಾಗಿ ನಿವೃತ್ತಿ. ಇದರ ಜೊತೆಗೆ ನಿಭಾಯಿಸಿದ ಹಲವಾರು ಜವಾಬ್ದಾರಿಗಳು. ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ದೆಹಲಿಯ ಸಂಸ್ಕೃತಿ ಇಲಾಖೆಯ ಸ್ಕಾಲರ್‌ಷಿಪ್/ಫೆಲೊಷಿಪ್ ಆಯ್ಕೆ ಸಮಿತಿ ಸದಸ್ಯರಾಗಿ, ವಿಶ್ವವಿದ್ಯಾಲಯದ ಪಠ್ಯಗ್ರಂಥ ಸಮಿತಿಯಲ್ಲಿ ಪಿ.ಯು.ಸಿ. ಪಠ್ಯ ಸಮಿತಿಯಲ್ಲಿ ಸಲ್ಲಿಸಿದ ಸೇವೆ. ಕರ್ನಾಟಕ ಕಲಾ ವಾರ್ತೆ, ಕರ್ನಾಟಕ ಲಲಿತ ಅಕಾಡಮಿಯ ಪತ್ರಿಕೆಗಳಿಗೆ ಗೌರವ ಸಂಪಾದಕರಾಗಿ, ಕಲಾ ಪಂಥಮಾಲೆ, ಎಕ್ಸ್‌ಪ್ರೆಷನಿಸಂ, ಇಂಪ್ರೆಷನಿಸಂ ಗ್ರಂಥಗಳಿಗೆ ಪ್ರಧಾನ ಸಂಪಾದಕರಾಗಿ ಸಲ್ಲಿಸಿದ ಅಪಾರ ಸೇವೆ. ಪ್ರಭಾವಶಾಲಿ ಅಧ್ಯಾಪಕರಾದ ಕೃಷ್ಣಯ್ಯನವರು ಶಿಸ್ತಿನ ಪ್ರವಚನಕಾರರು. ಸಿದ್ಧತೆಯಿಲ್ಲದೆ ತರಗತಿಗೆ ಹೋದವರಲ್ಲ. ವ್ಯಾಖ್ಯಾನಿಸುವ ರೀತಿ, ಚಿಂತನೆಗೆ ಹಚ್ಚುವ ಕ್ರಮದಿಂದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಬರೆದದ್ದು ಕಡಿಮೆ. ಶಿಸ್ತಿನ ಅಧ್ಯಯನ, ಕಲಾವಿಮರ್ಶೆ, ಸಾಹಿತ್ಯ ವಿಮರ್ಶೆಯ ಸಿಂಹಪಾಲು. ಕಲಾಲೋಕದ ದಿಗ್ಗಜಗಳ ರಚನೆಯ ತಲಸ್ಪರ್ಶಿ ಇತಿಹಾಸದ ಅಜಂತ ಎಲ್ಲೋರ, ರೂಪಶಿಲ್ಪಿ ಬಸವಯ್ಯ, ಎಚ್.ಎನ್. ಕುಲಕರ್ಣಿ ಮುಂತಾದವರು ಬಗ್ಗೆ ರಚಿಸಿದ ಕೃತಿಗಳು. ಕಲಾವಿಮರ್ಶಾ ಕೃತಿಗಳು-ಶೃಂಗಾರ ಲಹರಿ, ಎಂ.ಆರ್. ಹಡಪದ್. ಜೀವಚರಿತ್ರೆ-‘ತ್ಯಾಗಯೋಗಿ’ ಕನಕಪುರದ ಎಸ್.ಕರಿಯಪ್ಪ, ಎಚ್.ಕೆ. ವೀರಣ್ಣಗೌಡರು. ಸಾಹಿತ್ಯವಿಮರ್ಶೆ-ಕಾವ್ಯಭಾಷೆ, ಸಾಹಿತ್ಯ ಕಲೆ. ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ನಾಟಕ ಮತ್ತು ಸೌಂದರ‍್ಯಪ್ರಜ್ಞೆ, ನಿಟ್ಟೂರು ನೂರರ ನೆನಪು ಮುಂತಾದ ಗ್ರಂಥಗಳು. ಸಂಪಾದಿತ-ರನ್ನನ ಅಜಿತ ಪುರಾಣ ಸಗ್ರಹ, ಬಿರಿಮೊಗ್ಗು (ಪ್ರಬಂಧ), ಹೊಳಪು-ಝಳಪು (ಕವನ), ಕಾಲು ಶತಮಾನ ಕಂಡ ಕನ್ನಡ ಪತ್ರಿಕೆಗಳು (ಪತ್ರಿಕಾ ಅಕಾಡಮಿ), ಕಲೆ ಮತ್ತು ರಸಸ್ವಾದನೆ, ಸಾಹಿತ್ಯ ಮತ್ತು ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ, ಸಾಲುದೀಪಗಳು, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಹಳೆಯ ಗದ್ಯ ಸಾಹಿತ್ಯ, ಸುವಿದ್ಯಾ, ಬೆಂಗಳೂರಿನ ಕೆಂಪೇಗೌಡರ ವಂಶಸ್ಥರು, ಮೂರ್ತಾಮೂರ್ತ, ಕುವೆಂಪು ಸಾಹಿತ್ಯ-ಚಿತ್ರ ಸಂಪುಟ, ಬೆಂಗಳೂರು ದರ್ಶನ ಮುಂತಾದ ಮೂವತ್ತು ಕೃತಿ ಪ್ರಕಟಿತ. ಶೃಂಗಾರ ಲಹರಿಗೆ ಲಲಿತಕಲಾ ಅಕಾಡಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಂದ ಪುರಸ್ಕಾರಗಳು.   ಇದೇ ದಿನ ಹುಟ್ಟಿದ ಸಾಹಿತಿ : ನಾ. ಸು. ಭರತನಹಳ್ಳಿ – ೧೯೩೬